ಸೋಮವಾರಪೇಟೆ, ಫೆ. 10: ದೇಶೀಯ ಕ್ರೀಡೆ ಕಬಡ್ಡಿಯ ಅಸಲಿ ಆಟಕ್ಕೆ ಸೋಮವಾರಪೇಟೆಯ ಮೈದಾನ ಸಿದ್ಧಗೊಳ್ಳುತ್ತಿದ್ದು, ಸುಮಾರು 3ಸಾವಿರ ಮಂದಿ ಕುಳಿತುಕೊಳ್ಳಬಹುದಾದ ಬೃಹತ್ ಗ್ಯಾಲರಿ ನಿರ್ಮಾಣ ಕಾರ್ಯ ಭರದಿಂದ ಸಾಗುತ್ತಿದೆ. ತಾ. 13 ಮತ್ತು 14ರಂದು ಕಬಡ್ಡಿ ರೋಚಕ ಪಂದ್ಯಾಟಗಳು ಜರುಗಲಿದ್ದು, ಪ್ರೋ ಕಬಡ್ಡಿಯಲ್ಲಿ ಭಾಗವಹಿಸಿರುವ ಫೆವರೇಟ್ ಆಟಗಾರರು ಸೋಮವಾರಪೇಟೆಯಲ್ಲಿ ಅಖಾಡಕ್ಕಿಳಿಯಲಿದ್ದಾರೆ.

ಸೋಮವಾರಪೇಟೆ ತಾಲೂಕು ಒಕ್ಕಲಿಗರ ಯುವ ವೇದಿಕೆಯಿಂದ ಎರಡನೇ ವರ್ಷದ ಕಬಡ್ಡಿ ಪಂದ್ಯಾಟಕ್ಕೆ ದಿನಗಣನೆ ಆರಂಭವಾಗಿದೆ. ಪ್ರಥಮ ವರ್ಷದ ಪಂದ್ಯಾಟದ ಯಶಸ್ಸಿನ ಉತ್ಸಾಹದಲ್ಲಿರುವ ಯುವಕರ ತಂಡ ಈ ವರ್ಷದ ಪಂದ್ಯಾಟವನ್ನೂ ಇನ್ನಷ್ಟು ಆಕರ್ಷಣೀಯವಾಗಿಸಲು ಇನ್ನಿಲ್ಲದ ಕೆಲಸ ಕಾರ್ಯಗಳಲ್ಲಿ ತೊಡಗಿಸಿಕೊಂಡಿದ್ದಾರೆ.

ಯುವ ವೇದಿಕೆಯ ಪದಾಧಿಕಾರಿಗಳು ಜಿಲ್ಲೆ ಸೇರಿದಂತೆ ಹೊರ ಜಿಲ್ಲೆಗಳಿಗೂ ತೆರಳಿ ಪಂದ್ಯಾಟದ ಯಶಸ್ಸಿಗೆ ಸಹಕಾರ ಕೋರಿದ್ದು, ಸುಮಾರು 16 ರಿಂದ 20 ಲಕ್ಷ ವೆಚ್ಚದಲ್ಲಿ ಪಂದ್ಯಾಟ ಆಯೋಜಿಸಿದ್ದಾರೆ. ಕಬಡ್ಡಿಯ ಅಸಲಿಯತ್ತನ್ನು ತೋರಿಸಲು ಇಲ್ಲಿನ ಜಿಎಂಪಿ ಶಾಲೆಯ ಮೈದಾನವನ್ನು ಸಜ್ಜುಗೊಳಿಸಲಾಗಿದ್ದು, ಕಬಡ್ಡಿ ಕೋರ್ಟ್‍ನ ಸುತ್ತ ಸುಮಾರು 3 ಸಾವಿರ ಮಂದಿ ಕುಳಿತುಕೊಳ್ಳಲು ಬೃಹತ್ ಗ್ಯಾಲರಿ ನಿರ್ಮಾಣ ಮಾಡಲಾಗುತ್ತಿದೆ.

ಕಳೆದ ಸಾಲಿನ ಪಂದ್ಯಾಟ ವೀಕ್ಷಿಸಲು ಕೊಡಗು ಜಿಲ್ಲೆ ಮಾತ್ರವಲ್ಲದೆ ಸುತ್ತಮುತ್ತಲಿನ ಜಿಲ್ಲೆಗಳಿಂದಲೂ ಕಬಡ್ಡಿ ಪ್ರೇಮಿಗಳು ಸಾವಿರಾರು ಸಂಖ್ಯೆಯಲ್ಲಿ ಆಗಮಿಸಿದ್ದು, ಹೊನಲುಬೆಳಕಿನ ಪಂದ್ಯಾಟಕ್ಕೆ ಕ್ರೀಡಾಪ್ರೇಮಿಗಳಿಂದ ಹೆಚ್ಚಿನ ಉತ್ಸಾಹ ಕಂಡುಬರುತ್ತಿದೆ. ಪಂದ್ಯಾಟದ ಯಶಸ್ಸಿಗೆ ಒಕ್ಕಲಿಗರ ಯುವ ವೇದಿಕೆ ಅಧ್ಯಕ್ಷ, ವಕೀಲ, ಜಿ.ಪಂ. ಸದಸ್ಯರೂ ಆಗಿರುವ ಬಿ.ಜೆ. ದೀಪಕ್ ಸೇರಿದಂತೆ ಪದಾಧಿಕಾರಿಗಳ ತಂಡ ಹಗಲಿರುಳೂ ಶ್ರಮಿಸುತ್ತಿದೆ.

ಎರಡನೇ ವರ್ಷದ ಹೊನಲು ಬೆಳಕಿನ ಕಬಡ್ಡಿ ಪಂದ್ಯಾಟದಲ್ಲಿ ಕರ್ನಾಟಕ ರಾಜ್ಯ ಕಬಡ್ಡಿ ಅಮೆಚೂರ್ ಅಸೋಸಿಯೇಷನ್‍ನಡಿ ನೋಂದಾಯಿಸಲ್ಪಟ್ಟ 18 ತಂಡಗಳು ಹಾಗೂ ಕೊಡಗಿನ 6 ತಂಡಗಳು ಪಾಲ್ಗೊಳ್ಳಲಿದ್ದು, ಪ್ರೋ ಕಬಡ್ಡಿ ಆಟಗಾರರಾದ ಸುಖೇಶ್ ಹೆಗ್ಡೆ, ಪ್ರಶಾಂತ್ ರೈ, ರಾಜ್‍ಗುರು, ಶಬ್ಬೀರ್ ಬಾಬು ಸೇರಿದಂತೆ ರಾಜ್ಯದ ವಿವಿಧೆಡೆಗಳಿಂದ ಕಬಡ್ಡಿ ಪಟುಗಳು ಪಂದ್ಯಾಟದಲ್ಲಿ ಭಾಗವಹಿಸಲಿದ್ದಾರೆ.

ತಾ. 13ರಂದು ಅಪರಾಹ್ನ 3 ಗಂಟೆಗೆ ಪಂದ್ಯಾವಳಿ ಉದ್ಘಾಟನೆಗೊಳ್ಳಲಿದೆ. ಪಂದ್ಯಾಟದಲ್ಲಿ ಪ್ರಥಮ ಬಹುಮಾನವಾಗಿ ರೂ. 1ಲಕ್ಷ ನಗದು ಹಾಗೂ ಆಕರ್ಷಕ ಟ್ರೋಫಿ, ದ್ವಿತೀಯ ಬಹುಮಾನವಾಗಿ 60 ಸಾವಿರ ನಗದು ಮತ್ತು ಟ್ರೋಫಿ, 3 ಮತ್ತು 4ನೇ ಬಹುಮಾನವಾಗಿ 30 ಸಾವಿರ ನಗದು ಮತ್ತು ಟ್ರೋಫಿ ಸೇರಿದಂತೆ ವೈಯಕ್ತಿಕ ವಿಭಾಗದಲ್ಲೂ ಪ್ರಶಸ್ತಿಯನ್ನು ನೀಡಲಾಗುತ್ತಿದೆ. ಸೋಮವಾರಪೇಟೆ ಮಟ್ಟಿಗೆ ಬೃಹತ್ ಮೊತ್ತದ ಬಹುಮಾನ ಹೊಂದಿರುವ ಕಬಡ್ಡಿ ಪಂದ್ಯಾವಳಿ ಎಂಬ ಕೀರ್ತಿಗೆ ಈ ಪಂದ್ಯಾಟ ಭಾಜನವಾಗಲಿದೆ.

ಈ ಮೊದಲು ತಾ. 19 ಮತ್ತು 20ರಂದು ಪಂದ್ಯಾಟ ಆಯೋಜಿಸಲು ಉದ್ದೇಶಿಸಲಾಗಿತ್ತು. ಆ ದಿನಗಳಂದು ಅಮೆಚೂರ್ ವತಿಯಿಂದ ಕಬಡ್ಡಿ ಕ್ಯಾಂಪ್ ನಡೆಯಲಿದ್ದು, ಈ ಹಿನ್ನೆಲೆ ಮುಂಚಿತವಾಗಿಯೇ ತಾ. 13 ಮತ್ತು 14ರಂದು ಪಂದ್ಯಾಟ ಆಯೋಜಿಸಲಾಗಿದೆ. ಸಂಸದ ಪ್ರತಾಪ್ ಸಿಂಹ ಅವರು ಮೈದಾನದಲ್ಲಿ ಗ್ಯಾಲರಿ ನಿರ್ಮಾಣಕ್ಕೆ ಯುವ ವೇದಿಕೆಗೆ 10 ಲಕ್ಷ ಅನುದಾನ ಒದಗಿಸಿದ್ದು, ಕಾಮಗಾರಿ ಬಹುತೇಕ ಪೂರ್ಣಗೊಂಡಿದೆ.

ಒಟ್ಟಾರೆ ಸೋಮವಾರಪೇಟೆಯಲ್ಲಿ ಕಳೆದ 30 ವರ್ಷಗಳಿಂದ ಇಂದಿರಾಗಾಂಧಿ ಅಭಿಮಾನಿಗಳ ಸಂಘದವರು ಕಬಡ್ಡಿ ಪಂದ್ಯಾವಳಿ ಆಯೋಜಿಸಿಕೊಂಡು ಬಂದಿದ್ದು, ಈ ಹಿಂದಿನ 10 ವರ್ಷಗಳಿಂದ ಕಬಡ್ಡಿಯ ಬಗ್ಗೆ ಅಷ್ಟೊಂದು ಉತ್ಸಾಹ ಕಂಡುಬರುತ್ತಿರಲಿಲ್ಲ. ಕಳೆದ ಸಾಲಿನಿಂದ ಯುವ ವೇದಿಕೆಯಿಂದ ಆಯೋಜಿಸುತ್ತಿರುವ ಕಬಡ್ಡಿ ಪಂದ್ಯಾಟಕ್ಕೆ ಸಾವಿರಾರು ಕಬಡ್ಡಿ ಪ್ರೇಮಿಗಳು ಆಗಮಿಸುತ್ತಿದ್ದು, ಸದಸ್ಯರ ಉತ್ಸಾಹವನ್ನು ಇಮ್ಮಡಿಗೊಳಿಸಿದೆ.

ಯುವ ವೇದಿಕೆಯ ಉಪಾಧ್ಯಕ್ಷ ನತೀಶ್ ಮಂದಣ್ಣ, ಖಜಾಂಚಿ ಎಂ.ಪಿ. ರವಿ, ಕಾರ್ಯದರ್ಶಿ ದಯಾನಂದ್, ಸಂಘಟನಾ ಕಾರ್ಯದರ್ಶಿ ಪ್ರಸಿ, ನಿರ್ದೇಶಕರಾದ ವಸಂತ್, ಸುರೇಶ್, ದರ್ಶನ್ ಸೇರಿದಂತೆ ಯುವ ವೇದಿಕೆಯ ಎಲ್ಲಾ ಪದಾಧಿಕಾರಿಗಳೂ ಪಂದ್ಯಾಟದ ಯಶಸ್ಸಿಗೆ ಶ್ರಮಿಸುತ್ತಿದ್ದಾರೆ.

- ವಿಜಯ್ ಹಾನಗಲ್