ಮಡಿಕೇರಿ, ಫೆ. 11: ಕುಶಾಲನಗರ ಎಪಿಎಂಸಿ ಅಧ್ಯಕ್ಷ - ಉಪಾಧ್ಯಕ್ಷ ಚುನಾವಣೆಯಲ್ಲಿ ರಾಷ್ಟ್ರೀಯ ಪಕ್ಷಗಳಾಗಿರುವ ಕಾಂಗ್ರೆಸ್ ಹಾಗೂ ಬಿಜೆಪಿಯ ನಿಜವಾದ ಮುಖ ಕಳಚಿಕೊಂಡಂತಾಗಿದೆ ಎಂದು ಜೆಡಿಎಸ್ ಜಿಲ್ಲಾಧ್ಯಕ್ಷ ಮೇರಿಯಂಡ ಸಂಕೇತ್ ಪೂವಯ್ಯ ಹೇಳಿದ್ದಾರೆ.ಚುನಾವಣೆ ಸಂದರ್ಭ ಕಾಂಗ್ರೆಸ್ ಹಾಗೂ ಬಿಜೆಪಿ ಮೈತ್ರಿ ಮಾಡಿಕೊಂಡಿದೆ. ಗ್ರಾ.ಪಂ.ನಿಂದ ಹಿಡಿದು ಲೋಕಸಭೆವರೆಗೆ ಎಲ್ಲಾ ಚುನಾವಣೆ ಸಂದರ್ಭದಲ್ಲೂ ಬದ್ಧ ವೈರಿಗಳಾಗಿರುವ ಈ ಎರಡು ರಾಷ್ಟ್ರೀಯ ಪಕ್ಷಗಳು ಎಪಿಎಂಸಿ ಚುನಾವಣೆಯಲ್ಲಿ ಒಳ ಒಪ್ಪಂದ ಮಾಡಿಕೊಂಡಿದೆ. ಸೈದ್ಧಾಂತಿಕ ನೆಲೆಯಿಲ್ಲದ ಪಕ್ಷಗಳ ನಿಜವಾದ ಬಣ್ಣ ಇದೀಗ ಜನತೆಗೆ ಅರಿವಾದಂತಾಗಿದೆ. ಎಪಿಎಂಸಿ ರೈತರ ಹಿತಕಾಯಬೇಕಾದ ಸಂಸ್ಥೆಯಾಗಿದ್ದು, ಇದರಲ್ಲಿ ಕೀಳು ರಾಜಕೀಯ ಪ್ರದರ್ಶನ ತಂಡವಾಗಿದೆ. ಜೆಡಿಎಸ್ ಪಕ್ಷ ರೈತರ ಬೆನ್ನೆಲುಬಾಗಿದ್ದು, ಈ ಬಾರಿ ರೈತರು ಜೆಡಿಎಸ್ಗೆ ಬಹುಮತ ನೀಡಿದ್ದರೂ, ಇದೀಗ ರಾಷ್ಟ್ರೀಯ ಪಕ್ಷಗಳ ಕುತಂತ್ರದಿಂದಾಗಿ ಹಿನ್ನಡೆಯಾಗಿದೆ. ರಾಜ್ಯದಲ್ಲಿ ಕಾಂಗ್ರೆಸ್ ಸರಕಾರ ಬಂದ ನಂತರ 2 ಸಾವಿರ ಮಂದಿ ರೈತರ ಆತ್ಮಹತ್ಯೆಯಾಗಿದ್ದು, ಈ ಬಗ್ಗೆ ಸರಕಾರಕ್ಕೆ ಕಾಳಜಿ ಇಲ್ಲದಂತಾಗಿದೆ. ಮುಂದಿನ ದಿನಗಳಲ್ಲಿ ರಾಜ್ಯದಲ್ಲಿ ಜೆಡಿಎಸ್ ಅಧಿಕಾರಕ್ಕೆ ಬರಲಿದ್ದು, ಮಾಜಿ ಮುಖ್ಯಮಂತ್ರಿ ಹೆಚ್.ಡಿ. ಕುಮಾರಸ್ವಾಮಿ ಅವರ ಆಡಳಿತ ರೈತರ ಪರವಾಗಿ ಬರಲಿದೆ ಎಂದು ಅವರು ಹೇಳಿದರು. ಈ ಬಾರಿಯ ಚುನಾವಣೆಯಲ್ಲಿ ಈ ಎರಡೂ ಪಕ್ಷಗಳಿಗೆ ತಕ್ಕಪಾಠ ಕಲಿಸಲಿದ್ದಾರೆಂದು ಅವರು ಹೇಳಿದರು.