ಸೋಮವಾರಪೇಟೆ, ಫೆ. 11: ತಾಲೂಕಿನ ಐಗೂರು ಗ್ರಾಮ ಪಂಚಾಯಿತಿ ವ್ಯಾಪ್ತಿಗೆ ಒಳಪಡುವ ಸಜ್ಜಳ್ಳಿ ಗಿರಿಜನ ಹಾಡಿಯಲ್ಲಿ ಕುಡಿಯುವ ನೀರಿನ ಸಮಸ್ಯೆ ಬಗೆಹರಿಸಲು ಜಿ.ಪಂ. ಮುಂದಾಗಿದ್ದು, ಹಾಡಿಯಲ್ಲಿ ನೂತನ ಬೋರ್ವೆಲ್ ಕೊರೆಯುವ ಕಾಮಗಾರಿಗೆ ಜಿ.ಪಂ. ಸದಸ್ಯೆ ಪೂರ್ಣಿಮಾ ಗೋಪಾಲ್ ಚಾಲನೆ ನೀಡಿದರು.
ಕಳೆದ ಅನೇಕ ಸಮಯಗಳಿಂದ ಹಳೆಯ ಬೋರ್ವೆಲ್ ದುಸ್ಥಿತಿಗೆ ತಲುಪಿದ್ದು, ಹಾಡಿವಾಸಿಗಳು ಕುಡಿಯುವ ನೀರಿಗೆ ತತ್ವಾರ ಪಡಬೇಕಾದ ಪರಿಸ್ಥಿತಿ ನಿರ್ಮಾಣವಾಗಿತ್ತು. ಈ ಬಗ್ಗೆ ಗಮನಹರಿಸಿದ ಜಿಲ್ಲಾ ಪಂಚಾಯಿತಿ ಸದಸ್ಯೆ ಪೂರ್ಣಿಮಾ ಗೋಪಾಲ್ ಅವರು, ರೂ. 1ಲಕ್ಷ ಅನುದಾನ ಒದಗಿಸಿದ್ದು, ಅದರಂತೆ ನೂತನ ಬೋರ್ವೆಲ್ ಕಾಮಗಾರಿ ಪ್ರಾರಂಭವಾಗಿದೆ.
ಇದರೊಂದಿಗೆ ಹಳೆಯ ಪೈಪ್ಲೈನ್ ದುರಸ್ತಿಗೊಳಿಸಿ ಹಾಡಿಗೆ ಶೀಘ್ರದಲ್ಲೇ ಕುಡಿಯುವ ನೀರಿನ ಸಂಪರ್ಕ ಕಲ್ಪಿಸಲಾಗುವದು ಎಂದು ಜಿ.ಪಂ. ಸದಸ್ಯೆ ಪೂರ್ಣಿಮಾ ತಿಳಿಸಿದರು. ಈ ಸಂದರ್ಭ ತಾ.ಪಂ. ಸದಸ್ಯೆ ಸಬಿತಾ ಚನ್ನಕೇಶವ, ಗ್ರಾಮದ ಪ್ರಮುಖರಾದ ಮಚ್ಚಂಡ ಪ್ರಕಾಶ್, ವಿಜಯಕುಮಾರ್, ಹಾಡಿ ನಿವಾಸಿಗಳಾದ ನಿಂಗ, ಗಣೇಶ್ ಸೇರಿದಂತೆ ಇತರರು ಉಪಸ್ಥಿತರಿದ್ದರು.