ಮೂರ್ನಾಡು, ಫೆ. 11: ಮಡಿಕೇರಿ ತಾಲೂಕು ಬಿಜೆಪಿ ಕಾರ್ಯಕರ್ತರ ಸಭೆ ಇಲ್ಲಿನ ಕೊಡವ ಸಮಾಜದಲ್ಲಿ ನಡೆಯಿತು. ಶಾಸಕ ಅಪ್ಪಚ್ಚು ರಂಜನ್ ಸಭೆಯನ್ನು ಉದ್ಘಾಟಿಸಿದರು. ಬಳಿಕ ಮಾತನಾಡಿದ ಅವರು ಸಮಪಾಲು ಸಮಬಾಳು ತತ್ತ್ವದಡಿಯಲ್ಲಿ ಕೇಂದ್ರ ಸರ್ಕಾರ ಉತ್ತಮ ಬಜೆಟ್ ಮಂಡಿಸಿದ್ದು ರೈತಾಪಿ ವರ್ಗದವರಿಗೆ, ಬಡಜನತೆಗೆ ಅನುಕೂಲಕರವಾಗಿದೆ. ಬಿಜೆಪಿ ಪಕ್ಷ ಅತಿದೊಡ್ಡ ಸದಸ್ಯತ್ವ ಹೊಂದಿರುವ ಪಕ್ಷವಾಗಿದೆ. ರಾಜ್ಯ ಸರ್ಕಾರ ಪೊಳ್ಳು ಭರವಸೆಗಳನ್ನು ನೀಡುತ್ತಾ ಆಡಳಿತ ನಡೆಸುತ್ತಿದೆ. ಕಾಂಗ್ರೆಸ್ ಸರ್ಕಾರ ಭಷ್ಟ್ರ ಅಧಿಕಾರಿಗಳಿಗೆ ಆಶ್ರಯ ನೀಡುತ್ತಿದ್ದು ಕೋಟಿ ಆಸ್ತಿಯುಳ್ಳವರನ್ನು ಸಾಕುತ್ತಿದೆ. ಕಾಂಗ್ರೆಸ್ ಆಡಳಿತದಿಂದ ಇಂದು ಜಿಲ್ಲೆಗೆ ವಿದ್ಯಾಭ್ಯಾಸಕ್ಕೆ ಯಾವದೇ ರೀತಿಯ ಅನುದಾನಗಳನ್ನು ನೀಡಿಲ್ಲ. ಬಿಜೆಪಿ ಸರ್ಕಾರವಿದ್ದಾಗ ಮೆಡಿಕಲ್, ಇಂಜಿನಿಯರಿಂಗ್, ಸೈನಿಕ ಶಾಲೆಗಳನ್ನು ಸ್ಥಾಪಿಸಿದೆ. ತಾಲೂಕಿನ ಬಿಜೆಪಿ ಕಾರ್ಯಕರ್ತರು ಹಗಲಿರುಳು ಪಕ್ಷಕ್ಕಾಗಿ ದುಡಿಯುತ್ತಿದ್ದು ಪಕ್ಷದ ಗೆಲುವಿಗೆ ಕಾರ್ಯಕರ್ತರ ಕೊಡುಗೆ ಅಪಾರ ಎಂದು ಹರ್ಷ ವ್ಯಕ್ತಪಡಿಸಿದರು.
ವಿಧಾನ ಪರಿಷತ್ ಸದಸ್ಯ ಸುನಿಲ್ ಸುಬ್ರಮಣಿ ಮಾತನಾಡಿ ಕಾರ್ಯಕರ್ತರ ಶ್ರಮದ ಫಲವಾಗಿ ಜಿಲ್ಲೆಯಲ್ಲಿ ಪ್ರತಿಯೊಂದು ಚುನಾವಣೆಯಲ್ಲಿ ಬಿಜೆಪಿ ಗೆಲುವು ಸಾಧಿಸುತ್ತಿದೆ. ಕಾರ್ಯಕರ್ತರೆ ಪಕ್ಷದ ಆಸ್ತಿ. ಮುಂಬರುವ ಚುನಾವಣೆಯಲ್ಲಿ ಕಾರ್ಯಕರ್ತರು ಒಗ್ಗಟ್ಟಿನಿಂದ ದುಡಿದರೆ ಇಬ್ಬರು ಶಾಸಕರು ಬಿಜೆಪಿಯಿಂದ ಆಯ್ಕೆಗೊಳ್ಳುತ್ತಾರೆ. ಆಗ ಜಿಲ್ಲೆಯಲ್ಲಿ ಅಭಿವೃದ್ಧಿಯನ್ನು ಕಾಣಬಹುದು ಎಂದು ಹೇಳಿದರು.
ತಾಲೂಕು ಬಿಜೆಪಿ ಅಧ್ಯಕ್ಷ ತಳೂರು ಕಿಶೋರ್ ಕುಮಾರ್ ಅಧ್ಯಕ್ಷತೆ ವಹಿಸಿದ್ದರು. ವೇದಿಕೆಯಲ್ಲಿ ಬಿಜೆಪಿ ಜಿಲ್ಲಾಧ್ಯಕ್ಷ ಮನು ಮುತ್ತಪ್ಪ, ಉಪಾಧ್ಯಕ್ಷ ಬೆಲ್ಲು ಸೋಮಯ್ಯ, ಪ್ರಧಾನ ಕಾರ್ಯದರ್ಶಿ ರವಿ ಬಸಪ್ಪ, ಜಿಲ್ಲಾ ಪಂಚಾಯಿತಿ ಅಧ್ಯಕ್ಷ ಹರೀಶ್, ಜಿಲ್ಲಾ ಮಹಿಳಾ ಮೋರ್ಚಾ ಅಧ್ಯಕ್ಷೆ ಯಮುನಾ, ಪ್ರಧಾನ ಕಾರ್ಯದರ್ಶಿ ಕಾಂತಿ ಬೆಳ್ಯಪ್ಪ, ಗೀತಾಪವಿತ್ರ, ಜಿಲ್ಲಾ ಪಂಚಾಯಿತಿ ಸದಸ್ಯ ಮುರಳೀಧರ್, ಕಲಾವತಿ ಪೂವಪ್ಪ, ಕಿರಣ್, ತಾಲೂಕು ಪಂಚಾಯಿತಿ ಅಧ್ಯಕ್ಷೆ ತೆಕ್ಕಡೆ ಶೋಭಾ ಮೋಹನ್, ಉಪಾಧ್ಯಕ್ಷ ಸುಬ್ರಮಣಿ, ಎ.ಪಿಎಂಸಿ ಅಧ್ಯಕ್ಷ ಅಶ್ವಿನ್ ಸತೀಶ್, ಹಿಂದುಳಿದ ವರ್ಗಗಳ ಅಧ್ಯಕ್ಷ ರಘು ಆನಂದ್, ತಾಲೂಕು ಮಹಿಳಾ ಮೋರ್ಚಾ ಅಧ್ಯಕ್ಷೆ ಬಡುವಂಡ್ರ ಕವಿತಾ ಹಾಗೂ ಇತರರು ಹಾಜರಿದ್ದರು.
ದೀನ ದಯಾಳ್ ಉಪಾಧ್ಯಾಯ ಅವರ 100ನೇ ಜನ್ಮಶತಾಬ್ದಿ ಅಂಗವಾಗಿ ಭಾವಚಿತ್ರಕ್ಕೆ ಪುಷ್ಪರ್ಚಾನೆ ಗೈದು ಕಾರ್ಯಕರ್ತರು ಕಾಣಿಕೆ ಸಲ್ಲಿಸಿದರು. ಇದೇ ಸಂದರ್ಭ ಎ.ಪಿ.ಎಂ.ಸಿ. ಚುನಾವಣೆಯಲ್ಲಿ ಗೆಲುವು ಸಾಧಿಸಿದ ಅಭ್ಯರ್ಥಿಗಳನ್ನು ಸನ್ಮಾನಿಸಲಾಯಿತು.
ಬಿಜೆಪಿ ಮೂರ್ನಾಡು ಸ್ಥಾನೀಯ ಸಮಿತಿ ಅಧ್ಯಕ್ಷ ಕೊಂಪುಳಿರ ಗಣೇಶ್ ಬೋಪಯ್ಯ ಸ್ವಾಗತಿಸಿ, ತಾಲೂಕು ಪಂಚಾಯಿತಿ ಅಧ್ಯಕ್ಷೆ ತೆಕ್ಕಡೆ ಶೋಭಾ ಮೋಹನ್ ಕಾರ್ಯಕ್ರಮ ನಿರೂಪಿಸಿ, ಪುದಿಯೊಕ್ಕಡ ಮಧು ವಂದಿಸಿದರು.