ಮಡಿಕೇರಿ, ಫೆ. 11: ಮಹಿಳಾ ಮತ್ತು ಮಕ್ಕಳ ಅಭಿವೃದ್ಧಿ ಇಲಾಖೆ, ಶಿಶು ಅಭಿವೃದ್ಧಿ ಯೋಜನಾಧಿಕಾಗಳ ಕಚೇರಿ, ಗ್ರೀನ್ ಪ್ಲಾನೆಟ್ ಸಂಸ್ಥೆ ವತಿಯಿಂದ ಮೂರ್ನಾಡು, ಮರಗೋಡು, ಚೇರಂಬಾಣೆ, ಕಸಬ ವೃತ್ತದ ಸ್ತ್ರೀ ಶಕ್ತಿ ಗುಂಪುಗಳಿಗೆ ಹಾಗೂ ಅಂಗನವಾಡಿ ಕಾರ್ಯಕರ್ತೆಯರಿಗೆ ವಿಷ ಮುಕ್ತ-ರಾಸಾಯನಿಕ ಮುಕ್ತ ನೈಸರ್ಗಿಕ ಆಹಾರವನ್ನು ಬೆಳಸುವ ಬಗ್ಗೆ ಮತ್ತು ನಗದು ರಹಿತ ವಹಿವಾಟು ಬಗ್ಗೆ ಅರಿವು ಕಾರ್ಯಕ್ರಮವನ್ನು ಕಡಗದಾಳುವಿನ ಸ್ತ್ರೀ ಶಕ್ತಿ ಭವನದಲ್ಲಿ ಏರ್ಪಡಿಸಲಾಯಿತು.ಗ್ರಾ.ಪಂ. ಉಪಾಧ್ಯಕ್ಷ ಮಾದೇಟಿರ ತಿಮ್ಮಯ್ಯ ಮಾತನಾಡಿ, ಹಿಂದಿನ ಕಾ¯ದಲ್ಲಿ ನೈಸರ್ಗಿಕವಾಗಿ ಆಹಾರವನ್ನು ಬೆಳೆಯುತ್ತಿದ್ದುದ್ದರಿಂದ ಆರೋಗ್ಯವೂ ಉತ್ತಮವಾಗಿರುತ್ತಿತ್ತು. ಈಗ ಜನಸಂಖ್ಯೆ ಹೆಚ್ಚುತ್ತಿದ್ದು, ಆಹಾರದ ಬೇಡಿಕೆ ಹೆಚ್ಚಾಗಿರುವದರಿಂದ ಹೆಚ್ಚು ಆಹಾರದ ಪೂರೈಕೆಗಾಗಿ ಹೆಚ್ಚು ಹಣ ಮಾಡುವ ಉದ್ದೇಶದಿಂದ ವಿಷಕಾರಿ ರಾಸಾಯನಿಕ ವಸ್ತುಗಳನ್ನು ಸಿಂಪಡಿಸಿ ವಿಷಪೂರಿತ ಆಹಾರ ಬೆಳವಣಿಗೆ ಮಾಡುತ್ತಿದ್ದು ಭೂಮಿ ಮತ್ತು ಮನುಷ್ಯನ ಆರೋಗ್ಯ ಹದಗೆಡುತ್ತಿದೆ ಎಂದರು.
ವಿಜಯ ಬ್ಯಾಂಕ್ ವ್ಯವಸ್ಥಾಪಕ ವಿಶ್ವನಾಥ ನಾಯ್ಕ್ ನಗದು ರಹಿತ ವಹಿವಾಟಿನಲ್ಲಿರುವ ಅನುಕೂಲಗಳ ಬಗ್ಗೆ ತಿಳಿಸಿ ಮೊಬೈಲ್ ಬ್ಯಾಂಕಿಂಗ್, ಆನ್ಲೈನ್ ಬ್ಯಾಂಕಿಂಗ್, ಭೀಮಾ ಯೋಜನೆ ಹಾಗೂ ಬ್ಯಾಂಕ್ನಲ್ಲಿ ಮಹಿಳೆಯರಿಗಿರುವ ಸೌಲಭ್ಯಗಳ ಬಗ್ಗೆ ತಿಳಿಸಿಕೊಟ್ಟು, ತಾಲೂಕಿನ ಸ್ತ್ರೀ ಶಕ್ತಿ ಮಹಿಳೆಯರು ಉತ್ತಮವಾಗಿ ಬ್ಯಾಂಕ್ ವಹಿವಾಟು ಮಾಡುತ್ತಿದ್ದಾರೆಂದು ಹರ್ಷ ವ್ಯಕ್ತಪಡಿಸಿದರು.
ಸಹಾಯಕ ಶಿಶು ಅಭಿವೃದ್ಧಿ ಯೋಜನಾಧಿಕಾರಿಗಳು ಮೇಪಾಡಂಡ ಸವಿತ ಕೀರ್ತನ್ ಮಾತನಾಡಿ, ಸ್ತ್ರೀ ಶಕ್ತಿ ಮಹಿಳೆಯರು ಹಣದ ವಹಿವಾಟಿನೊಂದಿಗೆ ಕುಟುಂಬದ, ಆರೋಗ್ಯವನ್ನು ಉತ್ತಮ ಪಡಿಸಿಕೊಳ್ಳಲು ಒಗ್ಗಟ್ಟಾಗಬೇಕು. ವಿಷ ಮುಕ್ತ, ರಾಸಾಯನಿಕ ಮುಕ್ತ ಆಹಾರವನ್ನು ಬೆಳೆಸಲು ಮುಂದಾಗಬೇಕು. ಇತರೇ ಸ್ತ್ರೀಶಕ್ತಿ ಗುಂಪಿನ ಸದಸ್ಯರ ಸಹಭಾಗಿತ್ವವನ್ನು, ಸಹಕಾರವನ್ನು ಪಡೆಯುವದರ ಮೂಲಕ ಸ್ವ ಮಾರುಕಟ್ಟೆ ಸೌಲಭ್ಯವನ್ನು ಪಡೆಯುವಂತೆ, ನಗದು ರಹಿತ ವಹಿವಾಟಿನಲ್ಲಿ ಕುಟುಂಬದ ಮಾರ್ಗದರ್ಶಕರಾಗಿ ತಮ್ಮನ್ನು ತಾವು ಮಾರ್ಪಡಿಸಿಕೊಳ್ಳಲು ಕರೆ ನೀಡಿದರು. ಈ ಸಂದರ್ಭ ಜ್ಯೋತಿ, ಶಕುಂತಲ ಪ್ರಾರ್ಥಿಸಿ, ಇಂದಿರ ವಂದಿಸಿದರು.