ಸೋಮವಾರಪೇಟೆ, ಫೆ. 11: ಜಿಲ್ಲಾ ಭೂಮಿ ಮತ್ತು ವಸತಿ ಹಕ್ಕು ವಂಚಿತರ ಹೋರಾಟ ಸಮಿತಿ ಸಭೆ, ಬಹುಜನ ಸಮಾಜವಾದಿ ಪಕ್ಷದ ಜಿಲ್ಲಾ ಉಪಾಧ್ಯಕ್ಷ ಜಯಪ್ಪ ಹಾನಗಲ್ ಅವರ ಅಧ್ಯಕ್ಷತೆಯಲ್ಲಿ ಪಟ್ಟಣದ ಸಾಹಿತ್ಯ ಭವನದಲ್ಲಿ ನಡೆಯಿತು.ಹೋರಾಟ ಸಮಿತಿಗೆ ವಿವಿಧ ಸಂಘಟನೆಗಳ ಪ್ರತಿನಿಧಿಗಳನ್ನು ಆಯ್ಕೆ ಮಾಡಿಕೊಳ್ಳಲಾಯಿತು. ಹಾಗೂ 11 ಸದಸ್ಯರ ಸಂಚಾಲನ ಸಮಿತಿಯನ್ನು ರಚಿಸಲಾಯಿತು. ಡಿ.ಎಸ್. ನಿರ್ವಾಣಪ್ಪ ಅವರು ಸಂಚಾಲಕರಾಗಿ ಆಯ್ಕೆಯಾದರು. ಜಯಪ್ಪ ಹಾನಗಲ್, ಅಪ್ಪು, ಜೆ.ಆರ್. ಪಾಲಾಕ್ಷ, ಕೆ.ಬಿ. ರಾಜು, ಮೊಣ್ಣಪ್ಪ, ಮೊಹಿಸಿನ್, ರಾಮ್‍ದಾಸ್, ಎಸ್.ಆರ್. ವಸಂತ್, ಹೆಚ್.ಸಿ. ಹರೀಶ್ ಕುಮಾರ್, ಜೆ.ಕೆ. ಅಪ್ಪಾಜಿ ಆಯ್ಕೆಯಾದರು. ಮಾ. 15 ರೊಳಗೆ ಜಿಲ್ಲೆಯ ಆದಿವಾಸಿ, ದಲಿತ, ದಲಿತ ಅಲೆಮಾರಿ, ಹಿಂದುಳಿದ ಮತ್ತು ಅಲ್ಪಸಂಖ್ಯಾತ ಜನತೆಯ ಸಮಾವೇಶವನ್ನು ಆಯೋಜಿಸುವ ಬಗ್ಗೆ ಗಂಭೀರ ಚರ್ಚೆ ನಡೆಯಿತು. ಹಿರಿಯ ಸ್ವಾತಂತ್ರ ಹೋರಾಟಗಾರ ಹೆಚ್.ಎಸ್. ದೊರೆಸ್ವಾಮಿ ಅವರು ತಾ. 13 ರಂದು ದಿಡ್ಡಳ್ಳಿಯಲ್ಲಿ ನಡೆಯುವ ರಾಜ್ಯದ ಜನಪರ ಸಂಘÀಟನೆಗಳ ಸಂಕಲ್ಪ ದಿನ ಮತ್ತು 14 ರಂದು ಜಿಲ್ಲಾಧಿಕಾರಿಗಳ ಕಚೇರಿ ಮುಂದೆ ನಡೆಯುವ ಧರಣಿ ಪ್ರತಿಭಟನೆಯಲ್ಲಿ ಹೆಚ್ಚಿನ ಸಂಖ್ಯೆಯಲ್ಲಿ ಚಳುವಳಿಗಾರರನ್ನು ಸೇರಿಸುವ ಬಗ್ಗೆ ಚರ್ಚೆ ನಡೆಸಲಾಯಿತು.

ದಿಡ್ಡಳ್ಳಿಯಲ್ಲಿ ವಸತಿಹೀನರಿಗೆ ನಿವೇಶನದ ಸಮಸ್ಯೆ ಬಗೆಹರಿಯ ದಿದ್ದಲ್ಲಿ, ಮುಂದಿನ ಹಂತದ ಕಾನೂನುಭಂಗ ಚಳುವಳಿಯ ಮೂಲಕ ಜೈಲ್ ಭರೋ ಬಗ್ಗೆ ಚರ್ಚೆ ನಡೆಸಲಾಯಿತು. ಸಭೆಯಲ್ಲಿ ಹೋರಾಟ ಸಮಿತಿಯ ಸಿರಿಮನೆ ನಾಗರಾಜ್ ಉಪಸ್ಥಿತರಿದ್ದು ಚಳುವಳಿಯ ಬಗ್ಗೆ ಸಲಹೆ ಸೂಚನೆ ನೀಡಿದರು.