ಸಿದ್ದಾಪುರ, ಫೆ. 11: ಸಿದ್ದಾಪುರ ಗ್ರಾಮ ಪಂಚಾಯಿತಿಯ ಅಧ್ಯಕ್ಷರು ಮಾಡಿರುವ ಹಗರಣಗಳು ಬಯಲಾಗುವದೆಂದು ಭಯದಿಂದ ರಾಜೀನಾಮೆ ಎಂಬ ನಾಟಕ ವಾಡಿರುವದು ಖಂಡನೀಯವೆಂದು ಸಿದ್ದಾಪುರ ಸಿ.ಪಿ.ಐ.(ಎಂ) ಪಕ್ಷದ ಮುಖಂಡರುಗಳು ತಿಳಿಸಿದ್ದಾರೆ. ಪತ್ರಿಕಾಗೋಷ್ಠಿಯಲ್ಲಿ ಮಾತನಾಡಿದ ಸಿ.ಪಿಐ.(ಎಂ) ಮುಖಂಡ ಅನಿಲ್ ಕುಟ್ಟಪ್ಪ ಸಿದ್ದಾಪುರ ಗ್ರಾಮ ಪಂಚಾಯಿತಿಯಲ್ಲಿ ಹಿಂದಿನಿಂದಲೂ ಕಸವಿಲೇವಾರಿ ಸಮಸ್ಯೆ ಇದ್ದು ಇದನ್ನು ಬಗೆಹರಿಸು ನಿಟ್ಟಿನಲ್ಲಿ ಪಂಚಾಯಿತಿಯ ಆಡಳಿತ ಮಂಡಳಿ ಹಾಗೂ ಎಸ್.ಡಿ.ಪಿ.ಐ ಪಕ್ಷ ಸಭೆ ಕರೆದು ಬಂದ್ ಮಾಡಿಸುವ ಮೂಲಕ ಜನರ ದಿಕ್ಕು ತಪ್ಪಿಸಿದ್ದಾರೆ ಎಂದು ದೂರಿದರು.

ಇತ್ತೀಚೆಗೆ ರಾಜೀನಾಮೆ ನೀಡುವ ಸಂದರ್ಭ ತಮ್ಮ ಪಕ್ಷದವರೇ ಕಸವಿಲೇವಾರಿಗೆ ಅಡ್ಡಿಪಡಿಸುತ್ತಿದ್ದಾರೆ ಎಂದು ಅಸಹಾಯಕತೆ ತೋಡಿ ಕೊಂಡಿರುವದು ಎಷ್ಟು ಸಮಂಜಸ ಎಂದು ಪ್ರಶ್ನಿಸಿದ ಅವರು ಕಸವಿಲೇವಾರಿಯ ಬಗ್ಗೆ ಅಧಿಕಾರಿಗಳ ಮೇಲೆ ಗೂಬೆ ಕೂರಿಸಿರುವ ಕ್ರಮ ಸರಿ ಅಲ್ಲ; ಸ್ವಪಕ್ಷ ಸದಸ್ಯರೇ ಬೆಂಬಲ ನೀಡುತ್ತಿಲ್ಲ ಎಂಬ ಹೇಳಿಕೆ ನೀಡಿದ ಅಧ್ಯಕ್ಷರಿಗೆ ಈ ಹಿಂದೆ ಗೊತ್ತಿರಲಿಲ್ಲವೇ ಎಂದು ಪ್ರಶ್ನಿಸಿದರು. ಪಂಚಾಯಿತಿಯ ಕಾರ್ಯ ವೈಖರಿಯನ್ನು ಖಂಡಿಸಿ ತಾ. 20ರಂದು ಪಂಚಾಯಿತಿ ಕಚೇರಿ ಎದುರು ಪಕ್ಷದ ವತಿಯಿಂದ ಪ್ರತಿಭಟನೆ ನಡೆಸಲಾಗುವದು. ಅದೇ ದಿನ ಸಂಜೆ 4.30 ಕ್ಕೆ ಸಿದ್ದಾಪುರ ಬಸ್ ನಿಲ್ದಾಣದಲ್ಲಿ ಬಹಿರಂಗ ಸಭೆಯನ್ನು ಏರ್ಪಡಿಸಲಾಗಿದೆಂದು ಮಾಹಿತಿ ನೀಡಿದರು.

ಗೋಷ್ಠಿಯಲ್ಲಿ ಸಿ.ಪಿ.ಐ. (ಎಂ) ಪಕ್ಷದ ಮುಖಂಡ ಶಾಲಿ ಪೌಲಸ್ ಹಾಜರಿದ್ದರು.