ನಾಪೋಕ್ಲು, ಫೆ. 11: ಪರೀಕ್ಷೆಗಳನ್ನು ಆತ್ಮವಿಶ್ವಾಸದಿಂದ ಎದುರಿಸಲು ವಿದ್ಯಾರ್ಥಿಗಳು ಸನ್ನದ್ಧರಾಗಬೇಕು ಎಂದು ನಾಪೋಕ್ಲು ಸರಕಾರಿ ಪ್ರೌಢಶಾಲೆಯ ಉಪ ಪ್ರಾಂಶುಪಾಲೆ ಬಡ್ಡೀರ ನಳಿನಿ ಹೇಳಿದರು.
ಇಲ್ಲಿನ ಸರ್ಕಾರಿ ಪ್ರೌಢಶಾಲೆಯಲ್ಲಿ ಬಾಲವಿಕಾಸ ಅಕಾಡೆಮಿ, ಮಹಿಳಾ ಮತ್ತು ಮಕ್ಕಳ ಅಭಿವೃದ್ಧಿ ಇಲಾಖೆ ಹಾಗೂ ಸಾರ್ವಜನಿಕ ಶಿಕ್ಷಣ ಇಲಾಖೆ ವತಿಯಿಂದ ಏರ್ಪಡಿಸಲಾಗಿದ್ದ ಎಸ್ಎಸ್ಎಲ್ಸಿ ವಿದ್ಯಾರ್ಥಿಗಳಿಗೆ ಪರೀಕ್ಷಾ ಸಿದ್ಧತೆ ಕಾರ್ಯಕ್ರಮದಲ್ಲಿ ಅವರು ಮಾತನಾಡಿದರು. ವಿದ್ಯಾರ್ಥಿಗಳು ಶಿಕ್ಷಣದ ಪರೀಕ್ಷೆಯನ್ನು ಹಾಗೂ ಜೀವನದ ಪರೀಕ್ಷೆಯನ್ನು ಆತಂಕವಿಲ್ಲದೆ ಎದುರಿಸುವಂತಾಗಲು ಸೂಕ್ತ ತಯಾರಿ ಮಾಡಿಕೊಳ್ಳಬೇಕಾದುದು ಅತ್ಯವಶ್ಯಕ ಎಂದರು. ಕಾರ್ಯಕ್ರಮವನ್ನು ಶಾಲಾಭಿವೃದ್ಧಿ ಸಮಿತಿ ಅಧ್ಯಕ್ಷ ವಿಶ್ವನಾಥ್ ಉದ್ಘಾಟಿಸಿದರು. ಮಹಿಳಾ ಮತ್ತು ಮಕ್ಕಳ ಅಭಿವೃದ್ಧಿ ಇಲಾಖೆಯ ಸಿಬ್ಬಂದಿ ಸವಿತಾ ಉಪಸ್ಥಿತರಿದ್ದರು.
ಬಲ್ಲಮಾವಟಿಯ ನೇತಾಜಿ ಪ್ರಾಢಶಾಲೆಯ ಸಹ ಶಿಕ್ಷಕ ಸಿ.ಎಸ್. ಸುರೇಶ್, ಎಮ್ಮೆಮಾಡು ಸರಕಾರಿ ಪ್ರೌಢಶಾಲೆಯ ಸಹ ಶಿಕ್ಷಕ ಮಾರುತಿ ಅರೇರ, ಚೇರಂಬಾಣೆಯ ಅರುಣ ಪದವಿಪೂರ್ವ ಕಾಲೇಜಿನ ಶಿಕ್ಷಕ ಪರಮೇಶ್ ಹಾಗೂ ಲೋಕೇಶ್ ಗಣಿತ, ಇಂಗ್ಲೀಷ್, ಸಮಾಜ ವಿಜ್ಞಾನ ಹಾಗೂ ವಿಜ್ಞಾನ ವಿಷಯಗಳಲ್ಲಿ ಮಾರ್ಗದರ್ಶನ ನೀಡಿದರು.