ಪೊನ್ನಂಪೇಟೆ, ಫೆ. 11: ಕಣ್ಣನೂರು ಅಂತರಾಷ್ಟ್ರೀಯ ವಿಮಾನ ನಿಲ್ದಾಣ ಸಾರ್ವಜನಿಕ ಸೇವೆಗೆ ಮುಕ್ತಗೊಂಡ ಬಳಿಕ ವಾರ್ಷಿಕವಾಗಿ 8.5 ಮಿಲಿಯನ್ ಪ್ರಯಾಣಿಕರ ಗುರಿ ಹೊಂದಲಾಗಿದೆ ಎಂದು ಕೆ.ಐ.ಎ.ಎಲ್.ನ ವ್ಯವಸ್ಥಾಪಕ ನಿರ್ದೇಶಕ ವಿ.ತುಳಸಿದಾಸ್ ಹೇಳಿದ್ದಾರೆ. ಕೊಡಗಿನ ಮಾಧ್ಯಮ ಪ್ರತಿನಿಧಿಗಳ ತಂಡದೊಂದಿಗೆ ಕಣ್ಣನೂರಿನಲ್ಲಿ ಮಾತನಾಡಿದ ಅವರು, ಮುಂದೆ ಈ ನಿಲ್ದಾಣವನ್ನು ಪ್ರಯಾಣಿಕರ ನಿರೀಕ್ಷೆಗೆ ತಕ್ಕಂತೆ ವಿಸ್ತರಿಸಲು ಎಲ್ಲಾ ರೀತಿಯ ಪೂರ್ವಯೋಜನೆಯನ್ನು ಈಗಿನಿಂದಲೇ ಸಿದ್ದಗೊಳಿಸಲಾಗಿದೆ. ಮುಂದೆ ಅಗತ್ಯವಿದ್ದರೆ ಟರ್ಮಿನಲ್ ಕಟ್ಟಡವನ್ನೂ ವಿಸ್ತರಿಸಲು ಸಿದ್ದವಿರುವದಾಗಿ ತಿಳಿಸಿದರು.

ಮುಂದಿನ ಮೇ ತಿಂಗಳಿನಿಂದ ವಿಮಾನ ನಿಲ್ದಾಣದಲ್ಲಿ ಪ್ರಾಯೋಗಿಕ ಪರೀಕ್ಷೆ ಆರಂಭಗೊಳ್ಳಲಿದೆ. ನಾಗರೀಕ ವಿಮಾನಯಾನ ಸಂಸ್ಥೆಯ ಡೈರೆಕ್ಟರ್ ಜನರಲ್ ಅವರು ಖುದ್ದು ಭೇಟಿ ನೀಡಿ ಪರಿಶೀಲಿಸಿ, ಅನುಮತಿ ಪ್ರಕ್ರಿಯೆ ಪೂರ್ಣಗೊಂಡ ಬಳಿಕ ಸೆಪ್ಟಂಬರ್‍ನಲ್ಲಿ ನಿಲ್ದಾಣವನ್ನು ಸೇವೆಗೆ ಮುಕ್ತಗೊಳಿಸಲು ಎಲ್ಲಾ ರೀತಿಯ ಪ್ರಯತ್ನಗಳನ್ನು ನಡೆಸಲಾಗುತ್ತಿದೆ. ಈಗಾಗಲೇ ದೇಶಿಯ ಮತ್ತು ವಿದೇಶಿಯ ಏರ್‍ಲೈನ್ಸ್ ಸಂಸ್ಥೆಗಳೊಂದಿಗೆ ಸಭೆ ನಡೆಸಿದ್ದು, ವಿಶ್ವದ ಬಹುತೇಕ ಪ್ರತಿಷ್ಠಿತ ವಿಮಾನ ಸಂಸ್ಥೆಗಳು ಕಣ್ಣನೂರಿನಿಂದ ಸೇವೆ ಆರಂಭಿಸಲು ಉತ್ಸುಕವಾಗಿದೆ. ಗಲ್ಫ್ ರಾಷ್ಟ್ರಗಳ ಎಲ್ಲಾ ಅಂತರಾಷ್ಟ್ರೀಯ ವಿಮಾನ ನಿಲ್ದಾಣಕ್ಕೆ ಕಣ್ಣನೂರಿನಿಂದ ನೇರ ಸೇವೆ ದೊರಕಲಿದೆ. ಜೊತೆಗೆ ವಿಶ್ವದ ಪ್ರಮುಖ ನಿಲ್ದಾಣಗಳಿಗೂ ಸೇವೆಯನ್ನು ಹಂತ ಹಂತವಾಗಿ ವಿಸ್ತರಿಸಲಾಗುತ್ತದೆ. ಕಣ್ಣನೂರಿನಿಂದ ಬೆಂಗಳೂರು, ಕೊಚ್ಚಿ, ತಿರುವನಂತಪುರ, ದೆಹಲಿ, ಮುಂಬೈ, ಚೆನೈ, ಜೈಪುರ್, ಕಲ್ಕತ್ತಾ ಮೊದಲಾದ ಪ್ರಮುಖ ನಗರಗಳಿಗೆ ವಿಮಾನಯಾನ ಸೇವೆ ದೊರೆಯಲಿದೆ ಎಂದು ವಿವರಿಸಿದ ವಿ.ತುಳಸಿ ದಾಸ್, ಕಣ್ಣನೂರು ಅಂತರಾಷ್ಟ್ರೀಯ ವಿಮಾನ ನಿಲ್ದಾಣದಿಂದ ಪ್ರವಾಸೋಧ್ಯಮಕ್ಕೆ ಹೆಚ್ಚಿನ ನೆರವು ದೊರೆಯಲಿದೆ. ನಿಲ್ದಾಣದಿಂದ ಪ್ರಯಾಣಿಕರ ಸೌಲಭ್ಯಕ್ಕಾಗಿ ಹೈಷಾರಾಮಿ ಉತ್ತಮ ಬಸ್‍ಗಳ ಸೇವೆ ಕಲ್ಪಿಸಲು ಕರ್ನಾಟಕ ಮತ್ತು ಕೇರಳ ರಾಜ್ಯ ಸಾರಿಗೆ ಸಂಸ್ಥೆಗಳು ಮುಂದಾಗಲು ಅಗತ್ಯ ಕ್ರಮ ಕೈಗೊಳ್ಳುವಂತೆ ಈಗಾಗಲೇ ಮನವಿ ಮಾಡಲಾಗಿದೆ.

ಅದೇ ರೀತಿ ವಿಮಾನ ನಿಲ್ದಾಣಕ್ಕೆ ಪ್ರಮುಖ 8 ರಸ್ತೆಗಳನ್ನು ಈಗಾಗಲೆ ಗುರುತಿಸಿದ್ದು, ಈ ಪೈಕಿ ಕೊಡಗು ಜಿಲ್ಲೆಯಿಂದ ಸಂಪರ್ಕ ಕಲ್ಪಿಸುವ ರಸ್ತೆಯೂ ಸೇರಿದೆ. ಈ ಎಲ್ಲಾ ರಸ್ತೆಗಳನ್ನು ಮೇಲ್ದರ್ಜೆಗೇರಿಸಿ ಅಭಿವೃದ್ಧಿಪಡಿಸಲು ಉಭಯ ರಾಜ್ಯ ಸರಕಾರಗಳಿಗೆ ಪ್ರಸ್ತಾವನೆ ಸಲ್ಲಿಸಲಾಗಿದೆ ಎಂದು ಇದೇ ಸಂದರ್ಭ ಅವರು ವಿವರಣೆ ನೀಡಿದರು.

ಕಣ್ಣನೂರಿನಿಂದ ತಲಚೇರಿ ಮಾರ್ಗವಾಗಿ ಮೈಸೂರಿಗೆ ರೈಲ್ವೆ ಸಂಪರ್ಕ ಕಲ್ಪಿಸುವ ಯೋಜನೆಯ ಪ್ರಸ್ತಾಪ ಕೇಂದ್ರ ಸರಕಾರದ ಮುಂದಿದೆ. ಈ ಯೋಜನೆಯನ್ನು ಮಟ್ಟನೂರು ಮೂಲಕವೇ ಕೊಂಡ್ಯೊಯ್ಯುವಂತೆ ಕೇಂದ್ರಕ್ಕೆ ಪ್ರಸ್ತಾವನೆ ಸಲ್ಲಿಸಲಾಗುವದು. ನೂತನ ವಿಮಾನ ನಿಲ್ದಾಣದ ಆವರಣದಲ್ಲೆ ಪಂಚತಾರಾ ಹೊಟೇಲ್, ಮಲ್ಟಿಸ್ಪೆಶಾಲಿಟಿ ಆಸ್ಪತ್ರೆ ಮೊದಲಾದ ಯೋಜನೆಗಳಿಗೆ ಜಾಗ ಕಲ್ಪಿಸಲು ಯೋಚಿಸಲಾಗಿದ್ದು, ಆಸಕ್ತರು ಮುಂದೆ ಬಂದರೆ ಸಹಕಾರ ನೀಡಲು ಸಿದ್ದವಿರುವದಾಗಿ ವಿ. ತುಳಸಿದಾಸ್ ತಿಳಿಸಿದರು.