*ಗೋಣಿಕೊಪ್ಪಲು, ಫೆ. 11: ಪಂಚಾಯಿತಿ ಪಕ್ಷ ರಾಜಕೀಯ ವ್ಯವಸ್ಥೆಯಿಂದ ಅಭಿವೃದ್ಧಿಯಲ್ಲಿ ಹಿನ್ನಡೆ ಸಾಧಿಸುತ್ತಿದೆ. ಪಂಚಾಯ್ತಿ ಆಡಳಿತ ನೂತನ ಸದಸ್ಯರ ಆಯ್ಕೆಯಾಗಿ ವರ್ಷಗಳು ಸರಿದರೂ ಪಟ್ಟಣದ ಅಭಿವೃದ್ಧಿಯಲ್ಲಿ ಬದಲಾವಣೆ ಕಾಣುತ್ತಿಲ್ಲ ಎಂದು ಪುಚ್ಚಿಮಾಡ ಸುಭಾಶ್ ಆರೋಪಿಸಿದ್ದಾರೆ.

ಪತ್ರಿಕಾಗೋಷ್ಠಿಯಲ್ಲಿ ಮಾತನಾಡಿದ ಅವರು, ಗೋಣಿಕೊಪ್ಪ ಪಟ್ಟಣ ಅಭಿವೃದ್ಧಿ ಕಾಣದೆ ಸೊರಗುತ್ತಿದೆ. ಪಂಚಾಯಿತಿ ಸದಸ್ಯರ ರಾಜಕೀಯ ದೊಂಬರಾಟಕ್ಕೆ ಸಾರ್ವಜನಿಕರು ಬಲಿಯಾಗುತ್ತಿದ್ದಾರೆ. ಪಟ್ಟಣದಲ್ಲಿ ಕಸ ವಿಲೇವಾರಿ ಸಮಸ್ಯೆ, ಕುಡಿಯುವ ನೀರಿನ ಸಮಸ್ಯೆ, ಸಾರ್ವಜನಿಕ ಶೌಚಾಲಯ, ಬಸ್ ನಿಲ್ದಾಣ, ಚರಂಡಿಗಳ ಶುಚಿತ್ವ ಸೇರಿದಂತೆ ಟ್ರಾಫಿಕ್ ಸಮಸ್ಯೆಗಳು ಎದುರಾಗಿದೆ. ಈ ಬಗ್ಗೆ ಚಿಂತನೆ ಹರಿಸದೆ ರಾಜಕೀಯ ಮಾಡುತ್ತಾ ಕಾಲಹರಣ ಮಾಡುತ್ತಿರುವದು ವಿಷಾದನೀಯ ಎಂದರು. ಪಂಚಾಯ್ತಿ ಅಧ್ಯಕ್ಷರು ಸರ್ವ ಸದಸ್ಯರನ್ನು ವಿಶ್ವಾಸಕ್ಕೆ ಪಡೆದು ಪಟ್ಟಣದ ಅಭಿವೃದ್ಧಿಯ ಬಗ್ಗೆ ಚಿಂತನೆ ಹರಿಸಬೇಕು. ಆದರೆ ಅಧ್ಯಕ್ಷರೆ ಮೊಂಡು ವರ್ತನೆ ತೋರುತ್ತಿರುವದು ಪಟ್ಟಣದ ಅಭಿವೃದ್ಧಿಗಳಿಗೆ ತೊಡಕ್ಕಾಗುತ್ತಿದೆ ಎಂದು ಹೇಳಿದರು.

ಪಂಚಾಯಿತಿ ಅಧಿಕಾರಕ್ಕೆ ಬಂದು ವರ್ಷ ಸರಿದರೂ ಬಸ್ ನಿಲ್ದಾಣ, ಸಾರ್ವಜನಿಕ ಶೌಚಾಲಯ ವ್ಯವಸ್ಥೆಗೆ ಕ್ರಮ ಕೈಗೊಂಡಿಲ್ಲ. ಶಿಥಿಲ ವ್ಯವಸ್ಥೆಯಲ್ಲಿದ್ದ ಬಸ್ ನಿಲ್ದಾಣವನ್ನು ಕೆಡವಿದಾಗ ಇದ್ದ ಸಂಭ್ರಮ, ಉತ್ಸಾಹ ಬಸ್ ನಿಲ್ದಾಣ ನಿರ್ಮಿಸುವದರಲ್ಲಿ ಆಸಕ್ತಿ ಕಾಣುತ್ತಿಲ್ಲ. ಸೂಕ್ತ ಸಾರ್ವಜನಿಕ ಶೌಚಾಲಯ, ಬಸ್ ನಿಲ್ದಾಣಗಳಿಲ್ಲದೆ ಸಾರ್ವಜನಿಕರು ಸಮಸ್ಯೆ ಎದುರಿಸುತ್ತಿದ್ದಾರೆ. ಮಹಿಳೆಯರಿಗೆ ಮತ್ತು ಮಕ್ಕಳಿಗೆ ಹದಗೆಟ್ಟ ವ್ಯವಸ್ಥೆಯಿಂದ ಸಮಸ್ಯೆಯಾಗುತ್ತಿದೆ. ವೃದ್ದರು ಹಾಗೂ ರೋಗಿಗಳಿಗೆ ಮತ್ತಷ್ಟು ಸಮಸ್ಯೆ ತಂದಿದೆ. ಬಸ್ಸಿಗಾಗಿ ಕಾದು ನಿಲ್ಲುವವರು ಬಸ್ ನಿಲ್ದಾಣವಿಲ್ಲದೆ ಸ್ಥಳೀಯ ಅಂಗಡಿ ಮಳಿಗೆಗಳ ಮುಂದೆ ನಿಂತುಕೊಳ್ಳುತ್ತಾರೆ. ಇದರಿಂದ ಅಂಗಡಿ ಮಳಿಗೆಗಳಲ್ಲಿ ವ್ಯಾಪಾರಕ್ಕೂ ತೊಂದರೆಯಾಗುತ್ತಿದೆ ಎಂದರು.

ಇಗ್ಗುತಪ್ಪ ಕೊಡವ ಸಂಘದ ಸದಸ್ಯ ರಮೇಶ್ ಮಾತನಾಡಿ, ಸರಕಾರಿ ಬಸ್ ನಿಲ್ದಾಣಕ್ಕೆ ಖಾಸಗಿ ಬಸ್ ನಿಲ್ದಾಣದಲ್ಲಿ ವ್ಯವಸ್ಥೆ ಕಲ್ಪಿಸಿದರೂ ಕೆ.ಎಸ್.ಆರ್.ಟಿ.ಸಿ. ಬಸ್‍ಗಳು ಮುಖ್ಯ ರಸ್ತೆಯ ಬದಿಯ ಅಂಗಡಿ ಮಳಿಗೆಗಳ ಮುಂಭಾಗದಲ್ಲಿ ನಿಲ್ಲಿಸುವದರಿಂದ ವರ್ತಕರಿಗೂ, ಸಾರ್ವಜನಿಕರಿಗೆ ಸಮಸ್ಯೆಯಾಗುತ್ತಿದೆ. ಈ ಸ್ಥಳದಲ್ಲಿ ಬಸ್ ನಿಲ್ಲಿಸುವದರಿಂದ ಹಲವು ಅಪಘಾತಗಳು ನಡೆದು ಪ್ರಾಣಹಾನಿಯೂ ಸಂಭವಿಸಿದೆ. ಆದರೂ ಪಂಚಾಯಿತಿ ಈ ಬಗ್ಗೆ ಕ್ರಮ ಕೈಗೊಳ್ಳಲು ಎಡವಿದೆ ಎಂದು ಆರೋಪಿಸಿದರು.

ರಿಫಾರ್ಮೇಷನ್ ಕ್ಲಬ್ ಸದಸ್ಯ ಸೋಮಯ್ಯ ಮಾತನಾಡಿ, ಸರಕಾರದ ಅನುದಾನವನ್ನು ಸದ್ಬಳಕೆ ಮಾಡಿಕೊಳ್ಳದೆ ರಾಜಕೀಯದಿಂದ ದ್ವೇಷದ ವರ್ತನೆ ತೋರುತ್ತಿರುವದು ಖಂಡನೀಯ. ಅಭಿವೃದ್ಧಿಯ ದೃಷ್ಟಿಯಿಂದ ಚಿಂತನೆ ಹರಿಸಬೇಕಾಗಿದೆ. ಸಾರ್ವಜನಿಕ ಶೌಚಾಲಯ ನಿರ್ಮಾಣಕ್ಕೆ ಶಿಥಿಲ ವ್ಯವಸ್ಥೆ ಕಟ್ಟಡವನ್ನು ಸದಸ್ಯ ಕೆಡವಲು ಮುಂದಾಗಿದ್ದು, ಸಾರ್ವಜನಿಕರ ಹಿತದೃಷ್ಟಿಯಿಂದ ಉತ್ತಮ ಕಾರ್ಯವೇ. ಆದರೆ ಇದಕ್ಕೆ ದ್ವೇಷದ ರಾಜಕೀಯ ಬೆರೆಸಿ ಕಾಮಗಾರಿಗೆ ತಡೆ ಒಡ್ಡಲು ಮುಂದಾಗಿರುವದು ಅಭಿವೃದ್ಧಿಯ ಬೆಳವಣಿಗೆಯಲ್ಲ ಎಂದರು.

ಜಮ್ಮಡ ಜಯಾ ಮಾತನಾಡಿ, ಪಟ್ಟಣದಲ್ಲಿ ಮಾದಕ ಪದಾರ್ಥಗಳ ಮಾರಾಟ ನಡೆಯುತ್ತಿದೆ. ಯುವ ಸಮುದಾಯ ಇದಕ್ಕೆ ಬಲಿಯಾಗುತ್ತಿದೆ. ಈ ಬಗ್ಗೆ ಕ್ರಮ ಕೈಗೊಳ್ಳಬೇಕಾದ ಪೊಲೀಸ್ ಇಲಾಖೆ ನಿರ್ಲಕ್ಷ್ಯ ತಾಳಿದೆ. ಪಟ್ಟಣದ ಹಲವು ಭಾಗಗಳಲ್ಲಿ ಈ ದಂಧೆ ನಡೆಯುತ್ತಿದೆ ಎಂದರು.

ಗೋಷ್ಠಿಯಲ್ಲಿ ಪಳಗಂಡ ಸುರೇಶ್, ತನ್ವೀರ್, ಅಬೀಬ್, ಎಜೆನ್ ಉಪಸ್ಥಿತರಿದ್ದರು.