ಪೊನ್ನಂಪೇಟೆ, ಫೆ. 11: ಕೊಡಗಿನ ಪ್ರವಾಸೋದ್ಯಮ ಇನ್ನೂ ರಾಷ್ಟ್ರೀಯ-ಅಂತರರಾಷ್ಟ್ರೀಯ ಪ್ರವಾಸಿಗರನ್ನು ಸೆಳೆಯುವಷ್ಟು ಬೆಳೆದಿಲ್ಲ. ಇದಕ್ಕೆ ನಮ್ಮ ಜಿಲ್ಲೆಯನ್ನು ತಲುಪುವದಕ್ಕೆ ಉತ್ತಮ ಸಂಪರ್ಕ ವ್ಯವಸ್ಥೆಗಳು ಇಲ್ಲದಿರುವದೇ ಕಾರಣವಾಗಿದೆ. ಈ ಸಮಸ್ಯೆಯು ಕಣ್ಣೂರು ವಿಮಾನ ನಿಲ್ದಾಣದ ಸೇವೆಯಿಂದಾಗಿ ನೀಗಬಹುದು ಎಂಬ ಭರವಸೆಯನ್ನು ಇಟ್ಟುಕೊಳ್ಳಬಹುದು ಎಂದು ಕೊಡಗು ಜಿಲ್ಲಾ ಪ್ರೆಸ್ ಕ್ಲಬ್ ಅಧ್ಯಕ್ಷ ಕೇಶವ ಕಾಮತ್ ಹೇಳಿದ್ದಾರೆ.
ಕಣ್ಣೂರಿನಲ್ಲಿರುವ ಉತ್ತರ ಮಲಬಾರ್ ಚೇಂಬರ್ ಆಫ್ ಕಾಮರ್ಸ್‍ನ ಸಭಾಂಗಣದಲ್ಲಿ ನಡೆದ ‘ಕಣ್ಣನೂರು ಅಂತರಾಷ್ಟ್ರೀಯ ವಿಮಾನ ನಿಲ್ದಾಣ- ಅಭಿವೃದ್ಧಿ ಮತ್ತು ಅವಕಾಶ’ ಎಂಬ ವಿಚಾರ ಸಂಕಿರಣ ಕಾರ್ಯಕ್ರಮದಲ್ಲಿ ಅತಿಥಿಯಾಗಿ ಪಾಲ್ಗೊಂಡು ಮಾತನಾಡಿದರು. ಪಕ್ಕದ ಜಿಲ್ಲೆಯಲ್ಲಿ ಅಂತರ್ರಾಷ್ಟ್ರೀಯ ಮಟ್ಟದ ವಿಮಾನ ನಿಲ್ದಾಣ ನಿರ್ಮಾಣಗೊಳ್ಳುತ್ತಿ ರುವದು ನಮಗೆ ಸಂತಸ ತಂದಿರುವ ವಿಚಾರ. ಕೊಡಗಿನಿಂದ ಕೇವಲ 30 ಕಿ.ಮಿ ದೂರದಲ್ಲಿ ನಿರ್ಮಿಸಲಾಗು ತ್ತಿರುವ ಈ ವಿಮಾನ ನಿಲ್ದಾಣ ನಮ್ಮ ಜಿಲ್ಲೆಯ ಅಭಿವೃದಿಗೆ ಕಾರಣ ವಾಗುವದರಲ್ಲಿ ಸಂಶಯವಿಲ್ಲ. ಈಗಾಗಲೇ ಕಣ್ಣೂರಿಗೆ ಹೋಗುವ ಅನೇಕ ಅಂತರ ರಾಜ್ಯ ಹೆದ್ದಾರಿಗಳನ್ನು ಚತುಷ್ಪಥ ರಸ್ತೆಗಳನ್ನಾಗಿ ಮಾರ್ಪಾಡು ಮಾಡಿ, ರಸ್ತೆಗಳ ದರ್ಜೆಯನ್ನು ಏರಿಸುವ ಯೋಜನೆಗಳನ್ನು ಈಗಾಗಲೇ ಕರ್ನಾಟಕ ಸರಕಾರ ಹಾಕಿಕೊಂಡಿದೆ ಎಂದು ತಿಳಿಸಿದರು.
ಕಾರ್ಯಕ್ರಮದಲ್ಲಿ ಮಾತನಾಡಿದ ಪತ್ರಕರ್ತ ಹೆಚ್.ಟಿ. ಅನಿಲ್, ಈ ಯೋಜನೆ ಕೊಡಗಿನ ಪ್ರವಾಸೋದ್ಯಮಕ್ಕೆ ಒಂದು ವರದಾನವೇ ಸರಿ. ಇತ್ತೀಚೆಗೆ ಕೊಡಗು ಪ್ರವಾಸೋದ್ಯಮವು ಅತೀ ಹೆಚ್ಚು ಪ್ರವಾಸಿಗರನ್ನು ಆಕರ್ಷಿಸುತಿದ್ದು ಇದು ವಾರ್ಷಿಕ 20ಲಕ್ಷಕ್ಕೂ ಹೆಚ್ಚಿದ್ದು, ಊಟಿ ಮತ್ತು ಮುನ್ನಾರನ್ನು ಮೀರಿಸುವ ಹಂತದಲ್ಲಿದೆ. ಈ ವಿಮಾನ ನಿಲ್ದಾಣದಿಂದಾಗಿ ಪ್ರವಾಸಿಗರ ಸಂಖ್ಯೆ ಹೆಚ್ಚಾಗುವ ನಿರೀಕ್ಷೆಯಿದ್ದರೂ ಅದಕ್ಕೆ ಸರಿಯಾದ ರಸ್ತೆ ಸಂಪರ್ಕ ಇರುವದಿಲ್ಲ. ಸರಕಾರಗಳ ಮೇಲೆ ನಿಗಮ ಒತ್ತಡ ಹೇರಿ ರಸ್ತೆ ಅಭಿವೃದ್ಧಿಗೆ ಪ್ರಯತ್ನಿಸಬೇಕು ಎಂದರು.
ಕಾರ್ಯಕ್ರಮದಲ್ಲಿ ಕೆ.ಐ.ಎ.ಎಲ್.ನ ವ್ಯವಸ್ಥಾಪಕ ನಿರ್ದೇಶಕ ವಿ. ತುಳಸಿದಾಸ್, ಉತ್ತರ ಮಲಬಾರ್ ಚೇಂಬರ್ ಆಫ್ ಕಾಮರ್ಸ್‍ನ ಅಧ್ಯಕ್ಷ ಸಿ.ವಿ. ದೀಪಕ್, ಕಣ್ಣೂರಿನ ಮೇಯರ್ ಲತಾ ಸೇರಿದಂತೆ ಇನ್ನಿತರರು ಪಾಲ್ಗೊಂಡಿದ್ದರು.