ಸೋಮವಾರಪೇಟೆ, ಫೆ. 11: ಜಾತ್ಯತೀತ ನಿಲುವಿನ ಕಾಂಗ್ರೆಸ್ ಪಕ್ಷದಿಂದ ಮಾತ್ರ ದಲಿತರಿಗೆ ಅಧಿಕಾರ ನೀಡಲು ಸಾಧ್ಯ ಎಂದು ತಾಲೂಕಿನ ಕಾಂಗ್ರೆಸ್ ಪಕ್ಷದ ದಲಿತ ಮುಖಂಡರುಗಳು ಅಭಿಪ್ರಾಯಿಸಿದ್ದಾರೆ.
ನಗರದ ಪತ್ರಿಕಾಭವನದಲ್ಲಿ ಕರೆದಿದ್ದ ಪತ್ರಿಕಾಗೋಷ್ಠಿಯಲ್ಲಿ ಈ ಬಗ್ಗೆ ಮಾತನಾಡಿದ ದಲಿತಪರ ಸಂಘಟನೆಗಳ ಮುಖಂಡ ಹಾಗೂ ತಾಲೂಕು ಅಕ್ರಮ ಸಕ್ರಮ ಸಮಿತಿ ಸದಸ್ಯ ಎಂ.ಡಿ. ಸುಬ್ಬಯ್ಯ, ಕುಶಾಲನಗರ ಕೃಷಿ ಉತ್ಪನ್ನ ಮಾರುಕಟ್ಟೆ ಸಮಿತಿಯ ಚುನಾವಣೆಯಲ್ಲಿ ಕಾಂಗ್ರೆಸ್ ಪಕ್ಷದಿಂದ ಆಯ್ಕೆಯಾಗಿದ್ದ ಪರಿಶಿಷ್ಟ ಜಾತಿಗೆ ಸೇರಿದ ವ್ಯಕ್ತಿಗೆ ಅಧಿಕಾರ ನೀಡಿರುವದು ಸ್ವಾಗತಾರ್ಹ ಎಂದರು.
ಇದನ್ನು ಸಹಿಸದ ಜೆಡಿಎಸ್ ಮುಖಂಡ ಜೀವಿಜಯ ಅವರು ಕಾಂಗ್ರೆಸ್ ನಾಯಕರ ವಿರುದ್ಧ ಇಲ್ಲಸಲ್ಲದ ಹೇಳಿಕೆ ನೀಡುತ್ತಿದ್ದಾರೆ. ಆರ್ಎಂಸಿ ಅಧ್ಯಕ್ಷ ಸ್ಥಾನ ಸಾಮಾನ್ಯವಿದ್ದರೂ ಸಹ ಪರಿಶಿಷ್ಟ ಜಾತಿ ವರ್ಗಕ್ಕೆ ಅಧ್ಯಕ್ಷ ಹುದ್ದೆ ನೀಡಲಾಗಿದೆ. ಇದು ದಲಿತ ಸಮುದಾಯಕ್ಕೆ ಸಂದ ಮನ್ನಣೆ ಯಾಗಿದೆ. ಇದಕ್ಕೆ ಕಾರಣರಾದ ಬ್ಲಾಕ್ ಕಾಂಗ್ರೆಸ್ ಅಧ್ಯಕ್ಷ ಕೆ.ಎಂ. ಲೋಕೇಶ್ ಹಾಗೂ ಪದಾಧಿಕಾರಿಗಳ ಶ್ರಮ ಶ್ಲಾಘನೀಯ ಎಂದರು.
ಕಾಂಗ್ರೆಸ್ ಪಕ್ಷದ 5 ಮಂದಿಗೆ ಮತದಾನದ ಅವಕಾಶವಿದ್ದು, ಬಿಜೆಪಿ ಹಾಗೂ ಜೆಡಿಎಸ್ ಪಕ್ಷದ ಸದಸ್ಯರನ್ನೂ ಸಹ ತಾನು ಖುದ್ದು ಭೇಟಿಯಾಗಿ ತನಗೆ ಮತನೀಡುವಂತೆ ಮನವಿ ಮಾಡಿದ್ದೆ. ಇದರಲ್ಲಿ ನನಗೆ 10 ಮತಗಳು ಬಂದಿದ್ದು, ಜೆಡಿಎಸ್ನವರು ಮತ ಹಾಕಿಲ್ಲ ಎಂದು ಹೇಳಲು ಸಾಧ್ಯವಿಲ್ಲ. ಗುಪ್ತಮತದಾನವಾದ್ದರಿಂದ ತಾನಾಗಲಿ ತನ್ನ ಪಕ್ಷವಾಗಲಿ ಬಿಜೆಪಿಯೊಂದಿಗೆ ಯಾವದೇ ಮೈತ್ರಿ ಮಾತುಕತೆ ನಡೆಸಿಲ್ಲ. ಆದರೂ ಜೆಡಿಎಸ್ನವರು ದೂರುವದರಲ್ಲಿ ಅರ್ಥವಿಲ್ಲ ಎಂದು ಆರ್ಎಂಸಿ ಅಧ್ಯಕ್ಷ ಎಂ.ಡಿ. ರಮೇಶ್ ಹೇಳಿದರು.
ತಮ್ಮ ಮೇಲೆ ವಿಶ್ವಾಸವಿಟ್ಟು ಇತರ ಸದಸ್ಯರು ಮತ ಚಲಾಯಿಸಿದ್ದರಿಂದಲೇ ಕೃಷಿ ಉತ್ಪನ್ನ ಮಾರುಕಟ್ಟೆ ಸಮಿತಿ ಅಧ್ಯಕ್ಷರಾಗಿ ಆಯ್ಕೆಯಾಗಲು ಸಹಕಾರಿಯಾಗಿದೆ. ತಾಲೂಕಿನ ರೈತರು ಹಾಗೂ ವರ್ತಕ ವರ್ಗದ ಸಮಸ್ಯೆಗಳ ಈಡೇರಿಕೆಗೆ ಮುಂದಿನ ದಿನಗಳಲ್ಲಿ ಪ್ರಾಮಾಣಿಕ ಪ್ರಯತ್ನ ಮಾಡುತ್ತೇನೆ. ಸರ್ಕಾರದಿಂದ ಹೆಚ್ಚಿನ ಅನುದಾನ ತಂದು ಅಭಿವೃದ್ಧಿ ಕಾರ್ಯಗಳಿಗೆ ಉಪಯೋಗಿಸುತ್ತೇವೆ ಎಂದು ನೂತನ ಅಧ್ಯಕ್ಷರು ಭರವಸೆ ನೀಡಿದರು.
ಗೋಷ್ಠಿಯಲ್ಲಿ ಕೊಡ್ಲಿಪೇಟೆ ಹೋಬಳಿ ಕಾಂಗ್ರೆಸ್ ಪ್ರಧಾನ ಕಾರ್ಯದರ್ಶಿ ಜೆ.ಎಲ್. ಜನಾರ್ಧನ್, ಪರಿಶಿಷ್ಟ ಜಾತಿ ವಿಭಾಗದ ಬ್ಲಾಕ್ ಪ್ರಧಾನ ಕಾರ್ಯದರ್ಶಿ ಕೆ.ಎನ್. ಹೂವಯ್ಯ ಅವರುಗಳು ಉಪಸ್ಥಿತರಿದ್ದರು.