ಮಡಿಕೇರಿ, ಫೆ. 11: ಕೊಡಗು ಜಿಲ್ಲಾ ಮುಸ್ಲಿಂ ಸ್ಪೋಟ್ರ್ಸ್ ಅಸೋಸಿಯೇಷನ್ ಮತ್ತು ಕುಶಾಲನಗರದ ತಾಜ್ ಕ್ರಿಕೆಟರ್ಸ್ ವತಿಯಿಂದ 14ನೇ ವರ್ಷದ ಗ್ರಾಮಾಂತರ ಕ್ರಿಕೆಟ್ ಪಂದ್ಯಾವಳಿ ಏಪ್ರಿಲ್ 26 ರಿಂದ 30ರವರೆಗೆ ನಡೆಯಲಿದೆ.
ಪತ್ರಿಕಾಗೋಷ್ಠಿಯಲ್ಲಿ ಮಾತನಾಡಿದ ಮುಸ್ಲಿಂ ಸ್ಪೋಟ್ರ್ಸ್ ಅಸೋಸಿಯೇಷನ್ ಜಿಲ್ಲಾಧ್ಯಕ್ಷ ಅಬ್ದುಲ್ ಖಾದರ್, ಪಂದ್ಯಾವಳಿ ಕುರಿತು ಮಾಹಿತಿ ನೀಡಿದರು. ಕುಶಾಲನಗರದ ಸರ್ಕಾರಿ ಮಾದರಿ ಪ್ರಾಥಮಿಕ ಶಾಲಾ ಮೈದಾನದಲ್ಲಿ 5 ದಿನಗಳ ಕಾಲ ನಡೆಯುವ ಪಂದ್ಯಾವಳಿಯಲ್ಲಿ ಕೊಡಗಿನ ಗ್ರಾಮಾಂತರ ಪ್ರದೇಶದ ಸುಮಾರು 150 ತಂಡಗಳು ಪಾಲ್ಗೊಳ್ಳಲಿವೆ ಎಂದರು.
ಏಪ್ರಿಲ್ 30 ರಂದು ಅಂತಿಮ ಪಂದ್ಯಾಟ ನಡೆಯಲಿದ್ದು, ಜಿಲ್ಲಾ ಉಸ್ತುವಾರಿ ಸಚಿವ ಎಂ.ಆರ್. ಸೀತಾರಾಮ್, ಆಹಾರ ಖಾತೆ ಸಚಿವÀ ಯು.ಟಿ. ಖಾದರ್, ವಿಧಾನ ಪರಿಷತ್ ಸದಸ್ಯ ಸುನಿಲ್ ಸುಬ್ರಮಣಿ ಸೇರಿದಂತೆ ಜಿಲ್ಲೆಯ ಜನ ಪ್ರತಿನಿಧಿಗಳು ಸಮಾರೋಪ ಸಮಾರಂಭದಲ್ಲಿ ಪಾಲ್ಗೊಳ್ಳಲಿದ್ದಾರೆ. ಪಂದ್ಯಾವಳಿಗೆ ಸುಮಾರು 8 ಲಕ್ಷ ರೂ. ಖರ್ಚಾಗಲಿದ್ದು, ಸರ್ಕಾರದಿಂದ ಅನುದಾನವನ್ನು ನಿರೀಕ್ಷಿಸಲಾಗಿದೆ ಎಂದರು.
ಕಳೆದ ವರ್ಷ 112 ತಂಡಗಳು ಪಂದ್ಯಾವಳಿಯಲ್ಲಿ ಪಾಲ್ಗೊಂಡಿದ್ದವು ಎಂದು ಅಬ್ದುಲ್ ಖಾದಿರ್ ತಿಳಿಸಿದರು. ಈ ಬಾರಿ ಪಂದ್ಯಾವಳಿಯ ವಿಜೇತ ತಂಡಗಳಿಗೆ ಪ್ರಥಮ ಬಹುಮಾನ 40 ಸಾವಿರ ರೂ. ನಗದು, ದ್ವಿತೀಯ 25 ಸಾವಿರ ರೂ., ತೃತೀಯ 10 ಸಾವಿರ ನಗದು ಹಾಗೂ 4ನೇ ಬಹುಮಾನವಾಗಿ ಆಕರ್ಷಕ ಟ್ರೋಫಿಯನ್ನು ನೀಡಲಾಗುವದೆಂದರು.
ಸುದ್ದಿಗೋಷ್ಠಿಯಲ್ಲಿ ಗೌರವ ಅಧ್ಯಕ್ಷರಾದ ಅಬ್ದುಲ್ ರಶೀದ್, ತಾಜ್ ಕ್ರಿಕೆಟರ್ಸ್ ಅಧ್ಯಕ್ಷ ಅಲೀಮ್ ಉರ್ ರೆಹೆಮಾನ್, ಕಾರ್ಯದರ್ಶಿ ಸಲ್ಮಾನ್, ಉಪಾಧ್ಯಕ್ಷ ಖಾಜಾ ಹಾಗೂ ಸದಸ್ಯ ಹ್ಯಾರಿಸ್ ಉಪಸ್ಥಿತರಿದ್ದರು.