ಮಡಿಕೇರಿ, ಫೆ. 11: ವೈಲ್ಡ್ ಲೈಫ್ ಫಸ್ಟ್, ಸಂತ ಮೈಕಲರ ಪ್ರೌಢಶಾಲೆ ಹಾಗೂ ಕೊಡಗು ವಿದ್ಯಾಲಯ ಸಂಯುಕ್ತ ಆಶ್ರಯದಲ್ಲಿ ಮಡಿಕೇರಿ ನಗರದಲ್ಲಿ ಕಾಡ್ಗಿಚ್ಚು ಜಾಥಾ ನೆರವೇರಿತು. ಸುಮಾರು 75 ವಿದ್ಯಾರ್ಥಿಗಳು ನಗರದಾದ್ಯಂತ ಸಂಚರಿಸಿ, ಜಾಗೃತಿ ಮೂಡಿಸುವ 5000ಕ್ಕೂ ಅಧಿಕ ಕರಪತ್ರವನ್ನು ಸಾರ್ವಜನಿಕರಿಗೆ ವಿತರಿಸಿದರು.ಅಪರ ಜಿಲ್ಲಾಧಿಕಾರಿ ಸತೀಶ್ಕುಮಾರ್ ಅವರು ಜನರಲ್ ತಿಮ್ಮಯ್ಯ ವೃತ್ತದ ಮುಂಭಾಗ ಕಾಡ್ಗಿಚ್ಚು ಜಾಗೃತಿ ಅಭಿಯಾನಕ್ಕೆ ಚಾಲನೆ ನೀಡಿದರು.ವೈಲ್ಡ್ ಲೈಫ್ ಫಸ್ಟ್ ಅಧ್ಯಕ್ಷ ಕೆ.ಎಂ. ಚಿಣ್ಣಪ್ಪ ಅವರ ನೇತೃತ್ವದಲ್ಲಿ ಜರುಗಿದ ಕಾರ್ಯಕ್ರಮದಲ್ಲಿ ಸಂಸ್ಥೆಯ ಸದಸ್ಯರಾದ ತಮ್ಮು ಪೂವಯ್ಯ, ಬೋಸ್ಮಾದಪ್ಪ, ಸತೀಶ್, ಪ್ರಮೋದ್, ಬಲ್ಲಚಂಡ ರಂಜನ್ ಹಾಗೂ ಶಾಲಾ ಶಿಕ್ಷಕರು ಪಾಲ್ಗೊಂಡಿದ್ದರು.
ಇದೇ ಸಂದರ್ಭ ಮಾತನಾಡಿದ ವನ್ಯಪ್ರೇಮಿ ಚಿಣ್ಣಪ್ಪ ಅವರು, ಕೊಡಗು ಈ ಬಾರಿ ಭೀಕರ ಬರಗಾಲಕ್ಕೆ ತುತ್ತಾಗಲು ನಿರಂತರ ಮರಹನನ, ವನ್ಯಪ್ರಾಣಿಗಳ ಬೇಟೆ, ಕೊಡಗಿನ ಶ್ರೀಮಂತ ಅರಣ್ಯ ಶ್ರೇಣಿ ಬೆಂಕಿಗೆ ನಿರಂತರ ಆಹುತಿ ಯಾಗುತ್ತಿರುವದೇ ಕಾರಣ ಎಂದು ಹೇಳಿದರು. ಕೊಡಗು ಒಳಗೊಂಡಂತೆ ಅರಣ್ಯ ಹಾಗೂ ವನ್ಯಪ್ರಾಣಿ ಸಂರಕ್ಷಣೆಗಾಗಿ ಸಾವಿರಾರು ಕಾರ್ಯಕ್ರಮಗಳನ್ನು ನಿರಂತರ ಹಮ್ಮಿಕೊಳ್ಳಲಾಗುತ್ತಿದ್ದು, ಕಾಡಿನ ಬೆಂಕಿಗೆ ಕಾರಣರಾಗುತ್ತಿರುವ ಕಿಡಿಗೇಡಿಗಳ ವಿರುದ್ಧ ಅರಣ್ಯ ಇಲಾಖೆ ಕಟ್ಟುನಿಟ್ಟಿನ ಕ್ರಮ ಕೈಗೊಳ್ಳುವಂತಾಗಬೇಕು. ಈ ಬಾರಿ ಬೇಸಿಗೆ ಆರಂಭದಲ್ಲಿಯೇ ಆನೆಚೌಕೂರು ಮೀಸಲು ಅರಣ್ಯ ವ್ಯಾಪ್ತಿಯಲ್ಲಿ, ಇರ್ಪು ಬೆಟ್ಟ ಶ್ರೇಣಿಗಳಲ್ಲಿ, ನಾಗರಹೊಳೆ ಉದ್ಯಾನವನ ಹಾಗೂ ಬಾಣಾವರ ವ್ಯಾಪ್ತಿಯಲ್ಲಿ ಮಾನವ ಪ್ರೇರಿತ ಕಾಡ್ಗಿಚ್ಚಿನಿಂದಾಗಿ ನೂರಾರು ಎಕರೆ ಅಮೂಲ್ಯ ಅರಣ್ಯ ಸಂಪತ್ತು ನಾಶವಾಗಿದೆ.
ಕೆಲವೊಂದು ಸ್ಥಳಗಳಲ್ಲಿ ಅರಣ್ಯ ಇಲಾಖೆಯ ಫೈರ್ ವಾಚರ್ ಅಜಾಗರೂಕತೆಯಿಂದಲೂ ಬೆಂಕಿ ಹರಡಿರುವದು ವಿಷಾದÀನೀಯ ಎಂದು ಹೇಳಿದರು.