ಸೋಮವಾರಪೇಟೆ,ಫೆ.11: ಇಲ್ಲಿನ ಪಟ್ಟಣ ಪಂಚಾಯಿತಿ ವತಿಯಿಂದ ನಗರದ ಜೇಸೀ ವೇದಿಕೆ ಮುಂಭಾಗ ನಿರ್ಮಿಸಲಾಗಿರುವ ಸಭಾ ಭವನ ಕಾಮಗಾರಿ ಅವೈಜ್ಞಾನಿಕವಾಗಿರುವ ಹಿನ್ನೆಲೆ ಕಾಮಗಾರಿ ಪ್ರಾರಂಭಗೊಂಡು ಬರೋಬ್ಬರಿ 7 ವರ್ಷ ಕಳೆದರೂ ಇಂದಿಗೂ ಉದ್ಘಾಟನೆಯ ಭಾಗ್ಯ ಕಂಡಿಲ್ಲ.

ಅಭಿಯಂತರ ಮಾಡಿದ ಎಡವಟ್ಟು, ಪಂಚಾಯಿತಿಯ ಅಂದಿನ ಆಡಳಿತ ಮಂಡಳಿ ಸದಸ್ಯರ ದೂರದೃಷ್ಟಿತ್ವದ ಕೊರತೆಯಿಂದಾಗಿ ರೂ. 28 ಲಕ್ಷ ವೆಚ್ಚದ ಭವನ ಗಗನಗೋಪುರದಂತೆ ಕಂಡು ಬರುತ್ತಿದ್ದು, ಇದುವರೆಗೂ ಸಾರ್ವಜನಿಕರ ಉಪಯೋಗಕ್ಕೆ ಲಭ್ಯವಾಗಿಲ್ಲ.

ಮಲೆನಾಡು ಅಭಿವೃದ್ಧಿ ಯೋಜನೆಯಡಿ ಸೋಮವಾರಪೇಟೆ ಪಟ್ಟಣ ಪಂಚಾಯಿತಿಗೆ ಕಳೆದ 2009 ಮತ್ತು 10ರಲ್ಲಿ ರೂ. 10 ಲಕ್ಷ, 2011-12ರಲ್ಲಿ ರೂ. 10 ಲಕ್ಷ, 2012-13ರಲ್ಲಿ ರೂ. 8 ಲಕ್ಷ ಅನುದಾನ ಬಿಡುಗಡೆ ಯಾಗಿದ್ದು, ಈ ಅನುದಾನದಲ್ಲಿ ಕೈಗೊಂಡಿರುವ ಸಭಾಭವನ ಕಾಮಗಾರಿ ಇಂದಿಗೂ ಪೂರ್ಣ ಗೊಂಡಿಲ್ಲ.

ಸಭಾಭವನಕ್ಕೆ ಯೋಜನೆ ರೂಪಿಸಿದ ಮಹಾನುಭಾವ ಇಂಜಿನಿಯರ್‍ನ ಅಜ್ಞಾನ ಎಷ್ಟರಮಟ್ಟಿಗೆ ಇತ್ತೆಂದರೆ, ಸುಮಾರು ರೂ. 28 ಲಕ್ಷ ವೆಚ್ಚದ ಭವನಕ್ಕೆ ಮೆಟ್ಟಿಲುಗಳನ್ನು ನಿರ್ಮಿಸುವದನ್ನೇ ಯೋಜನೆಯಿಂದ ಕೈಬಿಟ್ಟಿದ್ದಾರೆ. ಕೆಳಭಾಗದಲ್ಲಿ ಪಟ್ಟಣ ಪಂಚಾಯಿತಿ ಯಿಂದ ವಾಣಿಜ್ಯ ಮಳಿಗೆಗಳನ್ನು ನಿರ್ಮಿಸಲಾಗಿದ್ದು, ವರ್ತಕರು ವ್ಯಾಪಾರ ವಹಿವಾಟಿನಲ್ಲಿ ತೊಡಗಿಸಿ ಕೊಂಡಿದ್ದಾರೆ.

ಸೋಮವಾರಪೇಟೆ ಪಟ್ಟಣ ಸೇರಿದಂತೆ ಸುತ್ತಮುತ್ತಲಿನ ಭಾಗಗಳ ಸಾರ್ವಜನಿಕರ ಸಣ್ಣಪುಟ್ಟ ಸಭೆ ಸಮಾರಂಭಗಳಿಗೆ ಉಪಯೋಗಕ್ಕೆ ಬರಬೇಕಿದ್ದ ಸಭಾಭವನ ಕಳೆದ 7 ವರ್ಷಗಳಿಂದಲೂ ಕುಂಟುತ್ತಾ ಸಾಗುತ್ತಿದೆ. ಭವನಕ್ಕೆ ತೆರಳಲು ಅಗತ್ಯವಾಗಿ ಆಗಬೇಕಿದ್ದ ಮೆಟ್ಟಿಲುಗಳನ್ನೇ ಯೋಜನೆಯಿಂದ ಕೈಬಿಟ್ಟಿರುವದು ಅಭಿಯಂತರರ ಕಾರ್ಯಕ್ಷಮತೆಗೆ ಸಾಕ್ಷಿಯಾಗಿದೆ.

ಕಳೆದ 7 ವರ್ಷಗಳ ಹಿಂದೆ ಪ್ರಾರಂಭವಾದ ಭವನ ನಿರ್ಮಾಣ ಕಾಮಗಾರಿ ಒಂದೆರಡು ವರ್ಷಗಳಲ್ಲಿ ಪೂರ್ಣಗೊಂಡು ಜನೋಪಯೋಗಕ್ಕೆ ಲಭ್ಯವಾಗಿದ್ದರೂ ಪಂಚಾಯಿತಿಗೆ ಸಾವಿರಾರು ರೂಪಾಯಿಗಳ ಆದಾಯ ಸಂಗ್ರಹವಾಗುತ್ತಿತ್ತು. ಭವನ ಕಾಮಗಾರಿ ಇಂದಿಗೂ ಪೂರ್ಣಗೊಳ್ಳದೇ ಇರುವದರಿಂದ ಪಂಚಾಯಿತಿಯ ಆದಾಯಕ್ಕೂ ತಡೆಬಿದ್ದಿದೆ.

ಪಟ್ಟಣ ಪಂಚಾಯಿತಿಯಲ್ಲಿ ಕ್ರಿಯಾಶೀಲ ಅಧ್ಯಕ್ಷರಾಗಿರುವ ವಿಜಯಲಕ್ಷ್ಮೀ ಸುರೇಶ್ ಅವರಾದರೂ ಈ ಬಗ್ಗೆ ಗಮನಹರಿಸಬೇಕಿದೆ. ಅರ್ಧಕ್ಕೆ ಸ್ಥಗಿತಗೊಂಡಿರುವ ಭವನ ಕಾಮಗಾರಿ ಯನ್ನು ಪೂರ್ಣ ಗೊಳಿಸಲು ಸಂಬಂಧಿಸಿದ ಅಭಿಯಂತರರಿಗೆ ಸೂಚಿಸಬೇಕಿದೆ. ಸಾರ್ವಜನಿಕರ ಉಪಯೋಗಕ್ಕೆ ಭವನವನ್ನು ನೀಡುವ ಮೂಲಕ ಪಂಚಾಯಿತಿಗೂ ಆದಾಯ ಬರುವಂತೆ ಮಾಡಬೇಕಿದೆ.

ಈ ಮಧ್ಯೆ ಭವನದ ಅವೈಜ್ಞಾನಿಕ ಕಾಮಗಾರಿಯನ್ನು ಖುದ್ದು ಪರಿಶೀಲಿಸಿರುವ ಶಾಸಕ ಅಪ್ಪಚ್ಚು ರಂಜನ್, ಮಲೆನಾಡು ಅಭಿವೃದ್ಧಿ ಯೋಜನೆಯಡಿ ಉಳಿಕೆಯಾಗಿರುವ ಅನುದಾನವನ್ನು ಬಳಸಿ ತಕ್ಷಣ ಮೆಟ್ಟಿಲುಗಳನ್ನು ನಿರ್ಮಿಸಿ, ಭವನ ಕಾಮಗಾರಿಯನ್ನು ಪೂರ್ಣಗೊಳಿಸು ವಂತೆ ಸೂಚಿಸಿದ್ದಾರೆ. ಇದಾಗಿ ತಿಂಗಳುಗಳೇ ಕಳೆದರೂ ಭವನದ ಕಾಮಗಾರಿ ಮಾತ್ರ ಪ್ರಾರಂಭವಾಗದಿರು ವದು ವಿಪರ್ಯಾಸ! - ವಿಜಯ್ ಹಾನಗಲ್