ಕುಶಾಲನಗರ, ಫೆ. 11: ವಿದ್ಯಾರ್ಥಿಗಳ ಯಶಸ್ಸಿಗೆ ಪ್ರತಿಯೊಬ್ಬರ ಸಲಹೆ ಸೂಚನೆಗಳ ಅಗತ್ಯತೆಯಿದೆ ಎಂದು ಕೊಡಗು ಜಿಲ್ಲಾಧಿಕಾರಿ ಡಾ. ಆರ್.ವಿ. ಡಿಸೋಜ ಅಭಿಪ್ರಾಯ ವ್ಯಕ್ತಪಡಿಸಿದ್ದಾರೆ.

ಸಾರ್ವಜನಿಕ ಶಿಕ್ಷಣ ಇಲಾಖೆ ಮತ್ತು ರಾಜ್ಯಮಟ್ಟದ ದಿನಪತ್ರಿಕೆ ಹಾಗೂ ವಿವೇಕಾನಂದ ಪದವಿಪೂರ್ವ ಕಾಲೇಜು ಸಹಯೋಗದಲ್ಲಿ ಕುಶಾಲನಗರದಲ್ಲಿ ನಡೆದ ಎಸ್.ಎಸ್.ಎಲ್.ಸಿ. ವಿದ್ಯಾರ್ಥಿಗಳಿಗೆ ಪರೀಕ್ಷಾ ಭಯ ಹೋಗಲಾಡಿಸುವ ಕಾರ್ಯಾಗಾರಕ್ಕೆ ಚಾಲನೆ ನೀಡಿ ಮಾತನಾಡಿದರು. ಜಿಲ್ಲೆಯ ವಿದ್ಯಾರ್ಥಿಗಳಲ್ಲಿ ಪರಿಶ್ರಮ, ಪ್ರಯತ್ನದ ಕೊರತೆಯೊಂದಿಗೆ ಕ್ಷೀಣಗೊಳ್ಳುತ್ತಿರುವ ಯಶಸ್ಸು ಎದ್ದು ಕಾಣುತ್ತಿದೆ ಎಂದು ವಿಷಾದ ವ್ಯಕ್ತಪಡಿಸಿದ ಅವರು, ಈ ನಿಟ್ಟಿನಲ್ಲಿ ಶಿಕ್ಷಣ ಇಲಾಖೆ, ಅಧ್ಯಾಪಕರು ಮತ್ತು ಪೋಷಕರು ಮಕ್ಕಳ ಯಶಸ್ಸಿಗೆ ಕೈಜೋಡಿಸಬೇಕಾಗಿದೆ ಎಂದರು. ಮಾನವ ಸಂಪನ್ಮೂಲದ ಮೂಲಕ ಮಾತ್ರ ದೇಶದ ಸರ್ವಾಂಗೀಣ ಅಭಿವೃದ್ಧಿ ಸಾಧ್ಯ ಎಂದ ಅವರು, ಇದು ಶಿಕ್ಷಣ ವ್ಯವಸ್ಥೆ ಉತ್ತಮಗೊಂಡಲ್ಲಿ ಮಾತ್ರ ಸಾಧ್ಯ ಎಂದು ತಿಳಿಸಿದರು. ಜಿಲ್ಲೆಯಲ್ಲಿ ಕಳೆದ ಬಾರಿಯ ಶಾಲಾ ಫಲಿತಾಂಶಗಳು ತೃಪ್ತಿಕರವಾಗಿರಲಿಲ್ಲ. ಫಲಿತಾಂಶ ಅಭಿವೃದ್ಧಿಗೊಳ್ಳುವ ನಿಟ್ಟಿನಲ್ಲಿ ಪ್ರಯತ್ನ ಸಾಗಬೇಕಾಗಿದೆ ಎಂದರು.

ವಿವೇಕಾನಂದ ವಿದ್ಯಾಸಂಸ್ಥೆಯ ಅಧ್ಯಕ್ಷ ಎನ್.ಎನ್. ಶಂಭುಲಿಂಗಪ್ಪ ಅವರ ಅಧ್ಯಕ್ಷತೆಯಲ್ಲಿ ನಡೆದ ಕಾರ್ಯಕ್ರಮದಲ್ಲಿ ಹಿಂದುಳಿದ ಮತ್ತು ಅಲ್ಪಸಂಖ್ಯಾತ ಜಿಲ್ಲಾ ಅಧಿಕಾರಿ ಕೆ.ವಿ. ಸುರೇಶ್, ಸಾರ್ವಜನಿಕ ಶಿಕ್ಷಣ ಇಲಾಖೆ ಉಪನಿರ್ದೇಶಕ ಬಸವರಾಜ್, ಕಾರ್ಯಕ್ರಮ ಆಯೋಜಕರಾದ ಲೋಕೇಶ್ ಕಾಯರ್ಗ, ರಾಜೀವ್, ಶಿಕ್ಷಣ ಇಲಾಖೆ ಅಧಿಕಾರಿ ದೊಡ್ಡಮಲ್ಲಪ್ಪ, ಬಿಇಓ ಮಲ್ಲೇಸ್ವಾಮಿ ಇದ್ದರು. ಸುತ್ತಮುತ್ತಲ 18 ಶಾಲೆಗಳ ವಿದ್ಯಾರ್ಥಿಗಳು, ಅಧ್ಯಾಪಕ ವರ್ಗದವರು ಇದ್ದರು. ಈ ಸಂದರ್ಭ ವ್ಯಕ್ತಿತ್ವ ವಿಕಸನ ತಜ್ಞ ಚೇತನ್‍ರಾಮ್ ವಿದ್ಯಾರ್ಥಿಗಳಿಗೆ ಹಾಗೂ ಪಾಲಕರಿಗೆ ಒತ್ತಡ ನಿರ್ವಹಣೆ ಬಗ್ಗೆ ಉಪನ್ಯಾಸ ಹಾಗೂ ಯೋಗ ಗುರುಗಳ ಮೂಲಕ ಮನಸ್ಸಿನ ಉಲ್ಲಾಸದ ಕ್ರಿಯೆಗಳ ಬಗ್ಗೆ ಮಾಹಿತಿ ಒದಗಿಸಲಾಯಿತು.