ಸೋಮವಾರಪೇಟೆ,ಫೆ. 12 : ಸೋಮವಾರಪೇಟೆಯ ಲೇಖಕಿ ಶರ್ಮಿಳಾ ರಮೇಶ್ ಅವರು ನೂತನವಾಗಿ ಹೊರತಂದಿರುವ ‘ಮನದಂಗಳದ ಮಂದಾರ’ ಪುಸ್ತಕ ಕುಶಾಲನಗರದಲ್ಲಿ ನಡೆದ ಕನ್ನಡ ಸಾಹಿತ್ಯ ಸಮ್ಮೇಳನದಲ್ಲಿ ಬಿಡುಗಡೆಯಾಗಿದೆ.ಕೊಡಗಿನ ಮಹಿಳಾ ಬರಹಗಾರ್ತಿ ಯರಲ್ಲಿ ಗುರುತಿಸಿ ಕೊಂಡಿರುವ ಶರ್ಮಿಳಾ ಅವರು, ಈವರೆಗೆ ಎರಡು ಪುಸ್ತಕಗಳನ್ನು ಬರೆದಿದ್ದು, ಮೂರನೇ ಪುಸ್ತಕವಾಗಿ ಮನದಂಗಳದ ಮಂದಾರ ಮೂಡಿಬಂದಿದೆ. ಈ ಪುಸ್ತಕದಲ್ಲಿ ಲೇಖಕರು ವಿವಿಧ ಪತ್ರಿಕೆಗಳಿಗೆ ಬರೆದಿರುವ ಲೇಖನಗಳನ್ನು ಒಂದುಗೂಡಿಸಿ ಅಂಕಣ-ಬರಹಗಳ ಗೊಂಚಲನ್ನು ಓದುಗರಿಗೆ ಉಣಬಡಿಸಿದ್ದಾರೆ.

ಸೋಮವಾರಪೇಟೆ ನಗರದ ರೇಂಜರ್ಸ್ ಬ್ಲಾಕ್ ನಿವಾಸಿಯಾಗಿರುವ ಶರ್ಮಿಳಾ ಅವರು ಚಿಕ್ಕಂದಿನಿಂದಲೇ ಬರಹದ ಮೇಲೆ ಪ್ರೀತಿ ಬೆಳೆಸಿಕೊಂಡವರು. ಅವರ ಹಲವಷ್ಟು ಲೇಖನಗಳು ‘ಶಕ್ತಿ’ಯಲ್ಲೂ ಪ್ರಕಟ ವಾಗಿವೆ. ಲೇಖನಗಳೊಂದಿಗೆ ಕವನ ರಚನೆಯಲ್ಲೂ ಹಿಡಿತ ಸಾಧಿಸಿರುವ ಶರ್ಮಿಳಾ ಅವರ ಮೂರನೇ ಪುಸ್ತಕ ಇದೀಗ ಓದುಗರಿಗೆ ಲಭ್ಯವಿದೆ.ಇವರ ಪ್ರಥಮ ಪುಸ್ತಕ ‘ಕಂಪ್ಯೂಟರ್ ಲೋಕದ ಪುಟಾಣಿಗಾಗಿ’ ಕೃತಿಗೆ ಕೊಡಗಿನ ಗೌರಮ್ಮ ದತ್ತಿ ಪ್ರಶಸ್ತಿಯೂ ಲಭಿಸಿದೆ. ಎರಡನೇ ಕೃತಿ ‘ಕಂಪ್ಯೂಟರ್ ಯುಗದಲ್ಲೂ ಮಹಿಳೆಯ ಬಾಳು-ಗೋಳು’ ಪುಸ್ತಕದಲ್ಲಿ ಹೆಣ್ಣಿನ ಭಾವನಾತ್ಮಕ ತುಮುಲಗಳನ್ನು ಬಿಂಬಿಸಿದ್ದಾರೆ. ಇದೀಗ ಮೂರನೇ ಪುಸ್ತಕ ಬಿಡುಗಡೆಯಾಗಿದೆ.

ಮನದಂಗಳದ ಮಂದಾರ ಪುಸ್ತಕದಲ್ಲಿ ಶರ್ಮಿಳಾ ರಮೇಶ್ ಅವರ 30 ಲೇಖನಗಳ ಗೊಂಚಲು ಅಡಗಿದೆ. ಎಲ್ಲಾ ಲೇಖನಗಳನ್ನು ಒಳಗೊಂಡಂತೆ ಪುಸ್ತಕ ಹೊರ ಬಂದಿದೆ. ಕೋಪವೇ ಮನುಷ್ಯನಿಗೆ ದೊಡ್ಡ ಶತ್ರು, ಕೊಡಗಿನ ಕಾರ್ಮಿಕ ಬವಣೆ-ಬದುಕು, ನೀಚ ಕೃತ್ಯಗಳಿಗೆಲ್ಲಾ ಕೊನೆ ಎಂದು?, ಕೆಟ್ಟ ಚಟಗಳ ದುಷ್ಪರಿಣಾಮಗಳು, ಅದೃಷ್ಟ ನಂಬಿಕೆಗಳಿಗೆ ಜೋತು ಬೀಳದೇ ಗುರಿ ಸಾಧಕರಾಗಿ, ಪೌರ ಕಾರ್ಮಿಕರೆಂದಾಕ್ಷಣ ಮೂಗು ಮುರಿಯುವಿರೇಕೆ?

ಮಹಿಳೆಗೆ ಎಲ್ಲಿದೆ ಸಮಾನತೆ? ಮಹಿಳಾ ದಿನಾಚರಣೆ ಅರ್ಥಪೂರ್ಣ ವೆನಿಸಿದೆಯೇ? ವಿದ್ಯಾರ್ಥಿಗಳ ಭವಿಷ್ಯ ಎತ್ತ ಸಾಗುತ್ತಿದೆ? ತಾಯ್ತನದ ಮಹತ್ವ, ಪತ್ರಕರ್ತರ ಸಂಕಷ್ಟಗಳು, ಐತಿಹಾಸಿಕ ಹೊನ್ನಮ್ಮನ ಕೆರೆ, ಹಳ್ಳಿ ಜೀವನದ ಅರಿವಿರದ ಇಂದಿನ ಪೀಳಿಗೆ, ಆಧುನಿಕತೆಯಲ್ಲಿ ಅರ್ಥ ಕಳೆದುಕೊಳ್ಳುತ್ತಿರುವ ವಿವಾಹ ಪದ್ದತಿ.., ಹೀಗೆ ವಿವಿಧ ಮಜಲುಗಳ ಮೇಲೆ ಬೆಳಕು ಚೆಲ್ಲುವ ಪ್ರಯತ್ನವನ್ನು ಲೇಖಕರು ಪುಸ್ತಕದಲ್ಲಿ ಮಾಡಿದ್ದಾರೆ.

‘ಸಾಹಿತ್ಯದ ಬೆಳಕು ಪ್ರತಿಯೊಬ್ಬ ರಿಗೂ ಬೇಕು’ ಎಂಬ ಅಡಿ ಬರಹ ದೊಂದಿಗೆ ಅಂಕಣ ಬರಹಗಳ ಸಂಗ್ರಹ ಸಂಕಲನ ಸಿದ್ಧಗೊಂಡಿದ್ದು, ಪ್ರಕಾಶಕರಾದ ಮೈಸೂರಿನ ಗಾಯತ್ರಿ ಎಂಟರ್ ಪ್ರೈಸಸ್‍ನವರು ಮುದ್ರಿಸಿದ್ದಾರೆ. - ವಿಜಯ್ ಹಾನಗಲ್