ಚೆಟ್ಟಳ್ಳಿ, ಫೆ. 12: ದುಬಾರೆಯಲ್ಲಿ ಪಳಗುತ್ತಿರುವ 4 ಪುಂಡಾನೆಗಳಿಗೆ ಶ್ರೀರಾಮ, ಲಕ್ಷ್ಮಣ ಲವ ಹಾಗೂ ಕುಶ ಎಂದು ನಾಮಕರಣ ಮಾಡಲಾಗಿದೆ.ಕೊಡಗಿನಲ್ಲಿ ತೀರಾ ಪುಂಡಾಟಿಕೆ ತೋರುತ್ತಿದ್ದ ನಾಲ್ಕು ಪುಂಡಾನೆಗಳನ್ನು ಹಿಡಿಯುವಂತೆ ಸರಕಾರದ ಆದೇಶದ ಮೇರೆ ಕುಶಾಲನಗರದ ಅರಣ್ಯ ಇಲಾಖೆ ತಂಡ ನವಂಬರ್ ತಿಂಗಳಲ್ಲಿ ಎರಡು ದಿನಗಳಿಗೊಂದರಂತೆ ಚೆಟ್ಟಳ್ಳಿ ಸಮೀಪ ಮೀನುಕೊಲ್ಲಿ ಅರಣ್ಯದಿಂದ, ಸಿದ್ದಾಪುರ ಸಮೀಪದ ಬಿಬಿಟಿಸಿ ಹಾಗೂ ಬೀಟಿಕಾಡ್ ತೋಟದಲ್ಲಿದ್ದ 2 ಸೇರಿ ಒಟ್ಟು 4 ಪುಂಡಾನೆಗಳನ್ನು ಹಿಡಿದು ದುಬಾರೆಯಲ್ಲಿ ಪಳಗಿಸಲಾಗುತ್ತಿತ್ತು. ಇದೀಗ ಅವುಗಳಿಗೆ ನಾಮಕರಣ ಮಾಡಿರುವ ಬಗ್ಗೆ ಅರಣ್ಯ ಇಲಾಖೆಯಿಂದ ಮಾಹಿತಿ ದೊರೆತಿದೆ.
ಆನೆಗಳ ಬಗ್ಗೆ ನುರಿತ ವೈದ್ಯಾಧಿಕಾರಿ ಡಾ. ಉಮಾಶಂಕರ್ ಆನೆಗಳಿಗೆ ಹೆಸರನ್ನು ಸೂಚಿಸಿದ್ದು ಅರಣ್ಯ ಇಲಾಖಾಧಿಕಾರಿಗಳ ಆದೇಶದಂತೆ ಕುಶಾಲನಗರ ವಲಯ ಅಣ್ಯಾಧಿಕಾರಿ ನೆಹರು, ಉಪವಲಯ ಅರಣ್ಯಾಧಿಕಾರಿ ಕನ್ನಂಡ ರಂಜನ್ ಹಾಗೂ ಸಿಬ್ಬಂದಿ ವರ್ಗದವರೆಲ್ಲ ಸೇರಿ ನಾಮಕರಣ ಮಾಡಿದ್ದಾರೆ. ಬಿಬಿಟಿಸಿಯಲ್ಲಿ ಹಿಡಿದ ಆನೆಗೆ ಶ್ರೀರಾಮ, ಮೀನುಕೊಲ್ಲಿಯಲ್ಲಿ ಹಿಡಿದ ಆನೆಗಳಿಗೆ ಲಕ್ಷ್ಮಣ ಹಾಗೂ ಲವ, ಬೀಟಿಕಾಡ್‍ನಲ್ಲಿ ಹಿಡಿದ ಆನೆಗೆ ಕುಶ ಎಂದು ನಾಮಕರಣ ಮಾಡಿ ಆನೆಯ ಗಾತ್ರ, ವಯಸ್ಸು, ಗುರುತುಗಳನ್ನೆಲ್ಲಾ ದಾಖಲಿಸಲಾಗಿದೆ.
ಈ ತಿಂಗಳ ಕೊನೆಯಲ್ಲಿ ಅಥವಾ ಮಾರ್ಚ್ ತಿಂಗಳ ಮೊದಲವಾರದಲ್ಲಿ ಶ್ರೀರಾಮ, ಲಕ್ಷ್ಮಣ ಲವ ಹಾಗೂ ಕುಶರನ್ನು ಸಂಪೂರ್ಣ ಪಳಗಿದ ನಂತರ ಬಂಧನ ಮುಕ್ತಗೊಳಿಸಿ ಆನೆ ಶಿಬಿರದ ಇತರೆ ಆನೆಗಳೊಂದಿಗೆ ಬಿಡುವದಾಗಿ ಅರಣ್ಯ ಇಲಾಖೆ ಮೂಲಗಳು ತಿಳಿಸಿವೆ.
-ಪುತ್ತರಿರ ಕರುಣ್ ಕಾಳಯ್ಯ