ಮಡಿಕೇರಿ, ಫೆ. 12: ಕೊಡಗಿನ ಜನರ ಅಪೇಕ್ಷೆಯಂತೆ ಕರ್ನಾಟಕ ರಾಜ್ಯ ರಸ್ತೆ ಸಾರಿಗೆ ನಿಗಮ ಗ್ರಾಮೀಣ ಭಾಗ ಹಾಗೂ ಧಾರ್ಮಿಕ ಕೇಂದ್ರಗಳಿಗೆ ತೆರಳಲು ನೂತನ ಮಾರ್ಗಗಳಿಗೆ ಬಸ್ಗಳನ್ನು ನೀಡಿದ್ದು, ತಾ. 14 ರಂದು ಕೊಡ್ಲಿಪೇಟೆ-ಧರ್ಮಸ್ಥಳ ಮಾರ್ಗದ ಬಸ್ ಸಂಚಾರಕ್ಕೆ ಚಾಲನೆ ನೀಡಲಾಗುವದೆಂದು ನಿಗಮದ ನಿರ್ದೇಶಕ ಎಂ.ಎ. ಶೌಕತ್ ಆಲಿ ತಿಳಿಸಿದ್ದಾರೆ.ಪತ್ರಿಕಾ ಹೇಳಿಕೆ ನೀಡಿರುವ ಅವರು ನಾಳೆ ಬೆಳಗ್ಗೆ 7 ಗಂಟೆಗೆ ರಾಜ್ಯ ರೇಷ್ಮೆ ಮಾರಾಟ ಮಂಡಳಿಯ ಅಧ್ಯಕ್ಷರಾದ ಟಿ.ಪಿ. ರಮೇಶ್ ಅವರು ಕೊಡ್ಲಿಪೇಟೆಯಲ್ಲಿ ಬಸ್ಗೆ ಚಾಲನೆ ನೀಡಲಿದ್ದಾರೆ ಎಂದು ಹೇಳಿದ್ದಾರೆ. ತಮ್ಮ ಉಪಸ್ಥಿತಿಯಲ್ಲಿ ಸ್ಥಳೀಯ ಗ್ರಾ.ಪಂ. ಅಧ್ಯಕ್ಷರು, ಜಿ.ಪಂ. ಸದಸ್ಯರು, ಇತರ ಜನಪ್ರತಿನಿಧಿಗಳು ಹಾಗೂ ಸೋಮವಾರಪೇಟೆ ಬ್ಲಾಕ್ ಕಾಂಗ್ರೆಸ್ ಅಧ್ಯಕ್ಷರಾದ ಕೆ.ಎಂ.ಲೋಕೇಶ್ ಕುಮಾರ್ ಅವರುಗಳು ಬಸ್ಗೆ ಚಾಲನೆ ನೀಡುವ ಸಂದರ್ಭ ಹಾಜರಿರುವರು ಎಂದು ಎಂ.ಎ. ಶೌಕತ್ ಆಲಿ ತಿಳಿಸಿದ್ದಾರೆ.
ಪ್ರತಿದಿನ ಬೆಳಗ್ಗೆ 6 ಗಂಟೆಗೆ ಕೊಡ್ಲಿಪೇಟೆಯಿಂದ ಹೊರಡುವ ಕೆಎಸ್ಆರ್ಟಿಸಿ ಬಸ್ ಶನಿವಾರಸಂತೆ, ಸೋಮವಾರಪೇಟೆ, ಮಡಿಕೇರಿ, ಸಂಪಾಜೆ, ಸುಳ್ಯ, ಸುಬ್ರಹ್ಮಣ್ಯ ಮಾರ್ಗವಾಗಿ ಶ್ರೀಮಂಜುನಾಥ ಸ್ವಾಮಿ ದೇವಾಲಯದ ಮಧ್ಯಾಹ್ನದ ಪೂಜೆ ವೇಳೆಗೆ ಧರ್ಮಸ್ಥಳ ತಲುಪಲಿದೆ. ನಂತರ ಧರ್ಮಸ್ಥಳದಿಂದ ಮಧ್ಯಾಹ್ನ 2 ಗಂಟೆಗೆ ಹೊರಡುವ ಬಸ್ ರಾತ್ರಿ 7.30 ಕ್ಕೆ ಕೊಡ್ಲಿಪೇಟೆ ತಲುಪಲಿದೆ ಎಂದು ಎಂ.ಎ. ಶೌಕತ್ ಆಲಿ ಮಾಹಿತಿ ನೀಡಿದ್ದಾರೆ.