ಮಡಿಕೇರಿ, ಫೆ. 13: ಮಡಿಕೇರಿ ತಾಲೂಕು ಕನ್ನಡ ಸಾಹಿತ್ಯ ಪರಿಷತ್ ಕಾರ್ಯಕಾರಿ ಸಮಿತಿ ಸಭೆ ಕಸಾಪ ಕಚೇರಿಯಲ್ಲಿ ನಡೆಯಿತು. ತಾಲೂಕು ಅಧ್ಯಕ್ಷ ಕುಡೆಕಲ್ ಸಂತೋಷ್ ಅವರ ಅಧ್ಯಕ್ಷತೆಯಲ್ಲಿ ನಡೆದ ಸಭೆಯಲ್ಲಿ ಫೆ. ಮಾಸಾಂತ್ಯದೊಳಗೆ ದತ್ತಿನಿಧಿ ಕಾರ್ಯಕ್ರಮಗಳನ್ನು ಹಮ್ಮಿಕೊಳ್ಳುವಂತೆ ತೀರ್ಮಾನಿಸಲಾಯಿತು. ಅಲ್ಲದೆ, ಕರ್ನಾಟಕ ಏಕೀಕರಣ ವರ್ಷಾಚರಣೆ ಕಾರ್ಯಕ್ರಮವನ್ನು ಕೊಡಗು ಜಿಲ್ಲಾ ಪತ್ರಕರ್ತರ ಸಂಘದ ಸಹಯೋಗದೊಂದಿಗೆ ಆಚರಿಸುವಂತೆ ತೀರ್ಮಾನಿಸಲಾಯಿತು. ಇದರೊಂದಿಗೆ 8ನೇ ತಾಲೂಕು ಸಮ್ಮೇಳನ ಆಚರಣೆ ಸಂಬಂಧ ಹೋಬಳಿ ಘಟಕಗಳ ಪದಾಧಿಕಾರಿಗಳ ಸಭೆ ಕರೆದು ಅಭಿಪ್ರಾಯ, ಸಲಹೆ ಸೂಚನೆಯೊಂದಿಗೆ ಸ್ಥಳ ಹಾಗೂ ದಿನಾಂಕ ನಿಗದಿಪಡಿಸುವ ಬಗ್ಗೆ ನಿರ್ಧರಿಸಲಾಯಿತು.
ಸಮಿತಿಗೆ ನೇಮಕ
ಪರಿಷತ್‍ನ ಗೌರವ ಕಾರ್ಯದರ್ಶಿ ಸ್ಥಾನಕ್ಕೆ ವಕೀಲ ಬಾಳೆಯಡ ಕಿಶನ್ ಪೂವಯ್ಯ ಅವರನ್ನು ಅವಿರೋಧವಾಗಿ ನೇಮಕ ಮಾಡಲಾಯಿತು. ಕಿಶನ್ ಪೂವಯ್ಯ ಅವರು ಈ ಹಿಂದೆ ಕೂಡ ಗೌರವ ಕಾರ್ಯದರ್ಶಿಯಾಗಿ ಸೇವೆ ಸಲ್ಲಿಸಿದ್ದರು. ಇದರೊಂದಿಗೆ ಕಾರ್ಯಕಾರಿ ಸಮಿತಿಗೆ ಎಂ.ಬಿ. ಜೋಯಪ್ಪ, ಬಿ.ಎಸ್. ರುದ್ರಪ್ರಸನ್ನ, ದೇವಿಪ್ರಸಾದ್ ಬಾಳೆಕಜೆ, ಕೆ.ಡಿ. ದಯಾನಂದ, ಬಿ.ಎಸ್. ಜಯಪ್ಪ, ಎಂ.ಎಸ್. ಬಿದ್ದಪ್ಪ, ಅಂಬೆಕಲ್ ನವೀನ್ ಕುಶಾಲಪ್ಪ, ಆರ್.ಪಿ. ಚಂದ್ರಶೇಖರ್, ಹರೀಶ್ ಸರಳಾಯ, ರಾಜಣ್ಣ, ಬಿ.ಡಿ. ಕಪಿಲ್ ಕುಮಾರ್, ಎ.ಎ. ಪೆಮ್ಮಯ್ಯ, ಇಂದುಮತಿ ರವೀಂದ್ರ, ಪ್ರಭು ರೈ, ಕಾನೆಹಿತ್ಲು ಮೊಣ್ಣಪ್ಪ, ಲ್ಯಾನ್ಸಿ ಫೆರ್ನಾಂಡಿಸ್ ಅವರುಗಳನ್ನು ನೇಮಕ ಮಾಡಿಕೊಳ್ಳಲಾಗಿದೆ.
ಸಭೆಯಲ್ಲಿ ಇನ್ನುಳಿದಂತೆ ಇತರ ವಿಚಾರಗಳ ಬಗ್ಗೆ ಚರ್ಚಿಸಲಾಯಿತು. ಈ ಸಂದರ್ಭ ಕೋಶಾಧಿಕಾರಿ ಬಾಳೆಕಜೆ ಯೋಗೇಂದ್ರ, ನುತನ ಕಾರ್ಯದರ್ಶಿ ಬಾಳೆಯಡ ಕಿಶನ್ ಪೂವಯ್ಯ, ಸಮಿತಿ ಸದಸ್ಯರುಗಳಾದ ಹರೀಶ್ ಕಿಗ್ಗಾಲು, ಎಸ್.ಡಿ. ಪ್ರಶಾಂತ್, ಪರ್ಲಕೋಟಿ ಸುನಿತಾ ಪ್ರೀತು, ಚೋಕಿರ ಅನಿತಾ ದೇವಯ್ಯ, ಸರಸ್ವತಿ, ಡಿ.ಹೆಚ್. ಪುಷ್ಪ ಇನ್ನಿತರರಿದ್ದರು. ಗೌ ಕಾರ್ಯದರ್ಶಿ ಕೂಡಕಂಡಿ ದಯಾನಂದ ಸ್ವಾಗತಿಸಿ, ವಂದಿಸಿದರು.