ಮಡಿಕೇರಿ ಫೆ. 13 : ನಿರ್ಗತಿಕರು, ಅಸ್ವಸ್ಥರು, ಅನಾಥರನ್ನು ದತ್ತು ತೆಗೆದುಕೊಳ್ಳುವ ಮತ್ತು ಆರೋಗ್ಯದ ಬಗ್ಗೆ ಕಾಳಜಿ ತೋರುವ ಕೇರಳದ “ತನಲ್” (ನೆರಳು) ಆಶ್ರಯತಾಣದ ಶಾಖೆ ಕೊಡಗಿನಲ್ಲೂ ತನ್ನ ಸೇವೆಯನ್ನು ಆರಂಭಿಸಲಿದೆ ಎಂದು ಸಂಸ್ಥೆಯ ಅಧ್ಯಕ್ಷರಾದ ಡಾ.ವಿ.ಇದ್ರೀಸ್ ತಿಳಿಸಿದ್ದಾರೆ.
ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು 2008 ರಲ್ಲಿ ಆರಂಭಗೊಂಡ ಸಂಸ್ಥೆ ಇಲ್ಲಿಯವರೆಗೆ ಬೀದಿ ಪಾಲಾದ ಸುಮಾರು 700 ಮಂದಿಗೆ ಆಶ್ರಯ ನೀಡಿದೆ ಎಂದರು. ಕಿಡ್ನಿ ವೈಫಲ್ಯಕ್ಕೆ ಒಳಗಾದ ಬಡ ರೋಗಿಗಳಿಗೆ ಉಚಿತವಾಗಿ ಡಯಾಲಿಸಿಸ್ ಸೇವೆ ನೀಡುತ್ತಿರುವ ಈ ಕೇಂದ್ರ ಭಾರತದ ಅತಿ ದೊಡ್ಡ ಉಚಿತ ಸೇವೆಯ ಕೇಂದ್ರವಾಗಿದೆ. ಬುದ್ದಿಮಾಂದ್ಯ ಮಕ್ಕಳ ಚಿಕಿತ್ಸಾ ಕೇಂದ್ರ, ಹೆಚ್‍ಐವಿ ಹಾಗೂ ಕ್ಯಾನ್ಸರ್ ಪೀಡಿತರಿಗೂ ಕೇಂದ್ರಗಳನ್ನು ಸ್ಥಾಪಿಸಲಾಗಿದೆ. ಕೇರಳದಲ್ಲಿ ಈ ಸಂಸ್ಥೆಗೆ ಸೇರಿದ 11 ವಿವಿಧ ಕೇಂದ್ರಗಳು ಕಾರ್ಯಾಚರಿಸುತ್ತಿದ್ದು, ಕೊಡಗು ಜಿಲ್ಲೆಗೂ ಸೇವೆಯನ್ನು ವಿಸ್ತರಿಸುವ ಉದ್ದೇಶದಿಂದ ಶಾಖೆಯನ್ನು ಮಾರ್ಚ್ ಮೊದಲ ವಾರದಲ್ಲಿ ಆರಂಭಿಸಲಾಗುವ ದೆಂದರು.
ಸುಮಾರು 70 ಸೆಂಟ್ ಜಾಗದಲ್ಲಿ ಕಟ್ಟಡ ನಿರ್ಮಾಣ ವಾಗಲಿದ್ದು, ತಾತ್ಕಾಲಿಕವಾಗಿ ಹಳೆಯ ಕಟ್ಟಡದಲ್ಲಿ ಶಾಖೆಯನ್ನು ಆರಂಭಿಸಿ ಬಡವರ ಸೇವೆ ಮಾಡಲಾಗುವದೆಂದು ಡಾ.ವಿ.ಇದ್ರೀಸ್ ತಿಳಿಸಿದರು.
ಪ್ರಮುಖರಾದ ಮಹಮ್ಮದ್ ಮುಸ್ತಫ ಮಾತನಾಡಿ ಮಡಿಕೇರಿಯ ಕೆ.ಬಾಡಗ ಹಾಗೂ ಕಾಟಿಕೇರಿ ಗ್ರಾಮದಲ್ಲಿ ದಾನಿಗಳು ನೀಡಿದ ಜಾಗದಲ್ಲಿ ಕೇಂದ್ರ ಸ್ಥಾಪನೆಯಾಗಲಿದೆ ಎಂದರು. ಹೆಚ್. ಎಸ್. ಪ್ರೇಮ್‍ಕುಮಾರ್ ಮಾತನಾಡಿ ಜಾತಿ, ಮತ, ಪಂಗಡವನ್ನು ಮೀರಿ ನಿರ್ಗತಿಕರಿಗೆ ಆಶ್ರಯ ತಾಣವಾಗಿರುವ ತನಲ್‍ನ ಶಾಖೆಯ ಸ್ಥಾಪನೆಗೆ ಜಿಲ್ಲೆಯ ಜನ ಕೈಜೋಡಿಸಬೇಕೆಂದರು.