ಸೋಮವಾರಪೇಟೆ,ಫೆ.12: ಸೋಮವಾರಪೇಟೆ ತಾಲೂಕು ಒಕ್ಕಲಿಗರ ಯುವ ವೇದಿಕೆಯಿಂದ ಇಲ್ಲಿನ ಜಿಎಂಪಿ ಶಾಲಾ ಮೈದಾನದಲ್ಲಿ ಆಯೋಜಿಸಲಾಗಿರುವ ಎರಡನೇ ವರ್ಷದ ಕಬಡ್ಡಿ ಪಂದ್ಯಾಟಕ್ಕೆ ತಾ. 13ರಂದು (ಇಂದು) ಚಾಲನೆ ದೊರಕಲಿದ್ದು, ತಾ. 14ರಂದು (ನಾಳೆ) ಫೈನಲ್ ಪಂದ್ಯಾವಳಿಗಳು ಜರುಗಲಿವೆ.
ಪ್ರಥಮ ವರ್ಷದ ಪಂದ್ಯಾಟದ ಯಶಸ್ಸಿನ ಉತ್ಸಾಹದಲ್ಲಿರುವ ಯುವ ವೇದಿಕೆಯ ತಂಡ ಈ ವರ್ಷದ ಪಂದ್ಯಾಟವನ್ನು ಇನ್ನಷ್ಟು ಆಕರ್ಷಣೀಯವಾಗಿಸಲು ಅತೀ ಉತ್ಸಾಹದಿಂದ ಸಿದ್ಧತೆಗಳನ್ನು ಪೂರ್ಣಗೊಳಿಸಿದೆ.
ಇಲ್ಲಿನ ಜಿಎಂಪಿ ಶಾಲೆಯ ಮೈದಾನವನ್ನು ಕಬಡ್ಡಿ ಕ್ರೀಡೆಗೆ ಸಜ್ಜು ಗೊಳಿಸಲಾಗಿದ್ದು, ಕಬಡ್ಡಿ ಕೋರ್ಟ್‍ನ ಸುತ್ತ ಸುಮಾರು 3 ಸಾವಿರ ಮಂದಿ ಕುಳಿತುಕೊಳ್ಳಲು ಬೃಹತ್ ಗ್ಯಾಲರಿ ನಿರ್ಮಾಣ ಮಾಡಲಾಗಿದೆ.
ಪಂದ್ಯಾಟದಲ್ಲಿ ಪ್ರಥಮ ಬಹುಮಾನವಾಗಿ ರೂ. 1ಲಕ್ಷ ನಗದು ಹಾಗೂ ಆಕರ್ಷಕ ಟ್ರೋಫಿ, ದ್ವಿತೀಯ ಬಹುಮಾನವಾಗಿ 60 ಸಾವಿರ ನಗದು ಮತ್ತು ಟ್ರೋಪಿ, 3 ಮತ್ತು 4ನೇ ಬಹುಮಾನವಾಗಿ 30 ಸಾವಿರ ನಗದು ಮತ್ತು ಟ್ರೋಫಿ ಸೇರಿದಂತೆ ವೈಯಕ್ತಿಯ ವಿಭಾಗದಲ್ಲೂ ಪ್ರಶಸ್ತಿಯನ್ನು ನೀಡಲಾಗುತ್ತಿದೆ.
ಕಬಡ್ಡಿ ಪಂದ್ಯಾಟದಲ್ಲಿ ಕರ್ನಾಟಕ ರಾಜ್ಯ ಕಬಡ್ಡಿ ಅಮೆಚೂರ್ ಅಸೋಸಿಯೇಷನ್‍ನಡಿ ನೋಂದಾಯಿಸಲ್ಪಟ್ಟ 18 ತಂಡಗಳು ಹಾಗೂ ಕೊಡಗಿನ 6 ತಂಡಗಳು ಪಾಲ್ಗೊಳ್ಳಲಿದ್ದು, ಪ್ರೋ ಕಬಡ್ಡಿ ಆಟಗಾರರಾದ ಸುಖೇಶ್ ಹೆಗ್ಡೆ, ಪ್ರಶಾಂತ್ ರೈ, ರಾಜ್‍ಗುರು, ಶಬ್ಬೀರ್ ಬಾಬು ಸೇರಿದಂತೆ ರಾಜ್ಯದ ವಿವಿಧೆಡೆಗಳಿಂದ ಕಬಡ್ಡಿ ಪಟುಗಳು ಪಂದ್ಯಾಟದಲ್ಲಿ ಭಾಗವಹಿಸಲಿದ್ದಾರೆ.
ತಾ. 13ರಂದು ಅಪರಾಹ್ನ 3 ಗಂಟೆಗೆ ಕಾರ್ಯಕ್ರಮವನ್ನು ಸಂಸದ ಪ್ರತಾಪ್ ಸಿಂಹ, ಕ್ರೀಡಾಕೂಟವನ್ನು ರಾಜ್ಯ ಒಕ್ಕಲಿಗರ ಬ್ರಿಗೇಡ್ ಅಧ್ಯಕ್ಷ ಗಿರೀಶ್ ಮಲ್ಲಪ್ಪ ಉದ್ಘಾಟಿಸಲಿದ್ದಾರೆ. ಕಾರ್ಯಕ್ರಮದಲ್ಲಿ ಒಕ್ಕಲಿಗರ ಯುವ ವೇದಿಕೆ ಅಧ್ಯಕ್ಷ ಬಿ.ಜೆ. ದೀಪಕ್, ಉದ್ಯಮಿಗಳಾದ ನಾಪಂಡ ಮುತ್ತಪ್ಪ, ಮುದ್ದಪ್ಪ ಸಹೋದರರು, ಕೊತ್ನಳ್ಳಿ ಅರುಣ್ ಕುಮಾರ್, ವಿಶೇಷ ಆಹ್ವಾನಿತರಾಗಿ ವಸತಿ ಸಚಿವ ಎಂ. ಕೃಷ್ಣಪ್ಪ, ರೇಷ್ಮೆ ಮತ್ತು ಪಶು ಸಂಗೋಪನೆ ಸಚಿವ ಎ. ಮಂಜು, ಶಾಸಕರಾದ ಅಪ್ಪಚ್ಚು ರಂಜನ್, ಪ್ರಿಯಾ ಕೃಷ್ಣಪ್ಪ, ರಾಜ್ಯ ಅಮೆಚೂರ್ ಕಬಡ್ಡಿ ಅಸೋಸಿಯೇಷನ್ ಅಧ್ಯಕ್ಷ ಹನುಮಂತೇಗೌಡ, ಕೊಡಗು ಜಿಲ್ಲಾ ಅಮೆಚೂರ್ ಕಬಡ್ಡಿ ಅಸೋಸಿಯೇಷನ್‍ನ ಉಪಾಧ್ಯಕ್ಷ ಮಂಜೂರು ತಮ್ಮಣ್ಣಿ, ಜಿಲ್ಲಾ ಒಕ್ಕಲಿಗರ ಸಂಘದ ಅಧ್ಯಕ್ಷ ಎಸ್.ಎಂ. ಚಂಗಪ್ಪ, ತಾಲೂಕು ಒಕ್ಕಲಿಗರ ಸಂಘದ ಅಧ್ಯಕ್ಷ ಎ.ಆರ್. ಮುತ್ತಣ್ಣ ಮತ್ತಿತರ ಗಣ್ಯರು ಭಾಗ ವಹಿಸಲಿದ್ದಾರೆ.
ತಾ. 14ರ ರಾತ್ರಿ 10 ಗಂಟೆಗೆ ಸಮಾರೋಪ ಸಮಾರಂಭ ನಡೆಯಲಿದ್ದು, ಆದಿ ಚುಂಚನಗಿರಿ ಮಹಾಸಂಸ್ಥಾನದ ಶ್ರೀ ನಿರ್ಮಲಾ ನಂದನಾಥ ಸ್ವಾಮೀಜಿ ದಿವ್ಯ ಸಾನ್ನಿಧ್ಯ ವಹಿಸಲಿದ್ದಾರೆ. ಮುಖ್ಯ ಅತಿಥಿಗಳಾಗಿ ಇಂಧನ ಸಚಿವ ಡಿ.ಕೆ. ಶಿವಕುಮಾರ್, ಮಾಜಿ ಉಪ ಮುಖ್ಯಮಂತ್ರಿ ಆರ್. ಅಶೋಕ್, ಮಾಜಿ ಸಚಿವ ಬಿ.ಎ. ಜೀವಿಜಯ, ಶಾಸಕ ವೈ.ಎನ್. ನಾರಾಯಣಸ್ವಾಮಿ ಮತ್ತಿತರ ಗಣ್ಯರು ಭಾಗವಹಿಸಲಿದ್ದಾರೆ.
ತಾಲೂಕಿನ ಕ್ರೀಡಾಪಟುಗಳಾದ ಅಂತರರಾಷ್ಟ್ರೀಯ ಹಾಕಿ ಆಟಗಾರ ಗೌಡಳ್ಳಿ ಹರಿಪ್ರಸಾದ್, ಮಾಜೀ ಕಬಡ್ಡಿ ಆಟಗಾರ ದೇವರಾಜು, ರಾಷ್ಟ್ರೀಯ ಕಬಡ್ಡಿ ಆಟಗಾರ್ತಿ ಡಿ.ಕೆ. ರಂಜಿತ, ಐ.ಎನ್. ತ್ರಿವೇನ್ ಕುಮಾರ್, ಗೌಡಳ್ಳಿಯ ಎಚ್.ಕೆ. ಪೃಥ್ವಿ, ನಗರೂರು ಪ್ರಕಾಶ್, ಗೌಡಳ್ಳಿ ಪ್ರಸಿ ಅವರುಗಳನ್ನು ಸನ್ಮಾನಿಸಲಾಗುವದು ಎಂದು ಯುವ ವೇದಿಕೆ ಅಧ್ಯಕ್ಷ ಬಿ.ಜೆ. ದೀಪಕ್ ತಿಳಿಸಿದ್ದಾರೆ.