ಗೋಣಿಕೊಪ್ಪಲು, ಫೆ. 12: ಪೆÇನ್ನಂಪೇಟೆ ಪ್ರವಾಸಿ ಮಂದಿರದ ಸಮೀಪದ ಸುಮಾರು 0.90 ಎಕರೆ ನಿವೇಶನದಲ್ಲಿ 16.01.2010ರಂದು ಭೂಮಿಪೂಜೆಯೊಂದಿಗೆ ಶಿಲಾನ್ಯಾಸ ಗೊಂಡಿದ್ದ ಸುಮಾರು ರೂ.12 ಕೋಟಿ ವೆಚ್ಚದ ಭಾರತದ ಪ್ರಪ್ರಥಮ ಹೋಬಳಿ ಮಟ್ಟದ ಸುಸಜ್ಜಿತ ನ್ಯಾಯಾಲಯ ಸಮುಚ್ಛಯದ ಕಾಮಗಾರಿ ಶೇ.80 ರಷ್ಟು ಪೂರ್ಣ ಗೊಂಡಿದ್ದು ಏಪ್ರಿಲ್ ದ್ವಿತೀಯವಾರ ದಲ್ಲಿ ಉದ್ಘಾಟನೆಗೊಳ್ಳುವ ಸಾಧ್ಯತೆ ಇದೆ. ರಾಜ್ಯ ಉಚ್ಛನ್ಯಾಯಾಲಯದ ನ್ಯಾಯಮೂರ್ತಿಗಳಲ್ಲದೆ, ಸುಪ್ರೀಂಕೋರ್ಟ್ ನ್ಯಾಯಮೂರ್ತಿ ಗಳು ಸಮಾರಂಭದಲ್ಲಿ ಪಾಲ್ಗೊಳ್ಳುವ ನಿರೀಕ್ಷೆ ಇದೆ ಎನ್ನಲಾಗಿದೆ.
ರಾಜ್ಯ ಉಚ್ಛನ್ಯಾಯಾಲಯ ನ್ಯಾಯಮೂರ್ತಿ ಹಾಗೂ ಕೊಡಗು ಜಿಲ್ಲಾ ನ್ಯಾಯಾಲಯಗಳ ಆಡಳಿತಾತ್ಮಕ ನ್ಯಾಯಮೂರ್ತಿ ಬೂದಿಹಾಳ್ ಆರ್.ಬಿ. ಅವರು ನಿನ್ನೆ ಪೆÇನ್ನಂಪೇಟೆಗೆ ಭೇಟಿ ನೀಡಿ ನೂತನ ನ್ಯಾಯಾಲಯದ ಕಾಮಗಾರಿ ವೀಕ್ಷಣೆ ಮಾಡಿ ತೃಪ್ತಿ ವ್ಯಕ್ತಪಡಿಸಿದರಲ್ಲದೆ, ಸಮರೋಪಾದಿ ಯಲ್ಲಿ ಹಗಲೂ ರಾತ್ರಿ ಕಾರ್ಯ ನಿರ್ವಹಿಸಿ ಶೀಘ್ರ ಗುತ್ತಿಗೆದಾರರು ‘ನ್ಯಾಯಾಲಯ ಕಲಾಪ’ ಆರಂಭಿಸಲು ಹಸ್ತಾಂತರಿಸುವಂತೆ ಸೂಚನೆ ನೀಡಿದ್ದಾರೆ. ಮಡಿಕೇರಿ ಲೋಕೋಪಯೋಗಿ ಕಾರ್ಯಪಾಲಕ ಅಭಿಯಂತರ ಪ್ರಭು ಎಸ್.ಎಚ್. ಅವರಿಗೆ ಕಾಮಗಾರಿ ಸಮರೋಪಾದಿ ಯಲ್ಲಿ ನಡೆಯಲು ಗುತ್ತಿಗೆದಾರರ ಬಾಕಿ ಮೊತ್ತ ಪಾವತಿಸಲು ಇದೇ ಸಂದರ್ಭ ಹೇಳಿದರು.
ಬೆಂಗಳೂರಿನ ಬಾಲಾಜಿ ಪ್ರಾಜೆಕ್ಟ್ ಗುತ್ತಿಗೆದಾರ ವಿ.ಶೇಖರ್ ನೇತೃತ್ವದಲ್ಲಿ ಮೇ.2014 ರಂದು ಆರಂಭಗೊಂಡ ಕಾಮಗಾರಿ ವರ್ಷ ಮುಂಚಿತ ವಾಗಿಯೇ ಮುಗಿಯಬೇಕಾಗಿತ್ತು. ಒಟ್ಟು 18 ತಿಂಗಳ ಕಾಮಗಾರಿ ಅವಧಿಯಲ್ಲಿ ಮಳೆಗಾಲವನ್ನು ಹೊರತುಪಡಿಸಿ ಪೂರ್ಣಗೊಳಿಸಲು ಟೆಂಡರ್‍ನಲ್ಲಿ ಅವಕಾಶ ಕಲ್ಪಿಸಲಾಗಿತ್ತು.ಕೆಲವು ತಾಂತ್ರಿಕ ಕಾರಣಗಳು, ಮರಳು ಇತ್ಯಾದಿ ಅಭಾವದಿಂದಾಗಿ ವಿಳಂಬವಾಗಿತ್ತು. ಸುಮಾರು ರೂ.9.50ಕೋಟಿ
(ಮೊದಲ ಪುಟದಿಂದ) ವೆಚ್ಚದಲ್ಲಿ ಮೂರು ಅಂತಸ್ತಿನ ಮೂರು ಕೋರ್ಟ್ ಹಾಲ್ (ಕಲಾಪದ ಬಾವಿ) ಹಾಗೂ ಲೋಕ ಅದಾಲತ್ ಇತ್ಯಾದಿಗಳ ಮಿನಿ ಕೋರ್ಟ್ ಹಾಲ್‍ಗಳ ಸಮುಚ್ಛಯ, ಪಶ್ಚಿಮ ಭಾಗದಲ್ಲಿ ನ್ಯಾಯಾಲಯ ಹಿಂಭಾಗ ಪೆÇನ್ನಂಪೇಟೆ ಸಿವಿಲ್ ನ್ಯಾಯಾಧೀಶರು ಮತ್ತು ಜೆಎಂಎಫ್‍ಸಿ ನ್ಯಾಯಾಧೀಶರ ವಸತಿ ಗೃಹ ಸುಮಾರು ರೂ.1 ಕೋಟಿಯಿಂದ ರೂ.1.50 ಕೋಟಿ ವೆಚ್ಚದಲ್ಲಿ ಗುತ್ತಿಗೆದಾರ ಈಶ್ವರ್‍ಕುಮಾರ್ ನೇತ್ರತ್ವದಲ್ಲಿ ಕಾಮಗಾರಿ ಪ್ರಗತಿಯಲ್ಲಿದೆ.
ನೆಲಅಂತಸ್ತಿನಲ್ಲಿ ವಕೀಲರ ವಾಹನ ಪಾರ್ಕಿಂಗ್ ವ್ಯವಸ್ಥೆ, ಮೂರು ಅಂತಸ್ತಿಗೂ ಲಿಫ್ಟ್ ವ್ಯವಸ್ಥೆ ಮಾಡಲಾಗಿದೆ. ಅತ್ಯುತ್ತಮ ಕ್ಯಾಂಟೀನ್ ವ್ಯವಸ್ಥೆಗೂ ವಿಶಾಲವಾದ ಕಟ್ಟಡ ನಿರ್ಮಾಣ ಮಾಡಲಾಗಿದೆ. ಪ್ರತೀ ಅಂತಸ್ತಿನಲ್ಲಿಯೂ ಮಹಿಳೆಯರು, ಪುರುಷರು, ವಿಕಲಚೇತನರಿಗಾಗಿ ಒಟ್ಟು 20 ಶೌಚಾಲಯ ನಿರ್ಮಾಣವಾಗುತ್ತಿದೆ. ಕಕ್ಷಿದಾರರು ಇನ್ನು ಮುಂದೆ ಪ್ರತ್ಯೇಕ ಕೊಠಡಿಯಲ್ಲಿ ತಮ್ಮ ಸರತಿ ಬರುವವರೆಗೂ ಕುಳಿತುಕೊಳ್ಳಲು ವ್ಯವಸ್ಥೆ ಇದೆ. ಮಹಿಳೆಯರಿಗೆ ಪ್ರತ್ಯೇಕ ವಿಶ್ರಾಂತಿ ಕೊಠಡಿ, ಪುರುಷ ಮತ್ತು ಮಹಿಳಾ ವಕೀಲರಿಗೂ ಪ್ರತ್ಯೇಕ ಕೊಠಡಿ, ಗ್ರಂಥಾಲಯ ವ್ಯವಸ್ಥೆಯೂ ಇದೆ.
ನ್ಯಾಯಾಲಯ ಮುಂಭಾಗ ದಕ್ಷಿಣ ಭಾಗಕ್ಕೆ ಸುಸಜ್ಜಿತ ಭದ್ರತಾ ಕೊಠಡಿ ಪ್ರತ್ಯೇಕವಾಗಿ ನಿರ್ಮಾಣ ಮಾಡಲಾಗಿದೆ.
ಅತ್ಯಾಧುನಿಕ ನ್ಯಾಯಾಲಯ
ಉಡುಪಿಯಲ್ಲಿ ಕಳೆದ ಸಾಲಿನಲ್ಲಿ ನೂತನ ಜಿಲ್ಲಾ ನ್ಯಾಯಾಲಯ ಉದ್ಘಾಟನೆ ಸಂದರ್ಭ ಹಳೆಯ ಪೀಠೋಪಕರಣಗಳನ್ನೇ ವಕೀಲರು, ನ್ಯಾಯಾಧೀಶರು ಬಳಸಬೇಕಾದ ಅನಿವಾರ್ಯತೆ ಎದುರಾಗಿತ್ತು. ಟೆಂಡರ್ ಮೊತ್ತ ದಲ್ಲಿ ಪೀಠೋಪಕರಣದ ಬಾಪ್ತು ಸೇರಿರಲಿಲ್ಲ. ಆದರೆ, ಈ ಬಾರಿ ಟೆಂಡರ್‍ನಲ್ಲಿಯೇ ಪೀಠೋಪಕರಣ ಗಳಿಗಾಗಿ ರೂ. 33 ಲಕ್ಷ ಕಾದಿರಿಸ ಲಾಗಿದೆ ಎಂದು ಕಾರ್ಯಪಾಲಕ ಅಭಿಯಂತರ ಪ್ರಭು ಇದೇ ಸಂದರ್ಭ ಮಾಹಿತಿ ನೀಡಿದರು.
ಕಾಮಗಾರಿ ವೀಕ್ಷಣೆ ಮಾಡಿ ತಮ್ಮ ತೃಪ್ತಿ ವ್ಯಕ್ತಪಡಿಸಿದ ನ್ಯಾಯಮೂರ್ತಿ ಬೂದಿಹಾಳ್ ಅವರು, ರಾಜ್ಯದಲ್ಲಿಯೇ ತಾಲೂಕು ಮಟ್ಟದಲ್ಲಿ ಸುಸಜ್ಜಿತ, ಆಧುನಿಕ ಶೈಲಿಯ ನ್ಯಾಯಾಲಯ ಸಮುಚ್ಛಯ ಇದಾಗಿದೆ ಎಂದು ಅಭಿಪ್ರಾಯಪಟ್ಟರು.
ನಾಗರಹೊಳೆ, ಬಿರುನಾಣಿ, ತಿತಿಮತಿ, ಬಾಳೆಲೆ, ಬಿ.ಶೆಟ್ಟಿಗೇರಿ, ಗೋಣಿಕೊಪ್ಪಲು, ಪೆÇನ್ನಂಪೇಟೆ ಒಳಗೊಂಡಂತೆ ತಲಾ ನಾಲ್ಕು ಪೆÇಲೀಸ್ ಠಾಣಾ ವ್ಯಾಪ್ತಿ ಹಾಗೂ ನಾಲ್ಕು ಹೋಬಳಿ ಮಟ್ಟದ ಗುಡ್ಡಗಾಡು ಪ್ರದೇಶದ ಜನತೆಗೆ ಉದ್ಧೇಶಿತ ನ್ಯಾಯಾಲಯದಿಂದ ಪ್ರಯೋಜನ ವಾಗಲಿದೆ. ಜನತೆಯ ಮನೆಬಾಗಿಲಿಗೆ ನ್ಯಾಯಾಲಯ ಎಂಬ ಪರಿಕಲ್ಪನೆ ಯೊಂದಿಗೆ ಪೆÇನ್ನಂಪೇಟೆಯಲ್ಲಿ ಉತ್ತಮ ನ್ಯಾಯಾಲಯ ಸಂಕೀರ್ಣ ನಿರ್ಮಾಣವಾಗಿರುವದಾಗಿ ನ್ಯಾ. ಬೂದಿಹಾಳ್ ಹೇಳಿದರು.
ಪರಿಶೀಲನೆ ಸಂದರ್ಭ ಹೆಚ್ಚುವರಿ ಜಿಲ್ಲಾ ಮತ್ತು ಸೆಷನ್ಸ್ ನ್ಯಾಯಾಧೀಶ ರಾದ ಟಿ.ಎಂ.ನಾಗರಾಜ್, ಪೆÇನ್ನಂಪೇಟೆ ಸಿವಿಲ್ ನ್ಯಾಯಾಲಯ ಮತ್ತು ಜೆಎಂಎಫ್‍ಸಿ ನ್ಯಾಯಾಲಯದ ನ್ಯಾಯಾಧೀಶರಾದ ಎಂ.ಇ. ಮೋಹನ್‍ಗೌಡ ಉಪಸ್ಥಿತರಿದ್ದರು.
ವಕೀಲರ ಸಂಘದಿಂದ ಮನವಿ
ನ್ಯಾಯಮೂರ್ತಿ ಬೂದಿಹಾಳ್ ಅವರು ಕಟ್ಟಡ ಸಮುಚ್ಛಯ ವೀಕ್ಷಣೆ ನಂತರ ನಿರೀಕ್ಷಣಾ ಮಂದಿರದಲ್ಲಿ ಪೆÇನ್ನಂಪೇಟೆ ವಕೀಲರ ಸಂಘದ ಅಧ್ಯಕ್ಷ ಎಸ್.ಡಿ.ಕಾವೇರಪ್ಪ ಅವರಿಂದ ಹಲವು ಬೇಡಿಕೆಗಳ ಮನವಿ ಪತ್ರವನ್ನು ಸ್ವೀಕರಿಸಿದರು. ಪ್ರಮುಖವಾಗಿ ನ್ಯಾಯಾಲಯ ಮುಕ್ತ ವಾತಾವರಣದಲ್ಲಿರಲು ನಿರೀಕ್ಷಣಾ ಮಂದಿರ ತೆರವು ಹಾಗೂ ಸಿವಿಲ್ ನ್ಯಾಯಾಧೀಶರು (ಹಿರಿಯ ಶ್ರೇಣಿ) ನೇಮಕದ ಅಗತ್ಯತೆ ಕುರಿತು ಮನವಿ ಮಾಡಿದರು. ಇದೇ ಸಂದರ್ಭ ಪೆÇನ್ನಂಪೇಟೆ ಸಿವಿಲ್ ಮತ್ತು ಜೆಎಂಎಫ್‍ಸಿ ನ್ಯಾಯಾಧೀಶರಾದ ಮೋಹನ್‍ಗೌಡ ಅವರು ಕಾಮಗಾರಿ ಸಂದರ್ಭ ಹೆಚ್ಚು ಆಸಕ್ತಿ ವಹಿಸಿ ಮಾರ್ಗದರ್ಶನ ನೀಡಿರುವ ಹಿನ್ನೆಲೆ ನೂತನ ನ್ಯಾಯಾಲಯ ಶೀಘ್ರಗತಿಯಲ್ಲಿ ಪೂರ್ಣಗೊಳ್ಳಲು ಕಾರಣವಾಗಿದೆ ಎಂದು ಸಂಘದ ಅಧ್ಯಕ್ಷ ಕಾವೇರಪ್ಪ ಅವರು ನ್ಯಾ.ಬೂದಿಹಾಳ್ ಅವರಲ್ಲಿ ವಿವರಿಸಿದರು.
ಸಮಾರಂಭ ಮುನ್ನ ಸಭೆ
ಏಪ್ರಿಲ್ 10 ಕ್ಕೂ ಮುನ್ನ ಯೋಜಿತವಾಗಿ ಕಾಮಗಾರಿ ಪೂರ್ಣಗೊಂಡಲ್ಲಿ ಉದ್ಘಾಟನಾ ಸಮಾರಂಭವನ್ನು ಏ. 13 ರಂದು ಅದ್ಧೂರಿಯಾಗಿ ಆಚರಿಸಲು ಸಾರ್ವಜನಿಕ ಸಹಭಾಗಿತ್ವದೊಂದಿಗೆ ಪೆÇನ್ನಂಪೇಟೆ ವಕೀಲರ ಸಂಘದ ಅಧ್ಯಕ್ಷ ಎಸ್.ಡಿ.ಕಾವೇರಪ್ಪ ಅಧ್ಯಕ್ಷತೆಯಲ್ಲಿ ಶೀಘ್ರ ಸಭೆ ಕರೆಯಲಾಗುವದು ಎಂದು ಸಂಘದ ಕಾರ್ಯದರ್ಶಿ, ನೋಟರಿ ಎಂ.ಟಿ. ಕಾರ್ಯಪ್ಪ ತಿಳಿಸಿದ್ದಾರೆ.
ನ್ಯಾಯಮೂರ್ತಿಗಳ ಭೇಟಿ ಸಂದರ್ಭ ಹಿರಿಯ ವಕೀಲರಾದ ಎ.ಟಿ. ಭೀಮಯ್ಯ, ಕೆ.ಕೆ. ಭೀಮಯ್ಯ, ರಾಜ್ಯ ಉಚ್ಛನ್ಯಾಯಾಲಯ ವಕೀಲ ಎಂ.ಎಂ. ಅಯ್ಯಪ್ಪ, ನ್ಯಾಯಮೂರ್ತಿ ಬೂದಿಹಾಳ್ ಅವರ ಪತ್ನಿ ಪದ್ಮಾ ಮತ್ತು ಪುತ್ರಿ ಗಂಗಾ, ಪೆÇನ್ನಂಪೇಟೆ ವಕೀಲರ ಸಂಘದ ಉಪಾಧ್ಯಕ್ಷ ಎಂ.ಜಿ. ರಾಖೇಶ್, ಜಂಟಿ ಕಾರ್ಯದರ್ಶಿ ವಿ.ಜಿ. ಮಂಜುನಾಥ್, ನಿರ್ದೇಶಕ ರಾದ ವಿ.ಎಸ್. ಸುರೇಶ್, ಸಿ.ಬಿ. ಅನಿತಾ, ಮೋನಿ ಪೆÇನ್ನಪ್ಪ, ಎಂ.ಪಿ. ಅಪ್ಪಚ್ಚು, ಕೆ.ಎಂ. ಗಣಪತಿ, ಎ.ಕೆ. ಪೂಣಚ್ಚ, ಎಂ.ಬಿ. ನಾಣಯ್ಯ, ಎಂ.ಎಸ್. ಕಾಶಿಯಪ್ಪ, ಸೈಟ್ ಇಂಜಿನಿಯರ್ ಪ್ರಸಾದ್‍ಬಾಬು, ವೀರಾಜಪೇಟೆ ಲೋಕೋಪಯೋಗಿ ಇಲಾಖೆಯ ಸಹಾಯಕ ಕಾರ್ಯಪಾಲಕ ಅಭಿಯಂತರ ಎಂ.ಇ. ಸುರೇಶ್ ಮುಂತಾದವರು ಉಪಸ್ಥಿತರಿದ್ದರು.