ಮಡಿಕೇರಿ, ಫೆ. 13: ರಾಜ್ಯ ಸರ್ಕಾರ ಕಾನೂನು ಸಲಹೆಗಾರ ಸ್ಥಾನಕ್ಕೆ ತಾನು ರಾಜೀನಾಮೆ ನೀಡಿರುವದು ಎಂಎಲ್ಸಿ ಸ್ಥಾನಕ್ಕಾಗಿ ಎಂಬ ವದಂತಿ ಸುಳ್ಳು. ತಾನು ಮುಖ್ಯಮಂತ್ರಿಯವರೊಂದಿಗೆ ಚರ್ಚಿಸಿ ರಾಜೀನಾಮೆ ನೀಡಿದ್ದು, ಮುಂದಿನ ದಿನಗಳಲ್ಲಿ ಮುಖ್ಯಮಂತ್ರಿ ಸಿದ್ದರಾಮಯ್ಯ ಅವರ ಸೇನಾನಿಯಾಗಿ ಕೆಲಸ ಮಾಡುತ್ತೇನೆ ಎಂದು ಎಐಸಿಸಿ ವಕ್ತಾರ ಬ್ರಿಜೇಶ್ ಕಾಳಪ್ಪ ಹೇಳಿದರು.
ಸುದರ್ಶನ ಅತಿಥಿಗೃಹದಲ್ಲಿ ಸುದ್ದಿಗೋಷ್ಠಿಯಲ್ಲಿ ಅವರು ಮಾತನಾಡಿದರು. ಮಾಜಿ ಮುಖ್ಯಮಂತ್ರಿ ಎಸ್. ಎಂ. ಕೃಷ್ಣ ಸೇರಿದಂತೆ ಯಾವದೇ ಕಾಂಗ್ರೆಸ್ ನಾಯಕರು ಬಿಜೆಪಿಗೆ ಸೇರಿದರೆ ಅಂತವರನ್ನು ಬಿಜೆಪಿ ‘ ಶೋಕೇಸ್’ ನಲ್ಲಿಡುವದಿಲ್ಲ. ಬದಲಿಗೆ ‘ಗ್ಯಾರೇಜ್’ ನಲ್ಲಿಡುತ್ತಾರೆ ಎಂದು ಕುಟುಕಿದ ಬ್ರಿಜೇಶ್, ಇದಕ್ಕೆ ಬಂಗಾರಪ್ಪ, ಡಿ.ಬಿ. ಚಂದ್ರೇಗೌಡರಂತಹ ಹಲವು ಉದಾಹರಣೆಗಳು ನಮ್ಮ ಮುಂದಿವೆ ಎಂದರು.
ಬಿಜೆಪಿಯಲ್ಲಿ ಮಾರ್ಗದರ್ಶಕ ಮಂಡಳಿ ಇಲ್ಲ. ಅಲ್ಲಿರುವದು ಮೂಕದರ್ಶಕ ಮಂಡಳಿ ಎಂದು ಟೀಕಿಸಿದ ಅವರು, ಅಡ್ವಾಣಿ ಸೇರಿದಂತೆ ಹಲವರು ಅಲ್ಲಿನ ಸದಸ್ಯರಾಗಿದ್ದು, ಸದ್ಯದಲ್ಲೇ ಯಡಿಯೂರಪ್ಪ ಕೂಡ ಅಲ್ಲಿಗೆ ಸೇರಲಿದ್ದಾರೆ ಎಂದು ಕುಟುಕಿದರು. ಕಾವೇರಿ ನದಿ ವಿವಾದಕ್ಕೆ ಸಂಬಂಧಿಸಿದಂತೆ ಫೆ. 7 ರಿಂದ ಸರ್ವೋಚ್ಚ ನ್ಯಾಯಾಲಯದಲ್ಲಿ ವಾದ - ಪ್ರತಿವಾದ ಆರಂಭವಾಗಿದ್ದು, ಹಿಂದಿನಿಂದ ನಡೆದಿರುವ ಬೆಳವಣಿಗೆ ಬಗ್ಗೆ ನಾವು ನ್ಯಾಯಾಲಕ್ಕೆ ಮಾಹಿತಿ ಒದಗಿಸಿದ್ದೇವೆ. ಈ ನಡುವೆ ನ್ಯಾಯಾಲಯ ಈ ಹಿಂದೆ ನಡೆದಿರುವ ಎರಡು ಪ್ರಮುಖ ಒಪ್ಪಂದಗಳ ಬಗ್ಗೆ ತಮಿಳುನಾಡನ್ನು ಪ್ರಶ್ನೆ ಮಾಡಿದ್ದು, ಒಂದು ಕಾಲದಲ್ಲಿ ವಾರ್ಷಿಕ 380 ಟಿಎಂಸಿ ನೀರನ್ನು ತಮಿಳುನಾಡಿಗೆ ಬಿಡಲಾಗುತ್ತಿತ್ತು. ಇದೀಗ ಈ ಪ್ರಮಾಣ 190 ಟಿಎಂಸಿಗೆ ತಲಪಿದ್ದು, ಇದನ್ನು 140 - 150ಕ್ಕೆ ಇಳಿಸಲು ಮಾರ್ಚ್ 21 ರಿಂದ ಆರಂಭವಾಗುವ ವಿಚಾರಣೆಯಲ್ಲಿ ನ್ಯಾಯಾಲಯವನ್ನು ಮನವಿ ಮಾಡಲಾಗುವದು ಎಂದರು. ಕೇಂದ್ರ ಸರ್ಕಾರಕ್ಕೆ ರಾಜ್ಯ ಸಭೆಯಲ್ಲಿ ರಾಷ್ಟ್ರಪತಿ - ಉಪರಾಷ್ಟ್ರಪತಿ ಚುನಾವಣೆ ಸಂದರ್ಭ ಎಐಎಡಿಎಂಕೆ ಬೆಂಬಲ ಬೇಕಾಗಿರುವದರಿಂದ ತಮಿಳುನಾಡಿನಲ್ಲಿ ಪ್ರಸ್ತುತ ರಾಜಕೀಯ ಬೆಳವಣಿಗೆ ತಾರಕಕ್ಕೇರಿದೆ ಎಂದು ದೂರಿದ ಬ್ರಿಜೇಶ್ ಇದರಲ್ಲಿ ಬಲಿಪಶುವಾಗುವದು ರಾಜ್ಯಪಾಲರು ಮಾತ್ರ ಎಂದು ಅಭಿಪ್ರಾಯಿಸಿದರು.
ಈ ಸಂದರ್ಭ ಕಾಂಗ್ರೆಸ್ ಪ್ರಮುಖ ಚಂದ್ರಮೌಳಿ, ಜಿಲ್ಲಾ ವಕ್ತಾರ ಮಂಜುನಾಥ್ ಕುಮಾರ್ ಮತ್ತಿತರರು ಇದ್ದರು.