ಮಡಿಕೇರಿ, ಫೆ. 12: ವೀರಾಜಪೇಟೆ ತಾಲೂಕಿನ ದಿಡ್ಡಳ್ಳಿ ಸುತ್ತಲಿನ ಪ್ರದೇಶದಲ್ಲಿ ಜಿಲ್ಲಾಡಳಿತ 144 ಸೆಕ್ಷನ್ ಜಾರಿ ಮಾಡಿದ್ದು, ಈ ಸೆಕ್ಷನ್ನನ್ನು ಭೂಮಿ ಮತ್ತು ಹಕ್ಕು ಹೋರಾಟ ಸಮಿತಿ ಮುರಿಯಲು ಮುಂದಾದಲ್ಲಿ ಸೂಕ್ತ ಕಾನೂನು ಕ್ರಮಕೈಗೊಳ್ಳುವಂತೆ ಕಾವೇರಿ ಸೇನೆ ಸಂಚಾಲಕ ರವಿ ಚಂಗಪ್ಪ ಆಗ್ರಹಿಸಿದ್ದಾರೆ.ಪತ್ರಿಕಾ ಹೇಳಿಕೆ ನೀಡಿರುವ ಅವರು, ದಿಡ್ಡಳ್ಳಿ ಪ್ರದೇಶದಲ್ಲಿ ನೆಲೆಸಿರುವ ನಿರಾಶ್ರಿತರ ತಾಣಕ್ಕೆ ನಕ್ಸಲಿಯರು ಭೇಟಿ ನೀಡಿರುವ ಗುಮಾನಿಯಿಂದ ಈ ಹಿಂದೆ ಈ ಸೆಕ್ಷನ್ ಜಾರಿ ಮಾಡಲಾಗಿತ್ತು. ಈ ಸಂದರ್ಭ ಅಲ್ಲಿಗೆ ಪ್ರವೇಶ ಮಾಡಿದ ಹಿರಿಯ ವಕೀಲ ಎ.ಕೆ. ಸುಬ್ಬಯ್ಯ, ಚಿತ್ರ ನಟ ಚೇತನ್ ಸೇರಿದಂತೆ ಇತರ 50 ಮಂದಿಯ ವಿರುದ್ಧ ದೂರು ದಾಖಲಿಸಲಾಗಿತ್ತು.
ಕಾನೂನಿಗೆ ಗೌರವ ಕೊಡುವದು ಭಾರತೀಯರ ಕರ್ತವ್ಯವಾಗಿದೆ. ಕಾನೂನು ಎಲ್ಲರಿಗೂ ಒಂದೆ. ಇದೀಗ ತಾ. 12 ರಿಂದ ದಿಡ್ಡಳ್ಳಿ ಸುತ್ತ 144 ಸೆಕ್ಷನ್ ಜಾರಿ ಮಾಡಿದ್ದು, ತಾ. 13 ರಂದು ಹಿರಿಯ ಸ್ವಾತಂತ್ರ ಹೋರಾಟಗಾರ ದೊರೆಸ್ವಾಮಿ ನೇತೃತ್ವದಲ್ಲಿ ಭೂಮಿ ಮತ್ತು ಹಕ್ಕು ವಂಚಿತರ ಹೋರಾಟ ಸಮಿತಿ ಪ್ರಮುಖರು ದಿಡ್ಡಳ್ಳಿ ಪ್ರದೇಶಕ್ಕೆ ಭೇಟಿ ನೀಡುವ ಸಂಭವವಿದ್ದು, ಸೆಕ್ಷನ್ ಜಾರಿ ಸಂದರ್ಭ ಅಕ್ರಮ ಪ್ರವೇಶ ಮಾಡಿದ್ದಲ್ಲಿ ಜಿಲ್ಲಾಡಳಿತ ಹಾಗೂ ಜಿಲ್ಲಾ ಪೊಲೀಸ್ ಇಲಾಖೆ ಕಡಿವಾಣ ಹಾಕುವ ಅಗತ್ಯವಿದೆ. ಇತ್ತೀಚೆಗೆ ಚಿಕ್ಕಮಗಳೂರಿ ನಲ್ಲಿ ಶರಣಾದ ನಕ್ಸಲಿಯರು ದಿಡ್ಡಳ್ಳಿಗೆ ಭೇಟಿ ನೀಡಿರುವ ಬಗ್ಗೆ ಅಲ್ಲಿನ ಪೊಲೀಸ್ ಇಲಾಖೆ ಬಂದು ಪರಿಶೀಲನೆ ನಡೆಸಿ ತೆರಳಿದೆ.
ಸೆಕ್ಷನ್ ಸಂದರ್ಭ ಅಕ್ರಮ ಪ್ರವೇಶಕ್ಕೆ ಜಿಲ್ಲಾಡಳಿತ ಹಾಗೂ ಜಿಲ್ಲಾ ಪೊಲೀಸ್ ಇಲಾಖೆ ಸೂಕ್ತ ಕಾನೂನು ಕ್ರಮಕೈಗೊಳ್ಳದಿದ್ದಲ್ಲಿ ಜಿಲ್ಲಾಧಿಕಾರಿ ಕಚೇರಿ ಎದುರು ಪ್ರತಿಭಟನೆ ಹಾಗೂ ನ್ಯಾಯಂಗ ಹೋರಾಟ ಮಾಡಲಾಗು ವದು ಎಂದು ರವಿ ಚಂಗಪ್ಪ ಹೇಳಿಕೆಯಲ್ಲಿ ತಿಳಿಸಿದ್ದಾರೆ.