ಮಾನ್ಯರೆ,
ಜಿಲ್ಲೆಯ ಜನತೆಯ ಕಣ್ಣಿಗೆ ಮಣ್ಣೆರಚಿ, ಈ ದೇಶಕ್ಕೆ ಅಂತರರಾಷ್ಟ್ರೀಯ ಮಟ್ಟದಲ್ಲಿ ಲಾಭಗಳಿಕೆ ಹಾಗೂ ರಫ್ತನ್ನು ಹೆಚ್ಚಿಸಲು ದುಡಿಯುತ್ತಿರುವ ಕಾಫಿ ಬೆಳೆಗಾರರನ್ನು ಹಿಯಾಳಿಸಿ, ರಕ್ಷಿತಾರಣ್ಯವನ್ನು ಅನಧಿಕೃತವಾಗಿ ಕಬಳಿಸುತ್ತಾ, ಅಲ್ಲಿದ್ದಂತಹ ಬೆಲೆಬಾಳುವ ಮರಗಳನ್ನು ರಾತೋರಾತ್ರಿ ನುಂಗಿ ಹಾಕಿ, ಜಿಲ್ಲೆಯ ನೈಜ ಯರವ, ಕುರುಬ ಜನಾಂಗವನ್ನು ಕಡೆಗಣಿಸಿ ಎಲ್ಲಿಂದಲೋ ಬಂದವರು ಕಳೆದೆರೆಡು ತಿಂಗಳಿಂದ ಆಡುತ್ತಿರುವ ನಾಟಕಕ್ಕೆ ‘ಧ್ವನಿ’ ಹಾಗೂ ‘ಬೆಳಕು’ ಒದಗಿಸುತ್ತಿರುವ ಜಿಲ್ಲಾಡಳಿತದ ಕ್ರಮ ನಿಜವಾಗಿಯೂ ಶೋಚನೀಯ! ಒಬ್ಬ ಸಾಮಾನ್ಯ ಮನುಷ್ಯ ದಾರಿ ತಪ್ಪಿ ರಕ್ಷಿತ ಅರಣ್ಯದೊಳಗೆ ಹೋದರೆ ಆತನ ಮೇಲೆ ವಿವಿಧ ಕಾಯ್ದೆಯಡಿ ಕೇಸು ದಾಖಲಿಸುವ ಅರಣ್ಯ ಇಲಾಖೆ ಈಗ ಏನು ಮಾಡುತ್ತಿದೆ? ಕಾಡಿನಂಚಿನಲ್ಲಿ ವಾಸಿಸುತ್ತಿರುವ ಆದಿವಾಸಿ ಜನರು ಕೂಳು ಬೇಯಿಸಲು ಕಾಡಿನೊಳಗೆ ಬಿದ್ದಿರುವಂತ ಒಣ ಸೌದೆಯನ್ನು ತರಲು ಬಿಡದಂತಹ ನಮ್ಮ ಬುದ್ಧಿವಂತ ಅರಣ್ಯ ಅಧಿಕಾರಿಗಳು ದಿಡ್ಡಳ್ಳಿಯ ರಕ್ಷಿತಾರಣ್ಯ ಪ್ರದೇಶದಲ್ಲಿ ಅಷ್ಟು ಜನ ಲೂಟಿ ಮಾಡಿದ ಮರಗಳ ಬಗ್ಗೆ ಯಾವದೇ ರೀತಿಯ ಕೇಸು ದಾಖಲಿಸದೆ ಮೌನ ವಹಿಸಿರುವದಾದರೂ ಏತಕ್ಕಾಗಿ? ಯಾರೋ ಪ್ರಚಾರಕ್ಕಾಗಿಯೋ ಅಥವಾ ನಕ್ಸಲ್ ನಾಯಕರ ಎಲ್ಲಾ ರೀತಿಯ ಆಮಿಷಕ್ಕೆ ಒಳಗಾಗಿಯೋ ಬೆತ್ತಲಾದರೆ ಅದನ್ನೇ ದೊಡ್ಡ ಸುದ್ದಿಯನ್ನಾಗಿಸಿ ನಕ್ಸಲ್ ಬೆಂಬಲಿತರನ್ನು ನಿರಾಶ್ರಿತರು ಎಂದು ಬಿಂಬಿಸಿರುವ ಕೆಲವು ಮಾಧ್ಯಮದವರಿಗೆ ಕೊಡಗಿನ ನಿಜವಾದ ಮೂಲನಿವಾಸಿಗಳ ಬದುಕು - ಬವಣೆಗಳ ಬಗ್ಗೆ ತಿಳುವಳಿಕೆ ಇದೆಯೇ? ಪ್ರತಿನಿತ್ಯ ಅರೆಬೆತ್ತಲಾಗಿ, ಇರಲು ಸ್ವಂತ ಸೂರಿಲ್ಲದೆ ನಾಳೆಯ ಬದುಕು ಹೇಗೆ ಎಂಬ ಚಿಂತೆಯಲ್ಲಿ ಬದುಕುತ್ತಿರುವ ಈ ನಾಡಿನ ನೈಜ ಮೂಲನಿವಾಸಿಗಳ ಬಗ್ಗೆ ನಿಮಗೆ ಕಾಳಜಿ ಇದೆಯೇ?
ನಮ್ಮ ಜಿಲ್ಲೆಯಲ್ಲಿ ಸುಮಾರು 60 ರ ದಶಕದಿಂದಲೂ ಸಣ್ಣ ಹಾಗೂ ಅತೀ ಸಣ್ಣ ರೈತರು ತಮಗಿರುವ 2-3 ಏಕರೆ ತೋಟ, ಗದ್ದೆಗಳ ಅಕ್ಕಪಕ್ಕದ ಖಾಲಿ ಜಾಗದಲ್ಲಿ ತಮಗೆ ತಿಳಿದೋ ತಿಳಿಯದೆಯೋ ಕಾಫಿ ತೋಟಗಳನ್ನು ಬೆಳೆಸಿ ರೂಢಿಸಿಕೊಂಡು ಬದುಕು ಸಾಗಿಸುತ್ತಿದ್ದಂತಹ ಪ್ರದೇಶ ರಕ್ಷಿತಾರಣ್ಯಕ್ಕೆ ಸೇರಿದ್ದು ಎಂದು ಪೊಲೀಸರ ಬಂದೋಬಸ್ತ್‍ನಲ್ಲಿ ಕಾರ್ಯಾಚರಣೆ ನಡೆಸಿ ನಾಶ ಮಾಡಿ ಅದೆಷ್ಟೋ ಸಣ್ಣ ಹಾಗೂ ಅತೀ ಸಣ್ಣ ರೈತರ ಬಾಳಿಗೆ ಕೊಳ್ಳಿ ಇಟ್ಟ ಅರಣ್ಯ ಇಲಾಖೆ ಈಗ ತನ್ನ ಜಾಣ ಕುರುಡುತನವನ್ನು ಪ್ರದರ್ಶಿಸುತ್ತಿರುವದಾದರೂ ಏತಕ್ಕಾಗಿ? ನಕ್ಸಲರು ನಿಮ್ಮ ಗುಂಡಿಗೆಗೆ ಗುರಿಯಿಡಬಹುದೆಂಬ ಭಯವೇ...? 1978 ರಿಂದ ಇಲ್ಲಿಯವರೆಗೆ ನಾಡಿನ ಮಾಜಿ ಸೈನಿಕರು ತಮ್ಮ ಹಕ್ಕಾನುಸಾರ ಬರಬೇಕಾಗಿರುವ ಸರಕಾರಿ ಜಾಗಕ್ಕಾಗಿ, ಸಾವಿರಾರು ಅರ್ಜಿ ಸಲ್ಲಿಸಿ ಅಲ್ಲಿಂದ ಇಲ್ಲಿಯವರೆಗೆ ಬಂದಂತಹ ಎಲ್ಲಾ ಜಿಲ್ಲಾಧಿಕಾರಿಗಳಿಗೂ ಮನವಿಗಳನ್ನು ಸಲ್ಲಿಸಿಯೂ ಸಹ ಅದ್ಯಾವದನ್ನು ಪರಿಗಣನೆಗೆ ತೆಗೆದುಕೊಳ್ಳದೆ ಅರ್ಜಿಗಳನ್ನು ಕಸದ ಬುಟ್ಟಿಗೆ ಹಾಕಿ ರಾತೋರಾತ್ರಿ ಎಲ್ಲಿಂದಲೋ ಬಂದವರಿಗೆ ಮಣೆಹಾಕಿ, ಚಾಪೆ ಹಾಸಿ, ಕಂಬಳಿ ಹೊದಿಸಿ ಬೆಚ್ಚಗೆ ಮಲಗಿಸಿರುವದಾದರೂ ಏತಕ್ಕಾಗಿ? ನಿರಾಶ್ರಿತರ ಹೆಸರಲ್ಲಿ ಒಂದಷ್ಟು ‘ಲೆಕ್ಕ ಬರೆಯಬಹುದೆಂದೋ’? ಮಡಿಕೇರಿ ನಗರದ ಪಕ್ಕದಲ್ಲೇ ಮನೆ ಕಟ್ಟಿಕೊಂಡು 10-20 ವರ್ಷಗಳಿಂದ ಬದುಕುತ್ತಿದ್ದವರ ಮನೆಗಳನ್ನು ಅನಧಿಕೃತ ಎಂಬ ಶೀರ್ಷಿಕೆಯಡಿ ಬೆಳ್ಳಂಬೆಳಗ್ಗೆ ಸೂರ್ಯ ಮೂಡುವ ಮುನ್ನವೇ ಯಾವದೇ ಮುನ್ಸೂಚನೆ ಇಲ್ಲದೆ ಒಡೆದು ಹಾಕಿ ಆ ಜನರನ್ನು ಬೀದಿಪಾಲು ಮಾಡಿದ ಜಿಲ್ಲಾಡಳಿತ ಈಗ ರಕ್ಷಿತಾರಣ್ಯದ ಎಲ್ಲಾ ನಿಯಮಗಳನ್ನು ಗಾಳಿಗೆ ತೂರಿ ಸರ್ವೋಚ್ಛ ನ್ಯಾಯಾಲಯದ ಆದೇಶಗಳನ್ನು ಗಣನೆಗೆ ತೆಗೆದುಕೊಳ್ಳದೆ ಅಲ್ಲಿ ‘ನಾಟಕ ಮಾಡಲು’ ಬಂದವರಿಗೆ ಆಶ್ರಯ ನೀಡಲು ಹೊರಟಿರುವದು ನ್ಯಾಯವೇ? ಕಾವೇರಿ ನದಿಯ ಉಗಮ ಸ್ಥಾನದಿಂದ ಕೊಡಗಿನ ಗಡಿ ಕೊಪ್ಪ ಗೇಟಿನವರೆಗೆ ನದಿ ದಂಡೆಯನ್ನು ಅತಿಕ್ರಮಣ ಮಾಡಿದವರನ್ನು, ವಿವಿಧ ರೀತಿಯ ಕಳ್ಳ ಸಾಗಾಣಿಕೆಯಲ್ಲಿ ತೊಡಗಿಸಿಕೊಂಡು ಪ್ರತಿನಿತ್ಯ ಕಾವೇರಿಯನ್ನು ಕಲುಷಿತಗೊಳಿಸುತ್ತಿರುವ ಜನರು ಅಧಿಕೃತರೇ? ಇಂತಹವರನ್ನು ಅಲುಗಾಡಿಸಲಾಗದ ಜಿಲ್ಲಾಡಳಿತ ಸಣ್ಣ ಹಾಗೂ ಅತೀ ಸಣ್ಣ ರೈತರ ಬದುಕಿನ ಬೇರನ್ನೇ ಕಿತ್ತು ಹಾಕುತ್ತಿದೆ. ಗುಬ್ಬಿಯ ಮೇಲೆ ಬ್ರಹ್ಮಾಸ್ತ್ರ ಏಕೆ ಸ್ವಾಮಿ? ದೇಶಕ್ಕಾಗಿ ತಮ್ಮ ಪ್ರಾಣವನ್ನೇ ತ್ಯಾಗ ಮಾಡಿದ ಸೈನಿಕರ ವಿಧವೆ ಹಾಗೂ ಮಕ್ಕಳ ಅರ್ಜಿಗಳು ಕೂಡಾ ನೀಡಲು ಸರಕಾರಿ ಜಾಗವಿಲ್ಲ ಎಂಬ ಹಿಂಬರಹದೊಂದಿಗೆ ತಿರಸ್ಕøತಗೊಳ್ಳುತ್ತಿರುವಾಗ ಅವರಿಗಿಂತ ಹೆಚ್ಚಾದರೇ ಈ ನಕ್ಸಲ್ ಬೆಂಬಲಿತರು? ಇಂತಹವರ ಬೆಂಬಲಕ್ಕೆ ನಿಂತಿರುವ ಪ್ರಗತಿಪರರ ಬಣ್ಣ ಮೊನ್ನೆ ತಾನೆ ಬೆಂಗಳೂರಿನಲ್ಲಿ ಬಯಲಾಗಿದೆ. ಪ್ರಗತಿಪರರ ಹೆಸರಲ್ಲಿ ಅಂಡರ್ ವಲ್ರ್ಡ್ ವ್ಯವಹಾರ ನಡೆಸುತ್ತಿರುವ ದೇಶ ದ್ರೋಹಿಗಳು ಜಿಲ್ಲೆಯಲ್ಲಿ ಶಾಂತಿ ಕದಡಲು ನಡೆಸುತ್ತಿರುವ ಹುನ್ನಾರವಿದು. ಜಿಲ್ಲೆಯ ಬೆಳೆಗಾರರನ್ನು ಹಾಳು ಮಾಡುವ ಉದ್ದೇಶದಿಂದ ಹಾಗೂ ಒಂದು ಸಮುದಾಯದ ಹೆಸರನ್ನು ಕೆಡಿಸಲು ಕೆಲವು ಪೂರ್ವಾಗ್ರಹ ಪೀಡಿತ ಸ್ವಯಂ ಫೋಷಿತ ಸಮಾಜ ದ್ರೋಹಿಗಳು ಎಲ್ಲಿಂದಲೋ ಜನರನ್ನು ಕರೆತಂದು ಅವರಿಗೆ ಬಣ್ಣ ಹಚ್ಚಿ, ಪಾತ್ರಗಳನ್ನು ನೀಡಿ ನಾಟಕ ಮಾಡಲು ಬಿಟ್ಟ ಸತ್ಯ ಈಗ ಬಯಲಾಗಿದೆ. ಯಾವ ರೀತಿ ಬೆಂಗಳೂರಿನ ಪ್ರಗತಿಪರನ ಮುಖಂಡನ ಮನೆಯ ಮೇಲೆ ಪೊಲೀಸ್ ಧಾಳಿ ನಡೆಯಿತೋ ಅದೇ ರೀತಿ ಕೊಡಗಿನಲ್ಲಿರುವ ಆತನ ಹಿಂಬಾಲಕರ ಮನೆಗಳ ಮೇಲೂ ಧಾಳಿ ನಡೆಸಿದರೆ ಇನ್ನಷ್ಟು ಭಯಾನಕ ಸತ್ಯಗಳು ಹೊರಬೀಳಬಹುದು. ಯಾರ್ಯಾರೋ ರೈತರ ಹೆಸರಲ್ಲಿ, ಆದಿವಾಸಿಗಳ ಹೆಸರಲ್ಲಿ ಸಂಘಟನೆಗಳನ್ನು ಕಟ್ಟಿಕೊಂಡು ಭೂ ಮಾಫಿಯಾ ಹಾಗೂ ಕಪ್ಪು ಹಣ ದಂಧೆಯನ್ನು ನಡೆಸುತ್ತಿರುವ ಕಳ್ಳ ಖದೀಮರನ್ನು ಪೊಲೀಸ್ ಇಲಾಖೆ ಬಗ್ಗು ಬಡಿಯಬೇಕಿದೆ. ಇಲ್ಲವಾದಲ್ಲಿ ಮುಂದೊಂದು ದಿನ ಇಂತಹವರಿಂದ ಇಲ್ಲೂ ಕೂಡಾ ‘ಅಗ್ನಿ’ ದುರಂತಗಳು ಖಂಡಿತಾ...!
- ಮಚ್ಚಮಾಡ ಅನೀಶ್ ಮಾದಪ್ಪ.