ಮಾನ್ಯರೆ,

ಇತ್ತೀಚೆಗೆ ಒಮ್ಮೆ ಮಂಗಳೂರಿನ ಪ್ರಸಿದ್ಧ ವೈದ್ಯಕೀಯ ಶಿಕ್ಷಣ ಕಾಲೇಜು ಆಸ್ಪತ್ರೆಗೆ ಹೋಗಬೇಕಾದ ಸಂದರ್ಭ ಬಂತು. ಅಲ್ಲಿ ನುರಿತ ಅನುಭವೀ ವೈದ್ಯರು ಇರುವ ಕೊಠಡಿಗಳನ್ನು ನೋಡಿದೆ. ಹಾಗೆಯೇ ನನ್ನ ಹೃದಯ ಪರೀಕ್ಷೆ ಮಾಡಿಸಿಕೊಳ್ಳುವ ಮನಸ್ಸಾಯಿತು. ದಾಖಲೆ ಫೀ ಪಾವತಿಸಿ ಸರದಿಯಲ್ಲಿ ಕಾದು ವೈದ್ಯರ ಕೋಣೆಗೆ ಹೋದೆ. ವೈದ್ಯರು ಕೂತಿದ್ದರು. ಪಕ್ಕದಲ್ಲಿ ಮಹಿಳೆಯೊಬ್ಬರು ಕೂತಿದ್ದರು. (ವಿದ್ಯಾರ್ಥಿ ಡಾಕ್ಟರ್) ಸ್ಥೆಥಸ್ಕೋಪ್ ಹಾಕಿ ಪರೀಕ್ಷಿಸಿದರು. ಹಲವಾರು ಪ್ರಶ್ನೆಗಳನ್ನು ಕೇಳಿದರು. ನನಗೇ ಸಂಶಯ. ನನಗೆ ಯಾವ ಖಾಯಿಲೆ ಎಂದು? ಸರಿ ಚೀಟಿ ಬರದೇ ಬಿಟ್ಟರು. ಸ್ಕ್ಯಾನಿಂಗ್, ಟಿ.ಎಂ.ಟಿ., ಎಂ.ಆರ್.ಐ. ಮೂರಕ್ಕೂ ಹಣ ಕಟ್ಟಿ ಬನ್ನಿ ಎಂದರು. ಸ್ಕ್ಯಾನಿಂಗ್ ಮಾಡಿಸಿ ಬಂದೆ. ಏನೂ ತೊಂದರೆ ಇಲ್ಲ. ಟಿ.ಎಂ.ಟಿ. ಆಯ್ತು ಏನೂ ತೊಂದರೆ ಕಂಡು ಬರಲಿಲ್ಲ. ಎಂ.ಆರ್.ಐ. ಹೊರಗಿನ ವಿಳಾಸ ಕೊಟ್ಟರು. ಅದೂ ಮಾಡಿಸಿ ತಂದೆ. ಈಗಾಗಲೇ ಗಂಟೆ 4.30 ಆಗಿದೆ. ಬಹಳ ರಷ್ ಇದೆ ನಾಳೆ ಬನ್ನಿ ಅಂದರು. ಅನುಭವೀ ತಜ್ಞ ಡಾಕ್ಟರ್ ಮಾತನಾಡಲೇ ಇಲ್ಲ. ಇಲ್ಲಿ ಒಂದು ಮಾತು - ಈ ತರಹದ ಅನುಭವ ಇಲ್ಲದವರು ಒಂದು ಬಾರಿ ಯೋಚಿಸಿ, ವಿಚಾರಿಸಿ ಮೆಡಿಕಲ್ ಕಾಲೇಜು ಆಸ್ಪತ್ರೆಗೆ ಹೋಗಿ.

ಮಡಿಕೇರಿಯಲ್ಲೊಂದು ಆಸ್ಪತ್ರೆ. ಮಕ್ಕಳಿಗೆ ನಿಗದಿತ ಚುಚ್ಚು ಮದ್ದು ಹಾಕಿಸಿಕೊಳ್ಳಲು ಹೋದರೆ ರೂ. 1,000 ದ್ದು ಬೇಕೆ ಅಥವಾ ರೂ. 2,000 ದ್ದು ಬೇಕೆ ಎಂದು ಕೇಳುತ್ತಾರೆ. ಹಾಗಿದ್ದಲ್ಲಿ ಔಷಧಿ ಬಗ್ಗೆ ನಾವು ನಿರ್ಧರಿಸಬಹುದು?!

ಖಾಸಗಿ ಪ್ರತಿಷ್ಟಿತ ಹೃದ್ರೋಗ ಆಸ್ಪತ್ರೆಯೊಂದಕ್ಕೆ ಸ್ನೇಹಿತರ ಆರೋಗ್ಯ ತಪಾಸಣೆಗೆ ಅವರೊಂದಿಗೆ ಹೋಗಿದ್ದೆ. ಹೃದಯದಲ್ಲಿ ಸಣ್ಣದಾದ 2 ಬ್ಲಾಕ್ ಇದೆ, ಸ್ಟಂಟ್ ಹಾಕಿದರೆ ಸಾಕು ಎಂದರು. ಕೂಡಲೇ ಇಂಡಿಯನ್ ಅಥವಾ ಫಾರಿನ್ ಬೇಕಾ? ಎಂದು ಕೇಳಿದರು. ಮಿತ್ರನಿಗೆ ಕೂಡಲೇ ಅರ್ಥವಾಗಲಿಲ್ಲ. ಡಾಕ್ಟರ್ ಬಿಡಿಸಿ ಹೇಳಿದರು. ಜೊತೆಗೆ ಬೆಲೆಯನ್ನೂ ಹೇಳಿದರು. ನಮಗೆ ನಮೋ ಅವರ ಯೋಚನೆಯಾಯಿತು. ಇಂಡಿಯನ್ ಸಾಕು ಎಂದ. ಹಣ ಹೊಂದಿಸಿ ಬರುತ್ತೇವೆಂದು ಹೇಳಿದೆವು. ಬರುತ್ತಾ ಮಿತ್ರ ಹೇಳಿದ, ಸದ್ಯಕ್ಕೆ ಇಂಡಿಯನ್ ಸ್ಟಂಟ್ ಹಾಕಿಸಿಕೊಳ್ಳುವ, ನಂತರ ಒಂದುವೇಳೆ ಹೃದಯ ಕೆಟ್ಟು ಹೋದರೆ ಫಾರಿನ್ ಸ್ಟಂಟ್ ಹಾಕಿಸಿಕೊಳ್ಳುತ್ತೇನೆ...! ಅಲ್ಲಿಯತನಕ ಹಣ ಹೊಂದಿಸಿಕೊಳ್ಳುತ್ತೇನೆ ಎಂದರು. ಇನ್ನೂ ಅವರಿಗೆ ಹಣ ಹೊಂದಾಣಿಕೆ ಆಗಲೇ ಇಲ್ಲ. ಇವತ್ತೂ ಆರೋಗ್ಯವಂತನಾಗೇ ಕಾಣುತ್ತಾನೆ ಆತ!

- ನಾಟೋಳಂಡ ಚರ್ಮಣ, ಕಡಿಯತ್ತೂರು.