ಮಾನ್ಯರೆ,

ಈ ದೇಶದಲ್ಲಿ ಸರಿ ಸುಮರು ಅರ್ಥ ಜನಸಂಖ್ಯೆಯಷ್ಟು ಇರುವ ಮಹಿಳೆಯರಿಗೆ ಸಮಾನ ಹಕ್ಕು ಇದೆಯೇ ಎಂಬದು ಇಂದಿನ ಜ್ವಲಂತ ಪ್ರಶ್ನೆಯಾಗಿದೆ. ಇದು ಅತಿಶಯೋಕ್ತಿ ಎಂದು ಹಲವರಿಗೆ ಅನಿಸಬಹುದು. ಆದರೆ ಮೊನ್ನೆ ಮೊನ್ನೆ ತಾನೇ ಮುಗಿದ ಕೃಷಿ ಉತ್ಪನ್ನ ಮಾರುಕಟ್ಟೆ (ಎ.ಪಿ.ಎಂ.ಸಿ.)ಗಳಿಗೆ ನಡೆದ ಚುನಾವಣೆಯ ಅಂಕಿ ಅಂಶಗಳನ್ನೊಮ್ಮೆ ಪರಾಮರ್ಶಿಸಿ ನೋಡಿ! ಈ ಮಾತು ಅದೆಷ್ಟು ಸತ್ಯ ಎಂಬದು ವೇದ್ಯವಾಗುತ್ತದೆ. ಕೊಡಗು ವಿದ್ಯಾವಂತರ ನಾಡು, ಮಹಿಳೆಗೆ ಸಮಾನ ಹಕ್ಕು ನೀಡಿದವರ ಬೀಡು. ಅಂತೆಲ್ಲಾ ಬರೀ ಹೊಗಳಿಕೆಯ ಮಾತು ಎಂಬದು ತಿಳಿದು ಬರುತ್ತದೆ!

ಮೊನ್ನೆ ನಡೆದ ಮತದಾನದಲ್ಲಿ ಜಿಲ್ಲೆಯಲ್ಲಿ ಮತದಾನದ ಹಕ್ಕಿದ್ದವರು ಒಟ್ಟು 74,977. ಆದರೆ ಅದರಲ್ಲಿ ಒಟ್ಟು ಪುರುಷ ಮತದಾರರ ಸಂಖ್ಯೆ 62,418. ಆದರೆ ಒಟ್ಟು ಮಹಿಳಾ ಮತದಾರರ ಸಂಖ್ಯೆ ಕೇವಲ 12.559 ಮಾತ್ರ! ಅಂದರೆ ಇಲ್ಲಿನ ವ್ಯತ್ಯಾಸವನ್ನು ನೀವುಗಳೇ ಗುರುತಿಸಬಹುದು! ಮಡಿಕೇರಿ ತಾಲೂಕಿನಲ್ಲಿ ಒಟ್ಟು 19,991 ಪುರುಷ ಮತದಾರರಿದ್ದರೆ, ಮಹಿಳಾ ಮತದಾರರ ಸಂಖ್ಯೆ ಕೇವಲ 2,289 ಮಾತ್ರ. ಅಂದರೆ ಇದರ ಭಾಗಾಂಶದ ವ್ಯತ್ಯಾಸ ಸರಿ ಸುಮಾರು 1/8 ರಷ್ಟು ಮಾತ್ರ! ಅಂತೆಯೇ ವೀರಾಜಪೇಟೆ ತಾಲೂಕಿನಲ್ಲಿ ಒಟ್ಟು 22,941 ಪುರುಷ ಮತದಾರರಿದ್ದರೆ, ಮಹಿಳಾ ಮತದಾರರ ಸಂಖ್ಯೆ ಕೇವಲ 6005 ಮಾತ್ರ! ಅಂದರೆ ಇಲ್ಲಿಯೂ ಭಾಗಾಂಶದ ವ್ಯತ್ಯಾಸ ಸರಿ ಸುಮಾರು ಕಾಲು ಭಾಗದಷ್ಟು ಮಾತ್ರ! ಹಾಗೆಯೇ ಸೋಮವಾರಪೇಟೆ ತಾಲೂಕಿನಲ್ಲಿ ಪುರುಷ ಮತದಾರರ ಸಂಖ್ಯೆ 19,506 ಇದ್ದರೆ, ಮಹಿಳಾ ಮತದಾರರ ಸಂಖ್ಯೆ ಕೇವಲ 4,265 ಮಾತ್ರ. ಇಲ್ಲಿಯೂ ಭಾಗಾಂಶವನ್ನು ಗಮನಿಸಿದರೆ ಅದೂ ಕೇವಲ ಕಾಲು ಭಾಗದಷ್ಟು ಮಾತ್ರ ಎಂಬ ಸತ್ಯ ಗೋಚರವಾಗುತ್ತದೆ.

ಕೃಷಿ ಭೂಮಿಯಲ್ಲಿ ಹಕ್ಕು ಇದ್ದು ಪಹಣಿ ಪತ್ರದಲ್ಲಿ ಹೆಸರು ಇದ್ದವರಿಗೆ ಮಾತ್ರ ಈ ಮತದಾನದ ಹಕ್ಕು ಇರುವದಾಗಿದೆ. ಅಂದರೆ ಇಂದು ಭೂಮಿಯ ಹಕ್ಕು ಕೊಡಗಿನಲ್ಲಿ ಮುಕ್ಕಾಲು ಭಾಗಾಂಶ ಪುರುಷರದ್ದಾಗಿದ್ದರೆ, ಮಹಿಳೆಯರಿಗೆ ಕೇವಲ ಕಾಲು ಭಾಗದಷ್ಟು ಭಾಗಾಂಶ ಹಕ್ಕು ಇದೆ ಎಂಬದು ರುಜುವಾತು ಆದಂತೆ ಆಯಿತಲ್ಲಾ? ಇನ್ನುಳಿದ ಮುಕ್ಕಾಲು ಪಾಲು ಮಹಿಳೆಯರಿಗೆ ಕೃಷಿ ಭೂಮಿಯಲ್ಲಿ ಹಕ್ಕೇ ಇಲ್ಲವೆ? ಅಥವಾ ಅವರು ಈ ಹಕ್ಕು ಪಡೆಯಲು ಅರ್ಹರೇ ಅಲ್ಲವೆ? ಅಲ್ಲಾ ಈ ಪುರುಷ ಪ್ರಧಾನ ಪ್ರಪಂಚದ ಒಳತಿರುಳನ್ನು ಪ್ರತಿಬಿಂಭಿಸುತ್ತಿದೆಯೆ? ಅರಿತವರು ನುರಿತವರು ಈ ಬಗ್ಗೆ ಉತ್ತರಿಸಬೇಕಾಗಿದೆ.

ಈ ಚುನಾವಣೆ ಪಕ್ಷಾತೀತವಾಗಿ ನಡೆದರೂ ಇದೀಗ ಪಕ್ಷಗಳ ಬಿಗಿ ಹಿಡಿತದ ಕರಿನೆರಳೇ ಎದ್ದು ಕಾಣಿಸುತ್ತಿದೆ. ಪಕ್ಷಗಳು ತಮ್ಮ ಬಲಾಬಲವನ್ನು ಇಲ್ಲಿಯೂ ಪರೀಕ್ಷೆಗೆ ಒಡ್ಡುತ್ತಿವೆ. ತಮ್ಮ ತಮ್ಮ ಪಕ್ಷಗಳ ಪ್ರತಿಷ್ಠೆಯನ್ನಷ್ಟೇ ಇಲ್ಲಿ ಅಳತೆ ಕೋಲಾಗಿ ಪರಿಗಣಿಸುತ್ತಲಿವೆ ಎಂಬದಂತೂ ನಿರ್ವಿವಾದ. ಹಾಗಿರುವಾಗ ಇಲ್ಲಿ ಮಹಿಳೆಯರಿಗೆ ಅನ್ಯಾಯವಾಗಿದೆ ಎಂಬದು ಯಾವದೇ ಪಕ್ಷದ ನಾಯಕೀ ಮಣಿಗಳಿಗೆ ಗೋಚರವಾಗುತ್ತಲೇ ಇಲ್ಲವೆ? ನಿಮಗಳಿಗೆ ನಿಮ್ಮ ಅಧಿಕಾರ, ಪಕ್ಷದ ಪ್ರತಿಷ್ಟೆ ಒಂದೇ ಸಾಕೆ? ಮಹಿಳೆಯರ ಸಮಾನ ಹಕ್ಕಿನ ಬಗ್ಗೆ ನಿಮಗೆ ಚಿಂತೆ ಎಂಬದು ಇದ್ದರೆ ಈ ವ್ಯತ್ಯಾಸವನ್ನು ಸರಿಪಡಿಸುವ ಗೋಜಿಗೆ ಹೋಗಲು ಇನ್ನಾದರೂ ಸಿದ್ಧರಿದ್ದೀರಾ?

ಇನ್ನು ಕೊಡಗಿನ ಮಟ್ಟಿಗೆ ಈ ಎ.ಪಿ.ಎಂ.ಸಿ. ಎಂಬದು ಕೇವಲ ಆಟಕ್ಕುಂಟು ಲೆಕ್ಕಕ್ಕಿಲ್ಲ ಎಂಬ ಒಂದು ನಿರರ್ಥಕ ಸಂಸ್ಥೆ ಎಂಬದಂತೂ ಸರ್ವವೇದ್ಯ. ಕೇವಲ ಸೋಮವಾರಪೇಟೆ ತಾಲೂಕಿನಲ್ಲಿ ಮಾತ್ರ ಇದರ ಉಪಯೋಗ ಇರಬಹುದೇನೊ? ವೀರಾಜಪೇಟೆ ಮತ್ತು ಮಡಿಕೇರಿ ತಾಲೂಕುಗಳಲ್ಲಿ ಇದರ ಸೊಲ್ಲೇ ಕೇಳಿಸುತ್ತಿಲ್ಲ. ಅಡಿಕೆ ಮತ್ತು ಕರಿಮೆಣಸಿನಿಂದ ಬರುವ ಭಾರೀ ಆಧಾಯದ ಬಗ್ಗೆ ಮಾತ್ರ ಇವರುಗಳ ಚಿಂತನೆ ಇರುವಂತೆ ಕಾಣಿಸುತ್ತಿದೆ. ಚುನಾವಣೆ ಬಂದಾಗ ಕೇವಲ ಪಕ್ಷಗಳ ಪ್ರತಿಷ್ಟೆಗಾಗಿ ಕಾದಾಟ ನಡೆಯುತ್ತಿರುವಂತೆ ಇದೀಗ ಗೋಚರಿಸುತ್ತಿದೆ. ಬಾಳೆ ಇನ್ನಿತರ ಕೃಷಿಕರ ಉತ್ಪನ್ನಗಳಿಗೆ ಇವರು ನೀಡುತ್ತಿರುವ ದರ ನೋಡಿದರೆ ಪರಮಾತ್ಮನಿಗೇ ಪ್ರೀತಿ! ಇದರಲ್ಲಿ ಇರುವ ದರಕ್ಕಿಂತ ದುಪ್ಪಟ್ಟು, ನಾಲ್ಕು ಪಾಲು ದರ ಕೃಷಿಕನಿಗೆ ಹೊರಗೆ ಮಾರುಕಟ್ಟೆಯಲ್ಲಿ ದೊರೆಯುತ್ತಿದೆ ಎಂಬದನ್ನು ಗಮನಿಸಿದಾಗ ಇಂತಹ ಕೃಷಿ ಉತ್ಪನ್ನ ಮಾರುಕಟ್ಟೆಗಳ ಕಾರ್ಯ ವಿಧಾನದ ಬಗ್ಗೆಯೇ ಪ್ರಶ್ನಿಸುವಂತಹ ಪರಿಸ್ಥಿತಿ ಇಂದು ಇದೆ. ಅಂತೂ ಸರಕಾರದ ಇಂತಹ ಕೆಲವೊಂದು ನಿರರ್ಥಕ ಯೋಜನೆಗಳಿಗೆ ಕೃಷಿಕ ತಲೆಭಾಗಿ ಒಗ್ಗಿಕೊಳ್ಳಲೇ ಬೇಕಾದ ಅನಿವಾರ್ಯತೆ ಇಂದಿನದು. ಇದು ನಮ್ಮ ಕರ್ಮವೊ ಅಥವಾ ಧರ್ಮವೊ ತಿಳಿಯದ ಅಸಹಾಯಕ ಪರಿಸ್ಥಿತಿ ನಮ್ಮದು.

- ಎಸ್.ಎಂ. ವಿಶ್ವನಾಥ್, ಬಾಳಾಜಿ