v*ಗೋಣಿಕೊಪ್ಪಲು, ಫೆ. 13: ಕೊಂಗಣ ಹೊಳೆಯನ್ನು ತಿರುವಿ ಹುಣಸೂರು ತಾಲೂಕಿಗೆ ಕುಡಿಯುವ ನೀರಿನ ಯೋಜನೆ ರೂಪಿಸಲು ಮುಂದಾಗಿರುವದನ್ನು ರದ್ದುಪಡಿಸುವಂತೆ ಶಾಸಕ ಬೋಪಯ್ಯ ಸದನದಲ್ಲಿ ಭಾರೀ ಮತ್ತು ಮಧ್ಯಮ ನೀರಾವರಿ ಸಚಿವರ ಗಮನ ಸೆಳೆದರು.ವೀರಾಜಪೇಟೆ ತಾಲೂಕಿನ ಟಿ. ಶೆಟ್ಟಿಗೇರಿ ಗ್ರಾಮದಲ್ಲಿ ಕೇರಳದ ಕಡೆಗೆ ಹರಿಯುವ ಕೊಂಗಣ ಹೊಳೆ ತಿರುವಿ ಹುಣಸೂರು ತಾಲೂಕಿಗೆ ಕುಡಿಯುವ ನೀರಿನ ಯೋಜನೆ ರೂಪಿಸಲು ಮುಖ್ಯಮಂತ್ರಿಗಳು ಮೈಸೂರು ಜಿಲ್ಲೆಯ ಪ್ರಗತಿ ಪರಿಶೀಲನಾ ಸಭೆಯಲ್ಲಿ ಆದೇಶಿಸಿದ್ದು, ಜಿಲ್ಲೆಯ ಜನರು ಸಾಕಷ್ಟು ವಿರೋಧವನ್ನು ವ್ಯಕ್ತಪಡಿಸುತ್ತಾ ಬಂದಿದ್ದಾರೆ. ಹಿಂದಿನ ಸರಕಾರಗಳು ಕೈಬಿಟ್ಟಿದ್ದ ಯೋಜನೆಯನ್ನು ಮತ್ತೆ ಜನರ ವಿರೋಧದ ಮಧ್ಯೆಯೂ ಪ್ರಾರಂಭಿಸಲು ಸಿದ್ಧತೆ ನಡೆಸಲಿರುವದನ್ನು ರದ್ದುಪಡಿಸುವಂತೆ ಬೋಪಯ್ಯ ಸಚಿವರ ಗಮನ ಸೆಳೆದರು.
ಈ ಸಂದರ್ಭ ಜಲ ಸಂಪನ್ಮೂಲ ಸಚಿವ ಎಂ.ಬಿ. ಪಾಟೀಲ್ ಲಿಖಿತ ಉತ್ತರ ನೀಡಿ ಕೊಡಗು ಜಿಲ್ಲೆ ವೀರಾಜಪೇಟೆ ತಾಲೂಕಿನ ಕೊಂಗಣ ಹೊಳೆಯ ಕೆಳಭಾಗದಲ್ಲಿ ಯಾವದೇ ಯೋಜನೆಗಳು ಇಲ್ಲದೇ ಇರುವದರಿಂದ ಸುಮಾರು 4.90 ಟಿ.ಎಂ.ಸಿ. ನೀರು ವ್ಯರ್ಥವಾಗಿ ಕೇರಳದ ಕಡೆ ಹರಿದು ಸಮುದ್ರವನ್ನು ಸೇರುತ್ತದೆ. ಕೊಂಗಣ ಹೊಳೆಗೂ ಮತ್ತು ಲಕ್ಷ್ಮಣ ತೀರ್ಥ ನದಿಗೂ ಕೊಲ್ಲಿತೋಡು ನದಿಯು ಸಂಪರ್ಕ ಉಪ ನದಿಯಾಗಿರುತ್ತದೆ. ಈ ನದಿಯ ಉದ್ದ 13.50 ಕಿ.ಮೀ. ಇದ್ದು ಮಧ್ಯ ಭಾಗದಲ್ಲಿ ಹಳ್ಳವು ಹೂಳಿನಿಂದ
(ಮೊದಲ ಪುಟದಿಂದ) ಮುಚ್ಚಿಕೊಂಡಿರುವದರಿಂದ ನದಿಯ ನೀರು ಕೊಂಗಣಹೊಳೆ ಭಾಗಕ್ಕೆ ಭಾಗಶಃ ಮತ್ತು ಲಕ್ಷ್ಮಣ ತೀರ್ಥ ನದಿಗೆ ಭಾಗಶಃ ಹರಿದು ಹೋಗುತ್ತಿರುತ್ತದೆ. ವ್ಯರ್ಥವಾಗಿ ಸಮುದ್ರ ಸೇರುತ್ತಿರುವ ಕೊಂಗಣ ಹೊಳೆಯ ನೀರನ್ನು ಕೊಂಗಣ ಹೊಳೆಗೆ ಅಡ್ಡಲಾಗಿ ಪಿಕಪ್ ನಿರ್ಮಾಣ ಮಾಡಿ ಕೊಲ್ಲಿತೋಡು ಉಪ ನದಿಯನ್ನು ಅಭಿವೃದ್ಧಿಪಡಿಸಿ ಲಕ್ಷ್ಮಣತೀರ್ಥ ನದಿಗೆ ಸೇರಿಸಬಹುದಾಗಿರುತ್ತದೆ.
ಲಕ್ಷ್ಮಣತೀರ್ಥ ನದಿಗೆ ಕೊಂಗಣ ಹೊಳೆಯಿಂದ ದೊರೆಯಬಹುದಾದ ಸುಮಾರು 4.90 ಟಿ.ಎಂ.ಸಿ. ನೀರನ್ನು ಸೇರಿಸುವದರಿಂದ ಹುಣಸೂರು ತಾಲೂಕಿನ ಹನಗೋಡು ಪಿಕಪ್ ನಾಲೆಯಡಿ ಬರುವ 47 ಕೆರೆಗಳಿಗೆ ಕುಡಿಯುವ ನೀರಿನ ಹಾಗೂ ಕೆರೆಗಳು ತುಂಬುವ 6 ಏತ ಯೋಜನೆಗಳಿಗೆ ನೀರಿನ ವ್ಯವಸ್ಥೆ ಮಾಡಬಹುದಾಗಿರುತ್ತದೆ. ಈ ರೀತಿ ಮಾಡುವದರಿಂದ ಪೊನ್ನಂಪೇಟೆಯ ಟಿ. ಶೆಟ್ಟಿಗೇರಿ ಗ್ರಾಮದ ಹತ್ತಿರವಿರುವ ಯಾವದೇ ಖಾಸಗಿ ಜಮೀನು ಮುಳುಗಡೆಯಾಗುವದಿಲ್ಲ. ಪ್ರಸ್ತುತ ಇರುವ ಕೊಲ್ಲಿತೋಡು ಉಪ ನದಿಯನ್ನು ಅಭಿವೃದ್ಧಿಪಡಿಸಿ ನೀರನ್ನು ಹರಿಸುವದರಿಂದ ಇಲ್ಲಿ ಯಾವದೇ ಪರಿಸರಕ್ಕೆ ಧಕ್ಕೆಯಾಗುವದಿಲ್ಲ.
ಈ ಯೋಜನೆಯಿಂದ 13.50 ಕಿ.ಮೀ. ಉದ್ದಕ್ಕೆ ಕೊಲ್ಲಿತೋಡು ಹಳ್ಳದಲ್ಲಿ ನೀರು ಹರಿಯುವದರಿಂದ ಪೊನ್ನಂಪೇಟೆ ಭಾಗದ ಜನರು ಕುಡಿಯುವದಕ್ಕಾಗಿ ಮತ್ತು ಇತರೆ ಬಳಕೆಗಾಗಿ ನೀರನ್ನು ಉಪಯೋಗಿಸಿ ಕೊಳ್ಳಬಹುದಾಗಿರುತ್ತದೆ. ಇದರಿಂದ ಪೊನ್ನಂಪೇಟೆಯ ಸ್ಥಳೀಯರಿಗೆ ಯಾವದೇ ರೀತಿಯ ಅನಾನುಕೂಲತೆಯಾಗುವದಿಲ್ಲ. ಈ ಬಗ್ಗೆ ಮೈಸೂರಿನಲ್ಲಿ ನಡೆದ ಕೆಡಿಪಿ ಸಭೆಯಲ್ಲಿ ಚರ್ಚೆಗೆ ಬಂದಿದ್ದು, ಮುಖ್ಯಮಂತ್ರಿಗಳು ಸರ್ವೆ ಮಾಡಿ ವಿಸ್ತಾರವಾದ ಯೋಜನಾ ವರದಿಯನ್ನು ಸಲ್ಲಿಸಲು ಸೂಚಿಸಿದ್ದಾರೆ.
ಈ ಯೋಜನೆಯನ್ನು ಸಿದ್ಧಪಡಿಸಲು ವಿವರವಾದ ಸರ್ವೆಯನ್ನು ಕೈಗೊಳ್ಳಬೇಕಾಗಿದ್ದು, ಸರ್ವೆ ಮಾಡಲು ಸ್ಥಳಕ್ಕೆ ಹೋದಾಗ ಸ್ಥಳೀಯರು ವಿರೋಧ ವ್ಯಕ್ತಪಡಿಸಿ ದ್ದಾರೆ. ಕೊಡಗು ಜಿಲ್ಲಾಧಿಕಾರಿಗಳ ಅಧ್ಯಕ್ಷತೆಯಲ್ಲಿ ಸ್ಥಳೀಯರೊಂದಿಗೆ ಸಭೆ ನಡೆಸಿ, ಯೋಜನೆಯ ಸರ್ವೆ ಕಾರ್ಯ ಕೈಗೊಳ್ಳಲು ಅನುವು ಮಾಡಿಕೊಡಲು ಕೋರಲಾಗಿದೆ. ಕೊಂಗಣ ಹೊಳೆಯಿಂದ ಲಕ್ಷ್ಮಣ ತೀರ್ಥ ನದಿಯವರೆಗೆ ಕೊಲ್ಲಿತೋಡು ನದಿಯನ್ನು ಸರ್ವೆ ಮಾಡಿದ್ದಲ್ಲಿ ನಿಖರವಾಗಿ ವಿಸ್ತಾರವಾದ ಯೋಜನಾ ವರದಿಯನ್ನು ತಯಾರಿಸಬಹುದಾಗಿದೆ.
ಕಾವೇರಿ ನೀರಾವರಿ ನಿಗಮದಿಂದ ಈ ಯೋಜನೆಯ ಪ್ರಸ್ತಾವನೆಯನ್ನು ಪರಿಶೀಲಿಸಲಾಗುತ್ತಿದ್ದು, ಯೋಜನೆಯನ್ನು ಟೋಪೋ ಶೀಟ್ ಆಧಾರದ ಮೇಲೆ ಹಾಗೂ ಕೊಂಗಣ ಹೊಳೆ, ಕೊಲ್ಲಿತೋಡು ಉಪನದಿ ಮತ್ತು ಲಕ್ಷ್ಮಣತೀರ್ಥ ನದಿ ಪ್ರದೇಶವನ್ನು ಪರಿವೀಕ್ಷಣೆ ಮಾಡಿ ಅಂದಾಜಿಸಲಾಗಿದೆ. ವಿವರವಾದ ಸರ್ವೆ ಮಾಡಿದ ನಂತರವೇ ಈ ಯೋಜನೆಯ ಆಗು-ಹೋಗುಗಳನ್ನು ನಿಖರವಾಗಿ ತಿಳಿಯಬಹುದಾಗಿದೆ ಎಂದು ಉತ್ತರಿಸಿದ್ದಾರೆ.