ಮಡಿಕೇರಿ, ಫೆ. 13: ಕೊಡಗು ಜಿಲ್ಲೆಗೆ ಸಂಬಂಧಪಟ್ಟಂತೆ ಕೊಡವ ಬೈರೇಸ್ ನಡಿ ಕೋವಿ ಹೊಂದಲು ಇರುವ ವಿನಾಯಿತಿಯಡಿ ಅರ್ಜಿ ಸಲ್ಲಿಸುವ ಸಂದರ್ಭ ಜಿಲ್ಲಾಡಳಿತ ವಿಧಿಸಿರುವ ನಿಯಮಾವಳಿಗಳನ್ನು ಸರಳೀಕರಣಗೊಳಿಸಿ, ಅರ್ಹರಿಗೆ ಇದರ ಅನುಕೂಲ ಕಲ್ಪಿಸಿಕೊಡಬೇಕೆಂದು ಅಖಿಲ ಕೊಡವ ಸಮಾಜ ಆಗ್ರಹಿಸಿದೆ.ಅಪರ ಜಿಲ್ಲಾಧಿಕಾರಿ ಸತೀಶ್ ಕುಮಾರ್ ಅವರ ಅಧ್ಯಕ್ಷತೆಯಲ್ಲಿಂದು ಅಖಿಲ ಕೊಡವ ಸಮಾಜ ಹಾಗೂ ವಿವಿಧ ಕೊಡವ ಸಮಾಜಗಳ ಅಧ್ಯಕ್ಷರುಗಳ ಸಮ್ಮುಖದಲ್ಲಿ ನಡೆದ ಸಭೆಯಲ್ಲಿ ಅಖಿಲ ಕೊಡವ ಸಮಾಜ ಅಧ್ಯಕ್ಷ ಮಾತಂಡ ಮೊಣ್ಣಪ್ಪ ಮಾತನಾಡಿ, ಭಾರತೀಯ ಶಸ್ತ್ರಾಸ್ತ್ರ ಕಾಯ್ದೆಯಿಂದ ಯಾವದೇ ತೊಂದರೆಯಾಗಿಲ್ಲ. ಆದರೆ ಜಿಲ್ಲಾಡಳಿತದಿಂದ ವಿನಾಯಿತಿ ಪತ್ರ ಹೊಂದಲು ವಿಧಿಸಿರುವ ನಿಯಮಾವಳಿಗಳಿಂದ ತೊಂದರೆಯಾಗುತ್ತಿದೆ. ಜಿಲ್ಲೆಯ ಹಿರಿಯ ಅಧಿಕಾರಿಗಳು ಬದಲಾದಂತೆಲ್ಲ ನಿಯಮಗಳು ಬದಲಾಗುತ್ತಿವೆ. ಇದರಿಂದಾಗಿ ತೊಂದರೆ ಅನುಭವಿಸುವಂತಾಗಿದೆ. ಜಿಲ್ಲಾಡಳಿತ ಈ ಬಗ್ಗೆ ಗಮನ ಹರಿಸಿ ನಿಯಮಗಳನ್ನು ಸರಳೀಕರಣಗೊಳಿಸಿ ಅರ್ಹರಿಗೆ ಸೌಲಭ್ಯ ಸಿಗುವಂತೆ ಅವಕಾಶ ಮಾಡಿಕೊಡಬೇಕೆಂದು ಆಗ್ರಹಿಸಿದರು. ಸಮಾಜದ ಕಾನೂನು ಸಲಹೆಗಾರ ಬಿ.ಬಿ. ಮಾದಪ್ಪ ಅವರು, ಕಾಯ್ದೆಯಲ್ಲಿನ

(ಮೊದಲ ಪುಟದಿಂದ) ತಾಂತ್ರಿಕ ವಿಚಾರದ ಬಗ್ಗೆ ಮನವರಿಕೆ ಮಾಡಿಕೊಟ್ಟರಲ್ಲದೆ, ನಿಯಮಗಳ ಬಗ್ಗೆ ಜಿಲ್ಲಾಡಳಿತ ಸರಕಾರಕ್ಕೆ ಆಕ್ಷೇಪಣೆ ಸಲ್ಲಿಸಿರುವದು ಸರಿಯಾದ ಕ್ರಮವಲ್ಲ ಎಂದು ಹೇಳಿದರು.

ಮನವಿ ಸ್ವೀಕರಿಸಿ ಮಾತನಾಡಿದ ಅಪರ ಜಿಲ್ಲಾಧಿಕಾರಿ ಸತೀಶ್‍ಕುಮಾರ್ ಅವರು ಕೋವಿ ವಿನಾಯಿತಿ ಅನುಭವಿಸಿದವರು ಇದೊಂದು ಅವಿಭಾಜ್ಯ ಅಂಗವೆಂದು ಭಾವಿಸಿದ್ದಾರೆ. ಇದನ್ನು ಗೌರವಿಸುವದಾಗಿ ಹೇಳಿದರು. ತಾವು ಸಲ್ಲಿಸಿರುವ ಸ್ಪಷ್ಟೀಕರಣವನ್ನು ಜಿಲ್ಲಾಧಿಕಾರಿಗಳ ಗಮನಕ್ಕೆ ತಂದು ಮತ್ತೊಂದು ಸಭೆ ಕರೆದು ಕ್ರಮ ಕೈಗೊಳ್ಳುವದಾಗಿ ಭರವಸೆ ನೀಡಿದರು.

ಈ ಸಂದರ್ಭ ಅಖಿಲ ಕೊಡವ ಸಮಾಜ ಕಾರ್ಯಾಧ್ಯಕ್ಷ ಇಟ್ಟಿರ ಬಿದ್ದಪ್ಪ, ಉಪಾಧ್ಯಕ್ಷ ಅಜ್ಜಿಕುಟ್ಟಿರ ಸುಬ್ರಮಣಿ ಮಾದಯ್ಯ, ಗೌರವ ಕಾರ್ಯದರ್ಶಿ ಅಮ್ಮುಣಿಚಂಡ ರಾಜಾ ನಂಜಪ್ಪ, ಖಜಾಂಚಿ ಮಂಡೇಪಂಡ ಸುಗುಣ ಮುತ್ತಣ್ಣ, ಜಂಟಿ ಕಾರ್ಯದರ್ಶಿ ನಂದೇಟಿರ ರಾಜಾ ಮಾದಪ್ಪ, ಕೊಡಗು ಏಕೀಕರಣ ರಂಗದ ತಮ್ಮು ಪೂವಯ್ಯ, ಬೆಂಗಳೂರು ಕೊಡವ ಸಮಾಜದ ಅಧ್ಯಕ್ಷ ಮಂಡೇಡ ರವಿ ಉತ್ತಪ್ಪ, ಹುದಿಕೇರಿಯ ಕೋದಂಡ ಸನ್ನು, ಕುಶಾಲನಗರದ ಮಂಡೇಪಂಡ ಬೋಸ್ ಮಂದಪ್ಪ, ಮಡಿಕೇರಿಯ ಚೀಯಣ್ಣ, ಮಕ್ಕಂದೂರಿನ ನಾಪಂಡ ರವಿಕಾಳಪ್ಪ, ಪೊನ್ನಂಪೇಟೆಯ ಸುಳ್ಳಿಮಾಡ ಗೋಪಾಲ ಇನ್ನಿತರರಿದ್ದರು.