ಸಿದ್ದಾಪುರ, ಫೆ. 13: ಮಾಲ್ದಾರೆ ದಿಡ್ಡಳಿ ನಿರಾಶ್ರಿತರಿಗೆ ನಿವೇಶನವನ್ನು ನೀಡಬೇಕೆಂದು ಮುಖ್ಯಮಂತ್ರಿಗಳ ಗಮನಕ್ಕೆ ತರುವದಾಗಿ ಹಿರಿಯ ಸ್ವಾತಂತ್ರ್ಯಾ ಹೋರಾಟಗಾರ ದೊರೆಸ್ವಾಮಿ ತಿಳಿಸಿದರು. ಮಾಲ್ದಾರೆಯ ದಿಡ್ಡಳಿಗೆ ಭೇಟಿ ನೀಡುವ ಉದ್ದೇಶದಿಂದ ಆಗಮಿಸಿದ ಅವರು 144 ಸೆಕ್ಷನ್ ಜಾರಿಯಲ್ಲಿದ್ದು, ಪೊಲೀಸರು ದೊರೆಸ್ವಾಮಿ ಹಾಗೂ ಕೆಲವರನ್ನು ದಿಡ್ಡಳ್ಳಿಗೆ ತೆರಳಬಹುದೆಂದು ತಿಳಿಸಿ ಇತರರು ತೆರಳಬಾರದೆಂದು ತಿಳಿಸಿದ ಹಿನ್ನೆಲೆಯಲ್ಲಿ ದಿಡ್ಡಳ್ಳಿಗೆ ತೆರಳದೆ ಮಾಲ್ದಾರೆ ಪಟ್ಟಣ ಸಮೀಪ ಆದಿವಾಸಿಗಳನ್ನು ಉದ್ದೇಶಿಸಿ ಮಾತನಾಡಿದರು. ರಾಜ್ಯದಾದ್ಯಂತ ಭೂಮಿ ಹಾಗೂ ವಸತಿ ವಂಚಿತರು ಹೆಚ್ಚಾಗಿದ್ದು, ದಿಡ್ಡಿಳ್ಳಿಯಲ್ಲಿ ಕೂಡ ನಿರಾಶ್ರಿತರು ಅಧಿಕವಾಗಿದ್ದಾರೆ. ಈ ಹಿನ್ನೆಲೆಯಲ್ಲಿ ಸಮಸ್ಯೆಯ ಬಗ್ಗೆ ಮುಖ್ಯಮಂತ್ರಿಗಳ ಗಮನಕ್ಕೆ ತರುವದಾಗಿ ತಿಳಿಸಿದರು.

ಮಾಲ್ದಾರೆ ಹಾಗೂ ದಿಡ್ಡಳ್ಳಿ ವ್ಯಾಪ್ತಿಯಲ್ಲಿ ನಿಷೇದಾಜ್ಞೆಯನ್ನು ಜಾರಿಗೊಳಿಸಿರುವ ಜಿಲ್ಲಾಧಿಕಾರಿಯ ವಿರುದ್ದ ಆಕ್ರೋಶ ವ್ಯಕ್ತಪಡಿಸಿ ತಾವು ಭೂಮಿ ಹಾಗೂ ವಸತಿ ವಂಚಿತರ ಹೋರಾಟಕ್ಕೆ ಆಗಮಿಸಿದ್ದು ತಮ್ಮನ್ನು ನಕ್ಸಲೀಯರು ಹಾಗೂ ಭಯೋತ್ಪಾದಕರಂತೆ ಕಾನೂನು ಉಲ್ಲಂಘನೆ ಮಾಡಿ ಸೆಕ್ಷನ್ ಜಾರಿಗೊಳಿಸಿರುವದು ಖಂಡನೀಯ ಎಂದರಲ್ಲದೇ ಯಾವ ಉದ್ದೇಶಕಾಗಿ ನಿಷೇಧಾಜ್ಞೆ ಜಾರಿಗೊಳಿದ್ದಾರೆ ಎಂದು ಪ್ರಶ್ನಿಸಿದರು. ಜನ ವಿರೋಧಿ ನೀತಿ ಹಾಗೂ ಶಾಸನವನ್ನು ಜಾರಿಗೊಳಿಸಿದ್ದು ಮುಂದಿನ ಬಾರಿ ಈ ರೀತಿಯಲ್ಲಿ ನಿಷೇದಾಜ್ಞೆ ಜಾರಿಗೊಳಿಸಿದಲ್ಲಿ ತಾನು ಅದನ್ನು ಮುರಿದು ಹಾಕುವದಾಗಿ ಎಚ್ಚರಿಸಿದ ದೊರೆಸ್ವಾಮಿ ಅವರು, ತಾನು ಇಲ್ಲೇ ಕುಳಿತು ಸತ್ಯಾಗ್ರಹ ಮಾಡುವದಾಗಿ ತಿಳಿಸಿದರು. ಜಿಲ್ಲಾಧಿಕಾರಿಗಳಿಗೆ ಆದಿವಾಸಿಗಳ ಸಮಸ್ಯೆ ತಿಳಿದಿಲ್ಲವೇ ಅಥವಾ ಅರಿವಿನ ಕೊರತೆ ಇದೆಯೋ ಎಂದು ಪಶ್ನಿಸಿದ ಅವರು ಬಡವರ ಸಮಸ್ಯೆಯನ್ನು ನಿರ್ಮೂಲನೆ ಮಾಡುವ ಬದ್ಧತೆ ಜಿಲ್ಲಾಧಿಕಾರಿಗಳಿಗೆ ಇಲ್ಲವೆಂದು ಅಸಮಾಧಾನ ವ್ಯಕ್ತಪಡಿಸಿದರು.

ಸರ್ಕಾರವು ವಸತಿ ಹಾಗೂ ಭೂಮಿ ವಂಚಿತರಿಗೆ ಭೂಮಿ ನೀಡಲು ಯೋಜನೆಯನ್ನು ಜಾರಿಗೆ ತಂದಿದ್ದರÀೂ ಕೂಡ ಜಿಲ್ಲಾಡಳಿತ

(ಮೊದಲ ಪುಟದಿಂದ) ಸರ್ಕಾರದ ಯೋಜನೆಯನ್ನು ಜಾರಿ ಗೊಳಿಸದೆ ನಿರ್ಲಕ್ಷ್ಯ ವಹಿಸುತ್ತಿರು ವದು ಸರಿಯಲ್ಲ ದಿಡ್ಡಳ್ಳಿಯಲ್ಲಿ ನಿರಾಶ್ರಿತರಿಗೆ ನಿವೇಶನ ವನ್ನು ನೀಡದಂತೆ ಒತ್ತಾಯಿಸುವವÀರು ಬಾಡಿಗೆ ಜನಗಳಾಗಿದ್ದಾರೆ ಎಂದು ಆರೋಪಿಸಿದರು. ದೇಶದಲ್ಲಿ ಎಲ್ಲಿ ಬೇಕಾದರೂ ಜೀವಿಸುವ ಹಕ್ಕು ಭಾರತೀಯರಿಗೆ ಇದ್ದು ಈ ಹಿನೆÀ್ನಲೆಯಲ್ಲಿ ಹೊರಗಡೆಯಿಂದ ಬಂದರು ಎಂದು ಟೀಕಿಸಿ ನಿವೇಶನ ಹಾಗೂ ಭೂಮಿಯನ್ನು ನೀಡದೆ ವಿರೋಧ ಮಾಡುತ್ತಿರುವ ಬೆಳೆಗಾರರ ವಿರುದ್ಧ ಆಕ್ರೋಶ ವ್ಯಕ್ತಪಡಿಸಿದ ದೊರೆಸ್ವಾಮಿ ಅವರು ಬೆಳೆಗಾರರು ನೂರಾರು ಎಕರೆ ಭೂಮಿಯನ್ನು ಒತ್ತುವರಿ ಮಾಡಿಕೊಂಡು ಆದಿವಾಸಿ ಗಳನ್ನು ಗುಲಾಮರನ್ನಾಗಿ ಮಾಡಿ ಬಂಧಿಗಳಾಗಿ ಇಟ್ಟುಕೊಂಡಿ ದ್ದಾರೆ ಎಂದು ಆರೋಪಿಸಿ, ಆದಿವಾಸಿಗಳನ್ನು ದುಡಿಸಿಕೊಂಡು ಮನುಷ್ಯರನ್ನಾಗಿ ಕಾಣದೆ ಅನ್ಯಾಯ ಎಸಗುತ್ತಿದ್ದಾರೆ ಎಂದು ಅಸಮಾಧಾನ ವ್ಯಕ್ತಪಡಿಸಿದ ಅವರು ತೋಟಗಳ ವಸತಿ ಗೃಹಗಳಲ್ಲಿ ವಾಸ ಮಾಡಿಕೊಂಡು ಕೂಲಿ ಕಾರ್ಮಿಕರಾಗಿ ದುಡಿಯುತ್ತಿರುವ ಯುವಕರು ಹಾಗೂ ಯುವತಿಯರು ತೋಟಗಳಿಂದ ಹೊರಕ್ಕೆ ಬಂದು ಸಂಘಟನೆಗೊಂಡು ಜವಾಬ್ದಾರಿ ಯಿಂದ ಸ್ವಾಭಿಮಾನದಿಂದ ತಮ್ಮ ಹಕ್ಕುಗಳನ್ನು ಪಡೆದುಕೊಳ್ಳಬೇಕೆಂದು ಆದಿವಾಸಿಗಳಿಗೆ ಕಿವಿಮಾತು ಹೇಳಿದರು.

ಬೆಳೆಗಾರರು ಆದಿವಾಸಿಗಳನ್ನು ಒಕ್ಕಲೆಬ್ಬಿಸಲು ಪ್ರಯತ್ನಿಸದೆ ಅವರನ್ನು ಮನುಷ್ಯರಂತೆ ಕಾಣಬೇಕೆಂದು ಸಲಹೆ ನೀಡಿದರು. ಜಿಲ್ಲಾಧಿಕಾರಿಗಳು ಕೆ.ನಿಡುಗಣೆ ಸಮೀಪ ಬಡವರನ್ನು ಒಕ್ಕಲೆಬ್ಬಿಸಿರುವದು ಖಂಡನೀಯ ವಾಗಿದ್ದು, ಪುನರ್ ವಸತಿ ಕಲ್ಪಿಸದೆ ಅವರನ್ನು ಬೀದಿ ಪಾಲು ಮಾಡಿರುವದು ಸರಿಯಾದ ಕ್ರಮವಲ್ಲ. ಮುಂದಿನ ದಿನಗಳಲ್ಲಿ ಅನಗತ್ಯವಾಗಿ ನಿಷೇಧಾಜ್ಞೆಯನ್ನು ಜಾರಿಗೊಳಿಸಿದಲ್ಲಿ ಆದಿವಾಸಿಗಳನ್ನು ಸಂಘಟಿಸಿ ಸಮಿತಿಯ ಮುಖಾಂತರ ಉಗ್ರ ಹೋರಾಟವನ್ನು ಹಮ್ಮಿಕೊಳ್ಳಲಾಗು ವದು. ಬೀದಿಗಳಲ್ಲಿ ವಾಸ ಮಾಡುವದಕ್ಕಿಂತಲೂ ಹೋರಾಟ ದಿಂದ ಜೈಲಿನಲ್ಲಿ ವಾಸವಿರುವದೇ ಲೇಸು. ಮುಖ್ಯಮಂತ್ರಿಗಳು ಸದÀ್ಯದಲ್ಲೇ ಸಭೆ ದಿನಾಂಕವನ್ನು ನಿಗಧಿಪಡಿಸಿದ ಬಳಿಕ ಮುಖ್ಯಮಂತ್ರಿಗಳೊಂದಿಗೆ ಚರ್ಚಿಸಲಾಗುವದು ಎಂದರು.

ಮಾಜಿ ವಿಧಾನ ಪರಿಷತ್ ಸದಸ್ಯ ಹಾಗೂ ಹಿರಿಯ ವಕೀಲ ಎ.ಕೆ ಸುಬ್ಬಯ್ಯ ಮಾತನಾಡಿ, ಸರಕಾರ ಹೋರಾಟಕ್ಕೆ ಮಣಿದು ಒಂದು ಕೋಟಿ ರೂ ನೀಡಿದ್ದು, ಒಂದು ತಿಂಗಳಲ್ಲಿ ಶಾಶ್ವತ ಸೂರು ಒದಗಿಸುವ ಭರವಸೆ ನೀಡಿದ್ದರು. ಆದರೆ ಇದೀಗ ತಿಂಗಳುಗಳು ಕಳೆದರೂ ಆದಿವಾಸಿಗಳ ಶಾಶ್ವತ ಸೂರಿನ ಬಗ್ಗೆ ಸರಕಾರ ಚಕಾರವೆತ್ತುತ್ತಿಲ್ಲ. ಮುಖ್ಯಮಂತ್ರಿಗಳು ಕೂಡ ಆದಿವಾಸಿ ಮುಖಂಡರ ಸಭೆ ಕರೆಯುವದಾಗಿ ತಿಳಿಸಿದ್ದು, ಈವರೆಗೂ ಸಭೆ ನಿಗದಿಪಡಿಸಿಲ್ಲ. ಜಿಲ್ಲಾಡಳಿತವು ಏಕಾಏಕಿ ನಿರಾಶ್ರಿತರನ್ನು ಒಕ್ಕಲೆಬ್ಬಿಸುವ ಹುನ್ನಾರದಲ್ಲಿ ಸಚಿವರ ಗಮನಕ್ಕೆ ತಾರದೆ ಲಾಟರಿ ಮುಖಾಂತರ ನಿವೇಶನವನ್ನು ಹಂಚಲು ಮುಂದಾ ಗಿರುವದು ಸರಿಯಾದ ಕ್ರಮವಲ್ಲ ಎಂದರು. ದಿಡ್ಡಳ್ಳಿಯಲ್ಲಿ 9 ಸಾವಿರ ಏಕರೆ ಪೈಸಾರಿ ಜಾಗವಿದ್ದು, ದಿಡ್ಡಳ್ಳಿಯಲ್ಲಿಯೇ ನಿರಾಶ್ರಿತರಿಗೆ ನಿವೇಶನ ಏಕೆ ನೀಡಬಾರದು ಎಂದು ಪ್ರಶ್ನಿಸಿದ ಅವರು ಕಾನೂನಿನ ತೊಡಕು ಇಲ್ಲದಿದ್ದರೂ ಕೆಲವರ ಒತ್ತಡಕ್ಕೆ ಮಣಿದು ಜಿಲ್ಲಾಡಳಿತವು ಆದಿವಾಸಿ ಗಳನ್ನು ಸ್ಥಳಾಂತರ ಮಾಡಲು ಪ್ರಯತ್ನಿಸುತ್ತಿದೆ ಎಂದು ಟೀಕಿಸಿದರು. ದಿಡ್ಡಳ್ಳಿ ವ್ಯಾಪ್ತಿಯಲ್ಲಿ ಸೆಕ್ಷನ್ ಜಾರಿಗೊಳಿಸಿರುವ ಬಗ್ಗೆ ಜಿಲ್ಲಾಧಿಕಾರಿಯ ವಿರುದ್ಧ ಅಸಮಾಧಾನ ವ್ಯಕ್ತಪಡಿಸಿದರು. ಮುಖ್ಯಮಂತ್ರಿಗಳನ್ನು ಸದÀ್ಯದಲ್ಲೇ ಭೇಟಿ ಮಾಡಿ ಜಿಲ್ಲೆಯ ಎಲ್ಲಾ ಆದಿವಾಸಿ ಗಳಿಗೆ ಶಾಶ್ವತ ಸೂರು ಒದಗಿಸುವ ಬಗ್ಗೆ ಚರ್ಚಿಸಲಾಗುವದು. ದಿಡ್ಡಳ್ಳಿ ಯಲ್ಲಿ ವಾಸವಾಗಿರುವ ಆದಿವಾಸಿಗಳು ಯಾವದೇ ಭಯಪಡುವ ಅಗತ್ಯವಿಲ್ಲ ಎಂದು ತಿಳಿಸಿದರು.

ಆದಿವಾಸಿ ಮುಖಂಡೆ ಮುತ್ತಮ್ಮ ಮಾತನಾಡಿ, ಕಳೆದ 9 ತಿಂಗಳಿಂದ ಆದಿವಾಸಿಗಳು ವಾಸವಾಗಿದ್ದು, ಜಿಲ್ಲಾಡಳಿತವು ಏಕಾಏಕಿ ಲಾಟರಿ ಮೂಲಕ ಬೆಟ್ಟಗುಡ್ಡ ಪ್ರದೇಶದಲ್ಲಿ ಪುನರ್‍ವಸತಿ ಕಲ್ಪಿಸಲು ಮುಂದಾಗಿದ್ದು, ತಮಗೆ ದಿಡ್ಡಳ್ಳಿ ಯಲ್ಲ್ಲಿಯೇ ನಿವೇಶನ ನೀಡಬೇಕು. ಇಲ್ಲವಾದಲ್ಲಿ ತಮ್ಮ ಹೋರಾಟವನ್ನು ಮುಂದುವರೆಸ ಲಾಗುವದು ಎಂದರು.

ಆದಿವಾಸಿ ಮುಖಂಡ ಜೆ.ಕೆ ಅಪ್ಪಾಜಿ ಮಾತನಾಡಿ, ಅರಣ್ಯಾಧಿಕಾರಿ ಗಳು ಆದಿವಾಸಿಗಳ ಗುಡಿಸಲುಗಳನ್ನು ಏಕಾಏಕಿ ತೆರವುಗೊಳಿಸಿದ ಸಂದರ್ಭದಲ್ಲಿ ಬಾಣಂತಿಯರು, ಮಹಿಳೆಯರು ಹಾಗೂ ಮಕ್ಕಳನ್ನು ಲೆಕ್ಕಿಸದೆ ತೆರವುಗೊಳಿಸಿದ್ದಾರೆ. ದೌರ್ಜನ್ಯವೆಸಗಿದ ಅಧಿಕಾರಿಗಳ ವಿರುದ್ಧ ಕ್ರಮ ಕೈಗೊಳ್ಳಬೇಕು ಎಂದು ಒತ್ತಾಯಿಸಿ ದಿಡ್ಡಳ್ಳಿ ಪೈಸಾರಿ ಜಾಗದಲ್ಲಿ ತಮಗೆ ಶಾಶ್ವತ ಸೂರು ನೀಡಬೇಕೆಂದು ಒತ್ತಾಯಿಸಿದರು.

ಪ್ರಾಸ್ತಾವಿಕ ಮಾತನಾಡಿದ ಭೂಮಿ ಮತ್ತು ವಸತಿ ವಂಚಿತ ಹೋರಾಟ ಸಮಿತಿಯ ಜಿಲ್ಲಾ ಸಂಚಾಲಕ ನಿರ್ವಾಣಪ್ಪ ಆದಿವಾಸಿಗಳ ಹೋರಾಟದ ಫಲವಾಗಿ ಸರಕಾರವು ಒಂದು ಕೋಟಿ ಹಣವನ್ನು ಬಿಡುಗಡೆಗೊಳಿಸಿ, ಮೂಲಭೂತ ಸೌಕರ್ಯ ಒದಗಿಸಲು ಜಿಲ್ಲಾಧಿಕಾರಿ ಗಳಿಗೆ ಸೂಚಿಸಿದ್ದರೂ, ಆದಿವಾಸಿಗಳಿಗೆ ಸೂಕ್ತ ಸೌಲಭ್ಯವನ್ನು ಒದಗಿಸದೇ ಹಣವನ್ನು ಪೋಲು ಮಾಡಲಾಗಿದೆ ಎಂದು ಆರೋಪಿಸಿದರು. ಕೆಲವು ಸಂಘಟನೆಗಳು ಆದಿವಾಸಿಗಳ ಹೋರಾಟವನ್ನು ದಿಕ್ಕು ತಪ್ಪಿಸಲು ಪ್ರಯತ್ನಿಸುತ್ತಿದ್ದು, ಜಿಲ್ಲಾಧಿಕಾರಿಗಳು ಕೆಲವು ಸಂಘಟನೆಗಳ ಒತ್ತಡಕ್ಕೆ ಮಣಿದು ನಿಷೇಧಾಜ್ಞೆ ಜಾರಿಗೊಳಿಸಿರು ವದು ಖಂಡನೀಯ. ಜಿಲ್ಲಾಧಿಕಾರಿಗಳು ಭೂ ಮಾಲೀಕರ ಪರ ವಹಿಸಿಕೊಂಡು ಆದಿವಾಸಿಗಳಿಗೆ ಅನ್ಯಾಯವೆಸ ಗುತ್ತಿದ್ದಾರೆ ಎಂದು ಆರೋಪಿಸಿದರು.

ದಿಡ್ಡಳ್ಳಿ ಹಾಗೂ ಮಾಲ್ದಾರೆ ವ್ಯಾಪ್ತಿಯಲ್ಲಿ ದಕ್ಷಿಣ ವಲಯ ಪೊಲೀಸ್ ಮಹಾನಿರ್ದೇಶಕ ವಿಪುಲ್ ಕುಮಾರ್, ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ರಾಜೇಂದ್ರ ಪ್ರಸಾದ್, ಡಿ.ವೈ.ಎಸ್.ಪಿ ಛಬ್ಬಿ ನೇತೃತ್ವದಲ್ಲಿ ಬಿಗಿ ಪೊಲೀಸ್ ಬಂದೋಬಸ್ತ್ ಏರ್ಪಡಿಸ ಲಾಗಿತ್ತು. ಇದೇ ಸಂದರ್ಭ ದಿಡ್ಡಳ್ಳಿಯಿಂದ ಕಾಲ್ನಡಿಗೆಯಲ್ಲಿ ದೊರೆಸ್ವಾಮಿ ಅವರನ್ನು ಭೇಟಿ ಮಾಡಲು ನೂರಾರು ಆದಿವಾಸಿಗಳು ಆಗಮಿಸಿದ್ದರು.

ಈ ಸಂದರ್ಭ ಹೋರಾಟ ಸಮಿತಿಯ ಮುಖಂಡರಾದ ಸಿರಿಮನೆ ನಾಗರಾಜ್, ವಸಂತ್ ಕುಮಾರ್, ಕಾವೇರಿ, ಅಮೀನ್ ಮೊಹಿಸಿನ್, ಮನ್ಸೂರ್, ಶೌಕತ್ ಆಲಿ, ಸ್ವಾಮಿಯಪ್ಪ, ಮಲ್ಲಿಗೆ, ನೇಮಿಚಂದ್ ಇನ್ನಿತರರು ಇದ್ದರು.