ಮಡಿಕೇರಿ, ಫೆ.12 : ಪ್ರವಾಸೋದ್ಯಮ ಕ್ಷೇತ್ರದಲ್ಲಿ ಬೆಳವಣಿಗೆಯನ್ನು ಕಾಣುತ್ತಿರುವ ಕೊಡಗು ಜಿಲ್ಲೆಯಲ್ಲಿ ಬಾಡಿಗೆ ಬೈಕ್ಗಳ ಪರಿಕಲ್ಪನೆಗೆ ಅವಕಾಶ ನೀಡುವದಕ್ಕೆ ಕಾಂಗ್ರೆಸ್ ಪಕ್ಷದ ರಾಜೀವ್ ಗಾಂಧಿ ಪಂಚಾಯತ್ ರಾಜ್ ಸಂಘಟನೆಯ ಜಿಲ್ಲಾ ಘಟಕ ವಿರೋಧ ವ್ಯಕ್ತಪಡಿಸು ತ್ತದೆ ಎಂದು ಘಟಕದ ಜಿಲ್ಲಾ ಸಂಯೋಜಕ ತೆನ್ನೀರ ಮೈನಾ ತಿಳಿಸಿದ್ದಾರೆ.
ಪತ್ರಿಕಾ ಹೇಳಿಕೆ ನೀಡಿರುವ ಅವರು ಕೊಡಗಿನ ವಾಹನ ಮಾಲೀಕರು ಹಾಗೂ ಆಟೋ ಮಾಲೀಕರ ಹಿತಾಸಕ್ತಿಯನ್ನು ಕಡೆಗಣಿಸಿ ಮೋಜಿಗಾಗಿ ಬರುವ ಪ್ರವಾಸಿಗರ ಹಿತ ಕಾಪಾಡಲು ಹೊರಟಿರುವದು ಸರಿಯಾದ ಕ್ರಮವಲ್ಲವೆಂದಿದ್ದಾರೆ. ಕೊಡಗು ಗುಡ್ಡಗಾಡಿನ ಪ್ರದೇಶ ವಾಗಿದ್ದು, ಈಗಾಗಲೇ ವಾಹನದಟ್ಟಣೆ ಹೆಚ್ಚಾಗಿದೆ. ಪಾರ್ಕಿಂಗ್ ಹಾಗೂ ಸಂಚಾರ ವ್ಯವಸ್ಥೆಯಲ್ಲಿ ಗೊಂದಲಗಳಿವೆ. ಈ ನಡುವೆಯೇ ಬೈಕ್ಗಳನ್ನು ಬಾಡಿಗೆಗೆ ನೀಡುವ ಕ್ರಮ ಅವೈಜ್ಞಾನಿಕವಾಗಿದೆ. ಅಲ್ಲದೆ ಸ್ಥಳೀಯ ಚಾಲಕರ ಬದುಕಿಗೆ ತೊಂದರೆ ಯಾಗಲಿದೆ ಎಂದು ಅಭಿಪ್ರಾಯ ಪಟ್ಟಿದ್ದಾರೆ. ಸಾರಿಗೆ ಇಲಾಖೆ ಇದಕ್ಕೆ ಅನುಮತಿ ನೀಡಬಾರದೆಂದು ಒತ್ತಾಯಿಸಿರುವ ತೆನ್ನಿರ ಮೈನಾ, ಕಾವೇರಿ ಡ್ರೈವರ್ಸ್ ಅಸೋಸಿಯೇಷನ್ ಮತ್ತು ಆಟೋ ಮಾಲೀಕರ ಸಂಘ ನಡೆಸುವ ಪ್ರತಿಭಟನೆಗೆ ಬೆಂಬಲ ನೀಡುವದಾಗಿ ತಿಳಿಸಿದ್ದಾರೆ.