ಮಡಿಕೇರಿ, ಫೆ.13 : ರಾಯಲ್ ಬ್ರದರ್ಸ್ ಸಂಸ್ಥೆ ಪ್ರವಾಸಿಗರನ್ನು ಗುರಿಯಾಗಿರಿಸಿಕೊಂಡು ಬಾಡಿಗೆ ಬೈಕ್‍ಗಳ ಸೇವೆಯನ್ನು ಆರಂಭಿಸಿರುವದನ್ನು ವಿರೋಧಿಸಿರುವ ಆಟೋ ಹಾಗೂ ಟ್ಯಾಕ್ಸಿ ಚಾಲಕರು ತಾ. 15 ರಂದು ತಮ್ಮ ವಾಹನಗಳ ಸಂಚಾರವನ್ನು ಸ್ಥಗಿತಗೊಳಿಸಿ ಪ್ರತಿಭಟನೆ ನಡೆಸಲು ನಿರ್ಧರಿಸಿದ್ದಾರೆ.

ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಆಟೋ ಮಾಲೀಕರ ಹಾಗೂ ಚಾಲಕರ ಸಂಘದ ಜಿಲ್ಲಾಧ್ಯಕ್ಷ ಡಿ.ಹೆಚ್. ಮೇದಪ್ಪ, ಬಾಡಿಗೆ ಬೈಕ್‍ಗಳ ಸಂಚಾರಕ್ಕೆ ಜಿಲ್ಲೆಯಾದ್ಯಂತ ವಿರೋಧ ವ್ಯಕ್ತವಾಗಿದ್ದರೂ ಸಂಸ್ಥೆ ಈ ಸೇವೆಗೆ ಚಾಲನೆ ನೀಡಿದ್ದು, ಇದನ್ನು ವಿರೋಧಿಸುವದಾಗಿ ತಿಳಿಸಿದರು. ಬಾಡಿಗೆ ಬೈಕ್ ವ್ಯವಸ್ಥೆಗೆ ಯಾವದೇ ಕಾರಣಕ್ಕೂ ಅವಕಾಶ ನೀಡಬಾರದೆಂದು ಒತ್ತಾಯಿಸಿ ಬುಧವಾರ ಬೆಳಗ್ಗೆ 6 ಗಂಟೆಯಿಂದ ಸಂಜೆ 6 ಗಂಟೆ ವರೆಗೆ ಆಟೋ, ಟ್ಯಾಕ್ಸಿ ಹಾಗೂ ಜೀಪುಗಳ ಸಂಚಾರವನ್ನು ಸ್ಥಗಿತಗೊಳಿಸಿ ಜನರಲ್ ತಿಮ್ಮಯ್ಯ ವೃತ್ತದಿಂದ ಜಿಲ್ಲಾಧಿಕಾರಿಗಳ ಕಚೇರಿವರೆಗೆ ಪ್ರತಿಭಟನಾ ಮೆರವಣಿಗೆ ನಡೆಸಿ ಮನವಿ ಸಲ್ಲಿಸಲಾಗುವದೆಂದು ತಿಳಿಸಿದರು.

ಪ್ರತಿಭಟನೆಯ ದಿನ ಶಾಲಾ ವಿದ್ಯಾರ್ಥಿಗಳು, ಪೋಷಕರು ಹಾಗೂ ಸಾರ್ವಜನಿಕರು ಸಹಕರಿಸಬೇಕೆಂದು ಮನವಿ ಮಾಡಿದರು.

ಇತ್ತೀಚಿನ ದಿನಗಳಲ್ಲಿ ಸ್ಥಳೀಯ ಚಾಲಕರುಗಳು ಬಾಡಿಗೆ ಇಲ್ಲದೆ ಅತ್ಯಂತ ಕಷ್ಟ, ನಷ್ಟದ ಪರಿಸ್ಥಿತಿಯಲ್ಲಿ ಜೀವನ ಸಾಗಿಸುತ್ತಿರುವ ಸಂದರ್ಭ ದಲ್ಲೇ ರಾಯಲ್ ಬ್ರದರ್ಸ್ ಸಂಸ್ಥೆ ಪ್ರವಾಸಿಗರಿಗಾಗಿ ಬೈಕ್‍ಗಳನ್ನು ಬಾಡಿಗೆಗೆ ನೀಡಲು ಮುಂದೆ ಬಂದಿದೆ. ಇದೊಂದು ಹೊರ ಪ್ರದೇಶದ ಬಂಡವಾಳಶಾಹಿ ಸಂಸ್ಥೆಯಾಗಿದ್ದು, ಇದು ಕೊಡಗಿನಲ್ಲಿ ನೆಲೆಯೂರುವ ದರಿಂದ ಬಡ ವರ್ಗದ ಚಾಲಕರು ಸಂಕಷ್ಟವನ್ನು ಎದುರಿಸಬೇಕಾಗುತ್ತದೆ. ಬಾಡಿಗೆ ಬೈಕ್‍ಗಳಿಂದ ಸಂಸ್ಥೆಗೆ ಹಾಗೂ ಏಜೆಂಟರಿಗೆ ಮಾತ್ರ ಲಾಭವಾಗುತ್ತದೆ ಯೇ ಹೊರತು ಯಾವದೇ ಉದ್ಯೋಗ ಸೃಷ್ಟಿಯಾಗುವದಿಲ್ಲ. ಆದರೆ ಸ್ಥಳೀಯ ಆಟೋ, ಟ್ಯಾಕ್ಸಿ ಹಾಗೂ ಜೀಪು ಗಳಿಂದ ಉದ್ಯೋಗ ಸೃಷ್ಟಿಯಾಗುತ್ತದೆ ಎಂದು ಮೇದಪ್ಪ ಅಭಿಪ್ರಾಯಪಟ್ಟರು.

ಅತ್ಯಂತ ಸಣ್ಣ ಜಿಲ್ಲೆಯಾಗಿರುವ ಕೊಡಗು ಬೆಟ್ಟಗುಡ್ಡಗಳಿಂದ ಕೂಡಿದ್ದು, ಬಾಡಿಗೆ ಬೈಕ್‍ಗಳಲ್ಲಿ ಪ್ರವಾಸಿಗರು ಸಂಚರಿಸಿರುವದರಿಂದ ಅಪಘಾತಗಳ ಸಂಖ್ಯೆ ಹೆಚ್ಚಾಗಲಿದೆ. ಅಲ್ಲದೆ ಬಾಡಿಗೆ ಬೈಕ್‍ಗಳ ಪರಿಕಲ್ಪನೆಯ ಮತ್ತಷ್ಟು ಸಂಸ್ಥೆಗಳು ಕೊಡಗನ್ನು ಪ್ರವೇಶಿಸಲಿವೆ ಎಂದು ಆತಂಕ ವ್ಯಕ್ತಪಡಿಸಿದರು.

ಪ್ರತಿಭಟನೆಯ ನಂತರವೂ ಜಿಲ್ಲಾಡಳಿತ ಸೂಕ್ತ ಕ್ರಮ ಕೈಗೊಂಡು ಬಾಡಿಗೆ ಬೈಕ್ ವ್ಯವಸ್ಥೆಯನ್ನು ಸ್ಥಗಿತಗೊಳಿಸದಿದ್ದಲ್ಲಿ ಜಿಲ್ಲೆಯಾದ್ಯಂತ ಹೋರಾಟವನ್ನು ಹಮ್ಮಿಕೊಳ್ಳ ಬೇಕಾಗುತ್ತದೆ ಎಂದು ಮೇದಪ್ಪ ಎಚ್ಚರಿಕೆ ನೀಡಿದರು.

ಸುದ್ದಿಗೋಷ್ಠಿಯಲ್ಲಿ ಕಾವೇರಿ ಡ್ರೈವರ್ಸ್ ಅಸೋಸಿಯೇಷನ್ ನಗರಾಧ್ಯಕ್ಷ ಬಿ.ಕೆ. ಜೈಜಗದೀಶ್, ಟೂರಿಸ್ಟ್ ವಾಹನ ಚಾಲಕರ ಸಂಘದ ನಗರಾಧ್ಯಕ್ಷ ವೀರೇಂದ್ರ, ಆಟೋ ಚಾಲಕರÀ ಸಂಘÀದ ಪ್ರಧಾನ ಕಾರ್ಯದರ್ಶಿ ಪಿ.ಎಂ. ಪ್ರಸನ್ನ ಹಾಗೂ ನಗರಾಧ್ಯಕ್ಷ ಕೆ. ಎ. ಅರುಣ್ ಕುಮಾರ್ ಉಪಸ್ಥಿತರಿದ್ದರು.