*ಗೋಣಿಕೊಪ್ಪಲು, ಫೆ. 12 : ಚಾಮರಾಜನಗರ ಜಿಲ್ಲೆಯಲ್ಲಿ ಒಂದುವರೆ ತಿಂಗಳ ಹಿಂದೆ ಹಿಡಿದಿದ್ದ ಒಂಟಿ ಸಲಗ ಇದೀಗ ತಿತಿಮತಿ ಸಮೀಪದ ಮತ್ತಿಗೋಡು ಸಾಕಾನೆ ಶಿಬಿರದ ದೊಡ್ಡಿಯೊಳಗೆ ನಿಧಾನವಾಗಿ ಪಳಗುತ್ತಿದೆ. ಅಲ್ಲಿನ ಜನರಿಗೆ ಯಮಕಂಟಕವಾಗಿದ್ದ ಆನೆ ಇದೀಗ ಮರದ ಸಣ್ಣ ದೊಡ್ಡಿಯೊಳಗೆ ನಿಂತು ಸುಳಿದಾಡಲೂ ಸಾಧ್ಯವಾಗದ ಸ್ಥಿತಿಯಲ್ಲಿ ಕಾಲ ಕಳೆಯುತ್ತಿದೆ.ಅಂದಾಜು 45 ವರ್ಷ ಪ್ರಾಯದ ಈ ಸಲಗ ಬಂಧಿಯಾದಾಗ ಭಾರಿ ಗಾತ್ರದ ಮರದ ದೊಡ್ಡಿಯೊಳಗೆ ಕೂಡಿ ಹಾಕಿದ್ದರೂ ಭೀಕರವಾಗಿ ಬುಸುಗುಡುತ್ತಾ ತನ್ನ ಹತ್ತಿರ ಸುಳಿದಾಡಲು ಯಾರನ್ನೂ ಬಿಟ್ಟುಕೊಳ್ಳುತ್ತಿರಲಿಲ್ಲ. ಮರದ ದೊಡ್ಡಿಯನ್ನೆ ಮುರಿದು ಮೇಲೆ ಬೀಳುವ ರೀತಿ ಭೋರ್ಗರೆಯುತ್ತಿತ್ತು. ಮಾವುತರಾದ ವಸಂತ ಮತ್ತು ಕೃಷ್ಣ ಸಾಕಾನೆಗಳನ್ನು ದೊಡ್ಡಿಯ ಹೊರಗೆ ನಿಲ್ಲಿಸಿಕೊಂಡು ಅದಕ್ಕೆ ಮೇವು ಕೊಡುವದು, ನೀರು ಕುಡಿಸುವದು ಮಾಡುತ್ತಿದ್ದರು.

ಇದೀಗ ಈ ಆನೆ ಸ್ವಭಾವದಲ್ಲಿ ಸಂಪೂರ್ಣ ಬದಲಾಗಿದೆ. ದೊಡ್ಡಿಯೊಳಗಿದ್ದುಕೊಂಡೆ ಮಾವುತರು ಹೇಳಿದಂತೆ ಕೇಳುತ್ತಿದೆ. ಮಾವುತರ ಭಾಷೆಯಲ್ಲಿ ಆರೆ ಅಂದರೆ ನಿಂತುಕೊಳ್ಳುತ್ತಿದೆ.ದೆರೆ ಸೂಪ್ ಅಂದರೆ ನೀರು ಕುಡಿಯುತ್ತದೆ. ದೆರೆ ದೂರ್ ಎಂದರೆ ನೀರು ಎರಚುತ್ತದೆ. ಮಾವುತರು ದೊಣ್ಣೆಯಿಂದ

(ಮೊದಲ ಪುಟದಿಂದ) ಅದರ ಮೈ ಉಜ್ಜಿ, ಕಾಲಿಗೆ ಬಿಸಿನೀರು ಹಾಕಿ, ತಿನ್ನಲು ಭತ್ತದ ಹುಲ್ಲು, ಬೆಲ್ಲ ಕೊಟ್ಟು ಉಪಚರಿಸುತ್ತಿದ್ದಾರೆ. ಹೊರಗೆ ದೊಡ್ಡದೊಂದು ಪಾತ್ರೆ ಇಟ್ಟು ಆಗಾಗ್ಗೆ ನೀರು ತುಂಬಿಸುತ್ತಾರೆ. ಒಂದು ಬಿಂದಿಗೆ ನೀರನ್ನು ಒಮ್ಮೆಲೆ ಸೊಂಡಿಲಿನಿಂದ ಹೀರಿಕೊಳ್ಳುವ ಸಲಗ ಮೈಮೇಲೆಲ್ಲ ಎರಚಿಕೊಳ್ಳುತ್ತದೆ

ಈಗ ಮೊದಲಿನಷ್ಟು ಆರ್ಭಟವಿಲ್ಲ. ಕೋಪವೂ ಇಲ್ಲ. ಆದರೂ ಗಾತ್ರ ಮತ್ತು ತೂಕದಲ್ಲಿ ಕಡಿಮೆಯಾದಂತೆ ಕಾಣಿಸುವದಿಲ್ಲ. ಮಾವುತರು ಕೊಟ್ಟ ಸೊಪ್ಪು, ಹುಲ್ಲು ತಿನ್ನುತ್ತಾ ಕಾಡನ್ನು ಮರೆತಂತಿದೆ. ಇನ್ನು ಒಂದು ತಿಂಗಳ ಬಳಿಕ ದೊಡ್ಡಿಯಿಂದ ಹೊರಗೆ ಬಿಡುತ್ತೇವೆ. ಇದಕ್ಕೆ ನಮ್ಮ ಸಾಹೇಬರು ಮಲೆ ಮಹದೇಶ್ವರ ಎಂದು ಹೆಸರಿಟ್ಟಿದ್ದಾರೆ ಎಂದು ಮಾವುತರು ತಿಳಿಸಿದರು.

-ಚಿತ್ರ ವರದಿ : ಎನ್.ಎನ್.ದಿನೇಶ್