ಮಾನ್ಯರೆ,

ಭಾರತ ದೇಶದ ಇಂದಿನ ಜನಸಂಖ್ಯೆಯ ಪ್ರಮಾಣ, ವನ್ಯಪ್ರಾಣಿ ಪಕ್ಷಿಗಳ ಪ್ರಮಾಣ, ಬೀಳುತ್ತಿರುವ ಮಳೆಯ ಪ್ರಮಾಣ, ಮಾನವ ಮತ್ತು ವನ್ಯಪ್ರಾಣಿಗಳ ಮಧ್ಯೆ ನಡೆಯುತ್ತಿರುವ ಸಂಘರ್ಷಗಳ ಪ್ರಮಾಣ, ಆಗುತ್ತಿರುವ ಪರಿಸರ ನಾಶದ ಪ್ರಮಾಣ ಮತ್ತು ಏರುತ್ತಿರುವ ಸೆಕೆ ಅಥವಾ ತಾಪಮಾನದ ಪ್ರಮಾಣ ಇದನ್ನೆಲ್ಲಾ ಕೂಲಂಕಶವಾಗಿ ಅಧ್ಯಯನ ಮಾಡಿ ನೋಡಿದರೆ ದೇಶದಲ್ಲಿರುವ ಅರಣ್ಯ ಕ್ಷೇತ್ರವನ್ನು ಮತ್ತು ಕಾಡುಗಳಲ್ಲಿರುವ ಮರ-ಗಿಡಗಳ ಪ್ರಮಾಣವನ್ನು ಏರಿಸಲೇ ಬೇಕಾದ ಅನಿವಾರ್ಯತೆ ತಲೆದೋರಿದೆ. ಇದು ಅತೀ ಅವಶ್ಯಕ ಎಂಬದು ಎಲ್ಲರ ಅನಿಸಿಕೆ ಆಗಿರುತ್ತದೆ. ಇದನ್ನೆಲ್ಲಾ ಕಾರ್ಯರೂಪಕ್ಕೆ ತರಲು ಇರುವ ಉಪಾಯ ಏನೆಂದರೆ ‘ಕೃತಕ ಮಳೆ’ ಬೀಳಿಸಲು ಆಧುನಿಕ ತಂತ್ರಜ್ಞಾನವಾದ ಮೋಡ ಬಿತ್ತನೆಯ ಮಾದರಿಯಲ್ಲಿ ಹಲಸು, ಮಾವು, ನೇರಳೆ, ಜಂಬು ನೇರಳೆ, ಅತ್ತಿ, ಆಲದ ಮರ, ಅರಳಿ ಮರ ಹಾಗೂ ಇತರ ಮರ-ಗಿಡ, ಬಳ್ಳಿಗಳ ಹಣ್ಣು-ಕಾಯಿ ಬೀಜಗಳನ್ನು ಮುಂಗಾರು ಮಳೆ ಆರಂಭ ಆಗುವ ಸಮಯದಲ್ಲಿ ಏರೋಪ್ಲೇನ್ ಮತ್ತು ಹೆಲಿಕಾಪ್ಟರ್ ಮೂಲಕ ರಾಷ್ಟ್ರೀಯ ಉದ್ಯಾನ ವನಗಳಲ್ಲಿ ವನ್ಯಜೀವಿ ಧಾಮಗಳಲ್ಲಿ ಮತ್ತು ಘಟ್ಟ ಪ್ರದೇಶಗಳಲ್ಲಿ ಬಿತ್ತನೆ ಮಾಡಿದರೆ ಬೀಜಗಳು ಮೊಳಕೆ ಒಡೆದು ಗಿಡವಾಗಿ -ಮರವಾಗಿ ಬೆಳೆದು ನಿಲ್ಲುವದರಲ್ಲಿ ಯಾವ ಅನುಮಾನವೇ ಇಲ್ಲ. ಜೊತೆಗೆ ಈಗಿನ ಹೊಸ ತಳಿಯಾದ ಬಿದುರಿನ ಬುಡವನ್ನು ಅಥವಾ ಬೇರನ್ನು ಚೆಲ್ಲಿದರೆ ಶೀಘ್ರದಲ್ಲಿಯೇ ಬೆಳೆದು ಕಾಡಾಗಿ ಪರಿವರ್ತನೆ ಗೊಳ್ಳುವದರಲ್ಲಿ ಸಂಶಯವೇ ಇಲ್ಲ. ಇದರಿಂದ ವನ್ಯಜೀವಿಗಳಿಗೆ ಸುಂದರ ಆಶ್ರಯ ಮತ್ತು ಅವುಗಳಿಗೆ ಆಹಾರ ದೊರಕುವಂತಾಗುತ್ತದೆ. ಜೊತೆಗೆ ನೀರಿನ ತೇವಾಂಶವನ್ನು ಮತ್ತು ಮಣ್ಣಿನ ಫಲವತ್ತತೆಯನ್ನು ಕಾಪಾಡಿಕೊಳ್ಳಬಹುದಾಗಿದೆ. ಇದಕ್ಕಿಂತ ಮುಖ್ಯವಾಗಿ ವನ್ಯಜೀವಿ ವೈವಿಧ್ಯತೆಯನ್ನು ಮತ್ತು ಸಮತೋಲನವನ್ನು ಕಾಪಾಡಿಕೊಳ್ಳುವದರಲ್ಲಿ ಎರಡು ಮಾತಿಲ್ಲ.

ಭಾರತ ದೇಶ ಜಗತ್ತಿನಲ್ಲಿನ ಪಕ್ಷಿ ಪ್ರಭೇದಗಳಲ್ಲಿನ ಶೇ. 13 ಮೀನಿನ ಪ್ರಭೇದಗಳಲ್ಲಿ ಶೇ. 12, ಸಸ್ಯ ಪ್ರಭೇದಗಳಲ್ಲಿ ಶೇ. 10 ಮತ್ತು ಜಗತ್ತಿನಲ್ಲಿರುವ ಒಟ್ಟು ಜೀವಿ ಪ್ರಭೇದಗಳಲ್ಲಿ ಶೇ. 8 ರಷ್ಟು ಹೊಂದಿರುತ್ತದೆ. ಈ ಎಲ್ಲಾ ಕಾರಣಗಳಿಂದಾಗಿ ಭಾರತವನ್ನು ‘ಮಹಾ ಜೀವಿ ವೈವಿಧ್ಯತೆಯ ರಾಷ್ಟ್ರ’ಗಳಲ್ಲಿ ಒಂದು ಎಂದು ಪರಿಗಣಿಸಲಾಗಿದೆ. ಒಟ್ಟಿಗೆ ಇಂತಹ ಕಾಮಗಾರಿಗೆ ಫಲಪ್ರಧವಾಗಿ ಬೇರೆ ಇತರ ದೇಶಗಳಿಗೆ ನಮ್ಮ ದೇಶ ಮಾದರಿಯಾಗಬೇಕಾಗಿದೆ.

- ಚೆಟ್ರುಮಾಡ ಶಂಕ್ರು ಚಂಗಪ್ಪ, ನಲ್ಲೂರು.