ಸೋಮವಾರಪೇಟೆ, ಫೆ.13: ದೇಶವಾಸಿಗಳಿಗೆ ಅನ್ನನೀಡುವ ರೈತರು, ದೇಶವಾಸಿಗಳ ರಕ್ಷಣಾ ಕಾರ್ಯದಲ್ಲಿ ತಮ್ಮನ್ನು ತೊಡಗಿಸಿಕೊಂಡಿರುವ ಸೈನಿಕರೇ ದೇಶದ ನಿಜವಾದ ಮುತ್ತುಗಳು ಎಂದು ಜಾತ್ಯತೀತ ಜನತಾದಳದ ಯುವ ಮುಖಂಡ ಪ್ರಜ್ವಲ್ ರೇವಣ್ಣ ಅಭಿಪ್ರಾಯಿಸಿದರು.
ಇಲ್ಲಿನ ಒಕ್ಕಲಿಗರ ಯುವ ವೇದಿಕೆ ವತಿಯಿಂದ ಜಿಎಂಪಿ ಶಾಲಾ ಮೈದಾನದಲ್ಲಿ ಆಯೋಜಿಸಲಾಗಿರುವ ಎರಡನೇ ವರ್ಷದ ರಾಜ್ಯಮಟ್ಟದ ಹೊನಲುಬೆಳಕಿನ ಕಬಡ್ಡಿ ಪಂದ್ಯಾಟಕ್ಕೆ ಚಾಲನೆ ನೀಡಿ ಅವರು ಮಾತನಾಡಿದರು.
ಸೈನಿಕರು ಮತ್ತು ರೈತರನ್ನು ದೇಶ ಗೌರವಿಸಬೇಕು. ದೇಶದ ಉಳಿವಿಗೆ ಇವರ ಕಾರ್ಯ ವರ್ಣಿಸಲಸಾಧ್ಯ. ಕೊಡಗಿನ ಗಂಡೆದೆಗೆ ಬೇರೆಲ್ಲೂ ಸಾಟಿಯಿಲ್ಲ. ಸೈನ್ಯಕ್ಕೆ ಕೊಡಗಿನ ಕೊಡುಗೆ ಅವಿಸ್ಮರಣೀಯ ಎಂದು ಬಣ್ಣಿಸಿದರು.
ಒಕ್ಕಲಿಗ ಜನಾಂಗದವರು ಇನ್ನಷ್ಟು ಒಗ್ಗಟ್ಟಾಗಬೇಕು. ಈ ಭಾಗದಲ್ಲಿ ಸುಮಾರು 70 ಸಾವಿರ ಮಂದಿ ಒಕ್ಕಲಿಗರಿದ್ದರೂ ಒಗ್ಗಟ್ಟಿನ ಕೊರತೆ ಯಿದೆ. ರಾಜಕಾರಣದಲ್ಲಿ ಯಾವದೇ ಪಕ್ಷಕ್ಕೆ ಸೇರಿದ ಒಕ್ಕಲಿಗನಿದ್ದರೂ ಆತನನ್ನು ಸಮುದಾಯ ಬೆಂಬಲಿಸ ಬೇಕು. ರಾಜಕಾರಣದಲ್ಲಿ ಯುವ ಜನಾಂಗಕ್ಕೆ ಹೆಚ್ಚಿನ ಆದ್ಯತೆ ಸಿಗಬೇಕು. ಈ ಭಾಗದಿಂದ ಯುವಕರೇ ಶಾಸಕರಾಗುವ ಸಮಯ ಬರಬೇಕು ಎಂದು ಆಶಯ ವ್ಯಕ್ತಪಡಿಸಿದ ಅವರು, ಬೆಂಗಳೂರಿನ ನಿರ್ಮಾತೃ ಕೆಂಪೇಗೌಡ ಅವರ ಕಾರ್ಯ ಸಾರ್ವಕಾಲಿಕ ವಾಗಿದ್ದು, ಒಕ್ಕಲಿಗರೊಂದಿಗೆ ಉಪಜಾತಿಗಳನ್ನೂ ಬೆಳೆಸಿದ ಕೀರ್ತಿ ಕೆಂಪೇಗೌಡರಿಗೆ ಸಲ್ಲುತ್ತದೆ ಎಂದರು.
ಕಾರ್ಯಕ್ರಮ ಉದ್ಘಾಟಿಸಿ ಮಾತನಾಡಿದ ರಾಜ್ಯ ಒಕ್ಕಲಿಗ ಯುವ ಬ್ರಿಗೇಡ್‍ನ ಅಧ್ಯಕ್ಷ ಗಿರೀಶ್ ಮಲ್ಲಪ್ಪ ಮಾತನಾಡಿ, ಸಮುದಾಯದ ಒಗ್ಗಟ್ಟಿನಿಂದ ಮಾತ್ರ ಒಕ್ಕಲಿಗ ಜನಾಂಗ ಸಾಮಾಜಿಕವಾಗಿ ಮುಂದೆ ಬರಲು ಸಾಧ್ಯ ಎಂದು ಅಭಿಪ್ರಾಯಿಸಿದರು.
ವಿಧಾನ ಪರಿಷತ್ ಮಾಜೀ ಸದಸ್ಯ ಎಸ್.ಜಿ. ಮೇದಪ್ಪ ಮಾತನಾಡಿ, ಒಕ್ಕಲಿಗ ಸಮುದಾಯ ಇನ್ನಷ್ಟು ಆರ್ಥಿಕವಾಗಿ, ಸಾಮಾಜಿಕವಾಗಿ ಸದೃಢವಾಗಬೇಕಿದೆ ಎಂದರು. ಜಿ.ಪಂ. ಉಪಾಧ್ಯಕ್ಷೆ ಲೋಕೇಶ್ವರಿ ಗೋಪಾಲ್ ಮಾತನಾಡಿದರು. ಕಾರ್ಯಕ್ರಮದ ಅಧ್ಯಕ್ಷತೆಯನ್ನು ಒಕ್ಕಲಿಗ ಯುವ ವೇದಿಕೆ ಅಧ್ಯಕ್ಷ ಬಿ.ಜೆ. ದೀಪಕ್ ವಹಿಸಿದ್ದರು.
ವೇದಿಕೆಯಲ್ಲಿ ಜಿ.ಪಂ. ಸದಸ್ಯೆ ಪೂರ್ಣಿಮಾ ಗೋಪಾಲ್, ತಾ.ಪಂ. ಸದಸ್ಯೆ ತಂಗಮ್ಮ, ಯುವ ವೇದಿಕೆ ಉಪಾಧ್ಯಕ್ಷ ನತೀಶ್‍ಮಂದಣ್ಣ, ದಾನಿ ಅರುಣ್‍ಕುಮಾರ್, ನಗರ ಗೌಡ ಸಂಘದ ಅಧ್ಯಕ್ಷ ರಾಜು, ಪ್ರಮುಖರಾದ ಪುರುಷೋತ್ತಮ್, ಹಿರಿಯ ಆಟಗಾರ ಮಂಜೂರು ತಮ್ಮಣ್ಣಿ ಸೇರಿದಂತೆ ಇತರರು ಉಪಸ್ಥಿತರಿದ್ದರು.
ನಂತರ ಎಚ್‍ಎಎಲ್ ಮತ್ತು ವೈಎಫ್‍ಎ ಜರಗನಹಳ್ಳಿ ತಂಡಗಳ ನಡುವೆ ಉದ್ಘಾಟನಾ ಪಂದ್ಯ ನೆರವೇರಿತು. ವಿಜಯ ಬ್ಯಾಂಕ್, ಎಸ್‍ಬಿಎಂ, ಕಸ್ಟಮ್ಸ್ ಬೆಂಗಳೂರು, ಬೆಂಗಳೂರು ಅಚ್ಚು ಮತ್ತು ಗಾಲಿ ತಂಡಗಳು ಪ್ರಸಕ್ತ ಪಂದ್ಯಾವಳಿಯ ಬಲಿಷ್ಠ ತಂಡಗಳಾಗಿವೆ.
ಬೆಂಗಳೂರಿನ ಗೋಪಿನಾಥ್, ಜಮುನ ವೆಂಕಟೇಶ್, ಪ್ರೇಮ್‍ನಾಥ್, ರಾಮಚಂದ್ರಪ್ಪ, ಮುತ್ತುರಾಜ್, ರಾಜ, ರವಿ, ಅರುಣ್ ಕುಮಾರ್, ಕುಮಾರನ್ ಹಾಗು ಕೊಡಗಿನ ಸತೀಶ್, ಆನಂದ್, ಕೃಷ್ಣ, ಪ್ರಸಾದ್, ಕೃಷ್ಣಪ್ಪ ತೀರ್ಪುಗಾರ ರಾಗಿ ಕಾರ್ಯ ನಿರ್ವಹಿಸುತ್ತಿದ್ದಾರೆ.