ಮಡಿಕೇರಿ, ಫೆ. 13: ಕೇಂದ್ರ ಸರ್ಕಾರ ಪೊಳ್ಳು ಭರವಸೆಗಳನ್ನು ನೀಡುತ್ತಾ ಜನರ ದಾರಿ ತಪ್ಪಿಸುವ ಕೆಲಸ ಮಾಡುತ್ತಿದೆ ಎಂದು ಆರೋಪಿಸಿರುವ ಕರ್ನಾಟಕ ಪ್ರದೇಶ ಕಾಂಗ್ರೆಸ್ ಸಮಿತಿಯ ಕಾರ್ಯಾಧ್ಯಕ್ಷ ದಿನೇಶ್ ಗುಂಡೂರಾವ್, ಕೇಂದ್ರ ಸರ್ಕಾರಕ್ಕೆ ಜನರ ನೋವನ್ನು ಮನದಟ್ಟು ಮಾಡಿಸುವ ನಿಟ್ಟಿನಲ್ಲಿ ಮುಂದಿನ ದಿನಗಳಲ್ಲಿ ಕಾಂಗ್ರೆಸ್‍ನಿಂದ ಜನವೇದನ ಸಮಾವೇಶ ಹಮ್ಮಿಕೊಳ್ಳಲಾಗುತ್ತದೆ ಎಂದು ತಿಳಿಸಿದ್ದಾರೆ.

ನಗರದ ಸುದರ್ಶನ ಅತಿಥಿ ಗೃಹದಲ್ಲಿ ಸುದ್ದಿಗೋಷ್ಠಿಯಲ್ಲಿ ಅವರು ಮಾತನಾಡಿದರು. ಪ್ರಧಾನಿ ನರೇಂದ್ರ ಮೋದಿಯವರು ನೋಟು ರದ್ದು ಮಾಡುವ ಮೂಲಕ ಕಪ್ಪು ಹಣವನ್ನು ಹೊರತರುವದಾಗಿ ಹೇಳಿದ್ದರು. ಆದರೆ ಇದುವರೆಗೆ ಎಷ್ಟು ಕಪ್ಪು ಹಣ ಸಂಗ್ರಹವಾಗಿದೆ ಎಂಬ ಬಗ್ಗೆ ಆರ್ ಬಿಐ ಮಾಹಿತಿ ಬಹಿರಂಗಪಡಿಸಿಲ್ಲ. ಭಯೋತ್ಪಾದನೆಯನ್ನು ನಿಗ್ರಹಿಸುವದಾಗಿಯೂ ಮೋದಿ ಹೇಳಿಕೊಂಡಿದ್ದರು. ಆದರೆ ಭಯೋತ್ಪಾದನಾ ಕೃತ್ಯ ಇಂದಿಗೂ ಅಂತ್ಯ ಕಂಡಿಲ್ಲ ಎಂದು ದಿನೇಶ್ ಗುಂಡೂರಾವ್ ದೂರಿದರು.

ಅಧಿಕಾರಕ್ಕೆ ಬರುವ ವೇಳೆ ಹಾಗೂ ಬಂದ ನಂತರವೂ ಕೇಂದ್ರದ ಬಿಜೆಪಿ ಸರ್ಕಾರ ಜನರನ್ನು ಭರವಸೆಗಳನ್ನು ನೀಡಿ ಭ್ರಮಾಲೋಕಕ್ಕೆ ತಳ್ಳಿದೆ ಹೊರತಾಗಿ ಜನಪರ ಕಾಳಜಿ ತೋರುತ್ತಿಲ್ಲ ಎಂದು ಆರೋಪಿಸಿದರು. ದೇಶದಲ್ಲಿ ಆರ್ಥಿಕ ವ್ಯವಸ್ಥೆ ಕುಸಿದಿದ್ದು, ಉದ್ಯೋಗ ಸೃಷ್ಟಿಯೂ ಆಗುತ್ತಿಲ್ಲ. ನೋಟು ರದ್ದು ಮಾಡಿದ್ದರಿಂದ ಬ್ಯಾಂಕುಗಳಿಗೆ ಆದ ನಷ್ಟವನ್ನು ಭರಿಸಿಕೊಡುವಂತೆ ಒತ್ತಾಯಿಸಿ ಬ್ಯಾಂಕ್ ಸಿಬ್ಬಂದಿಗಳು ಕೂಡ ಮುಷ್ಕರಕ್ಕೆ ತಯಾರಾಗುತ್ತಿದ್ದಾರೆ ಎಂದ ದಿನೇಶ್ ಗುಂಡೂರಾವ್ ಇದೇನಾ ಕೇಂದ್ರ ಸರ್ಕಾರದ ಸಾಧನೆ? ಎಂದು ಪ್ರಶ್ನಿಸಿದರು. ಜನವೇದನ ಸಮಾವೇಶದಲ್ಲಿ ಕಾಂಗ್ರೆಸ್‍ನ ಸಾಧನೆಗಳನ್ನು ಜನರ ಮುಂದಿಡಲಾಗುವದು ಎಂದು ಹೇಳಿದರು.

ಗೋಷ್ಠಿಯಲ್ಲಿ ಅರಣ್ಯ ಅಭಿವೃದ್ಧಿ ನಿಗಮದ ಉಪಾಧ್ಯಕ್ಷೆ ಪದ್ಮಿನಿ ಪೊನ್ನಪ್ಪ, ಕಾಂಗ್ರೆಸ್ ಪ್ರಬಾರ ಅಧ್ಯಕ್ಷ ಟಿ.ಪಿ. ರಮೇಶ್, ಮಾಜಿ ಸಂಸದ ನಾರಾಯಣ ಸ್ವಾಮಿ, ಮಾಜಿ ಎಂಎಲ್‍ಸಿ ಅರುಣ್ ಮಾಚಯ್ಯ ಮತ್ತಿತರರು ಉಪಸ್ಥಿತರಿದ್ದರು.