ಸೋಮವಾರಪೇಟೆ, ಫೆ. 13: ಇಲ್ಲಿನ ಒಕ್ಕಲಿಗರ ಯುವ ವೇದಿಕೆ ವತಿಯಿಂದ ಇಲ್ಲಿನ ಜಿಎಂಪಿ ಶಾಲಾ ಮೈದಾನದಲ್ಲಿ ಆಯೋಜಿಸಲಾಗಿರುವ ಎರಡನೇ ವರ್ಷದ ಹೊನಲು ಬೆಳಕಿನ ಕಬಡ್ಡಿ ಪಂದ್ಯಾಟಕ್ಕೆ ಅದ್ದೂರಿ ಚಾಲನೆ ನೀಡಲಾಯಿತು.

ಒಕ್ಕಲಿಗರ ಸಂಸ್ಕøತಿಯನ್ನು ಬಿಂಬಿಸುವ ಸುಗ್ಗಿ ಕುಣಿತದೊಂದಿಗೆ ನೂರಾರು ಯುವಕರು ನಗರದಲ್ಲಿ ಬೈಕ್ ಜಾಥಾ ನಡೆಸಿ, ಕಬಡ್ಡಿ ಪಂದ್ಯಾಟದ ಬಗ್ಗೆ ಸಾರ್ವಜನಿಕರಲ್ಲಿ ಪ್ರಚಾರ ಮಾಡಿದರು.

ಇಲ್ಲಿನ ವಿಶ್ವಮಾನವ ಕುವೆಂಪು ವಿದ್ಯಾಸಂಸ್ಥೆಯ ಆವರಣದಿಂದ ನೂರಾರು ಮಂದಿ ನಗರದ ಪ್ರಮುಖ ರಸ್ತೆಗಳಲ್ಲಿ ಮೆರವಣಿಗೆ ನಡೆಸಿದರು. ಒಕ್ಕಲಿಗ ಸಮುದಾಯದ ಮುಖಂಡರು ಜಾಥಾದಲ್ಲಿ ಭಾಗವಹಿಸಿದ್ದರು.

ನಗರದ ಖಾಸಗಿ ಬಸ್ ನಿಲ್ದಾಣದಲ್ಲಿ ಸುಗ್ಗಿಕುಣಿತದ ಪ್ರದರ್ಶನ ನಡೆದು, ಪಂದ್ಯಾಟ ನಡೆಯುವ ಜಿಎಂಪಿ ಶಾಲಾ ಮೈದಾನದಲ್ಲಿ ಮೆರವಣಿಗೆ ಸಮಾಪನಗೊಂಡಿತು. ಇಂದಿನಿಂದ ಎರಡು ದಿನಗಳ ಕಾಲ ನಡೆಯುವ ಕಬಡ್ಡಿ ಪಂದ್ಯಾಟದಲ್ಲಿ ಕರ್ನಾಟಕ ರಾಜ್ಯ ಕಬಡ್ಡಿ ಅಮೆಚೂರ್ ಅಸೋಸಿಯೇಷನ್‍ನಡಿ ನೋಂದಾಯಿಸಲ್ಪಟ್ಟ 18 ತಂಡಗಳು ಹಾಗೂ ಕೊಡಗಿನ 6 ತಂಡಗಳು ಪಾಲ್ಗೊಂಡಿವೆ. ಪಂದ್ಯಾಟದ ಪ್ರಥಮ ಬಹುಮಾನವಾಗಿ ರೂ. 1ಲಕ್ಷ ನಗದು ಹಾಗೂ ಆಕರ್ಷಕ ಟ್ರೋಫಿ, ದ್ವಿತೀಯ ಬಹುಮಾನವಾಗಿ 60 ಸಾವಿರ ನಗದು ಮತ್ತು ಟ್ರೋಪಿ, 3 ಮತ್ತು 4ನೇ ಬಹುಮಾನವಾಗಿ 30 ಸಾವಿರ ನಗದು ಮತ್ತು ಟ್ರೋಫಿ ಸೇರಿದಂತೆ ವೈಯುಕ್ತಿಯ ವಿಭಾಗದಲ್ಲೂ ಪ್ರಶಸ್ತಿಯನ್ನು ನೀಡಲಾಗುತ್ತಿದೆ.