ವೀರಾಜಪೇಟೆ, ಫೆ:12 ಕಳೆದ ಏಳು ದಿನಗಳಿಂದ ವೀರಾಜಪೇಟೆ ಬಳಿಯ ಚೆಂಬೆಬೆಳ್ಳೂರು, ಪುದುಕೋಟೆ, ಕೋಟೆಕೊಪ್ಪಲು ಹಾಗೂ ಬೆಳ್ಳರಿಮಾಡು ಸೇರಿದಂತೆ ವಿವಿಧಡೆಗಳಿಂದ ಸುಮಾರು 5 ಗಬ್ಬದ ಹಸುಗಳು, ಜೊತೆಗೆ 3 ಜಾತೀಯ ಹಸುಗಳು, ಎರಡು ಕರುಗಳನ್ನು ಅಪಹರಿಸಲಾಗಿದೆ ಎಂದು ಪದುಕೋಟೆಯ ವಿ.ಎಲ್.ಸುರೇಶ್ ಇಲ್ಲಿನ ಗ್ರಾಮಾಂತರ ಪೊಲೀಸರಿಗೆ ದೂರು ನೀಡಿದ ಮೇರೆ ಪೊಲೀಸರು ಪ್ರಕರಣ ದಾಖಲಿಸಿದ್ದಾರೆ.

ಗ್ರಾಮದಲ್ಲಿ ಮೇಯಲು ಬಿಟ್ಟ ಹಸುಗಳನ್ನು ಹೊಂಚು ಹಾಕಿ ಅಪಹರಿಸುತ್ತಿದ್ದು ನೆರೆಯ ಅಂತರರಾಜ್ಯ ಜಾಲದಿಂದ ಈ ಅಪಹರಣ ನಡೆಯುತ್ತಿರುವ ಕುರಿತು ಗ್ರಾಮಸ್ಥರು ಶಂಕಿಸಿ ಪೊಲೀಸರಿಗೆ ತಿಳಿಸಿದ್ದಾರೆ.

ಕೋಟೆಕೊಪ್ಪಲಿನ ವಿ.ಜಿ.ಗಿರೀಶ್, ವಿ.ಜಿ.ಕುಮಾರ್, ವಿ.ಬಿ.ದರ್ಶನ್, ಸುರೇಶ್, ಬೆಳ್ಳರಿಮಾಡಿನ ಸುಬ್ಬಯ್ಯ ಎಂಬುವರಿಗೆ ಸೇರಿದ ಸುಮಾರು ಎರಡು ಲಕ್ಷ ಹತ್ತು ಸಾವಿರ ಮೌಲ್ಯದ ಹಸುಗಳನ್ನು ಅಪಹರಿಸಲಾಗಿದೆ. ಈ ಐದು ಮಂದಿ ಅಪಹರಣಗೊಂಡಿರುವ ಹಸುಗಳ ಚಹರೆ ಪಟ್ಟಿಯನ್ನು ಪೊಲೀಸರಿಗೆ ನೀಡಿದ್ದು ಪೊಲೀಸರು ಇದಕ್ಕಾಗಿ ವಿಶೇಷ ತಂಡ ರಚಿಸಿ ಅಪಹರಣಕಾರರ ಜಾಲ ಬೇಧಿಸುವದಾಗಿ ಗ್ರಾಮಸ್ಥರಿಗೆ ಭರವಸೆ ನೀಡಿದ್ದಾರೆ.

ಕೊಡಗು ಕೇರಳದ ಗಡಿ ಭಾಗವಾದ ಮಾಕುಟ್ಟದ ಸುತ್ತ ಮುತ್ತಲ ಪ್ರದೇಶದಲ್ಲಿಯೂ ದನಗಳ ಅಪಹರಣಕಾರರ ಜಾಲ ಅಡಗಿರಬಹುದು. ಇಲ್ಲಿಯೂ ಪೊಲೀಸರು ಕೂಲಂಕುಷ ತನಿಖೆ ನಡೆಸಿದರೆ ಅಪಹರಣಕಾರರನ್ನು ಪತ್ತೆ ಹಚ್ಚಲು ಸಾಧ್ಯವಾಗಬಹುದೆಂದು ವಿ.ಎಲ್ ಸುರೇಶ್ ಪೊಲೀಸ್ ಅಧಿಕಾರಿಗಳನ್ನು ಆಗ್ರಹಿಸಿದ್ದಾರೆ.

ಸ್ಥಾಯಿ ಸಮಿತಿ ಅಧ್ಯಕ್ಷರ ಆತಂಕ

ಚೆಂಬೆಬೆಳ್ಳೂರು ಗ್ರಾಮದ ವ್ಯಾಪ್ತಿಯಲ್ಲಿ ಈಗಾಗಲೇ 7ದಿನಗಳ ಅವಧಿಯಲ್ಲಿ ಬೆಲೆ ಬಾಳುವ ಹಸುಗಳನ್ನು ಅಪಹರಿಸಿರುವದರಿಂದ ಗ್ರಾಮಸ್ಥರು ಆತಂಕಕ್ಕೀಡಾಗಿದ್ದಾರೆ. ಪೊಲೀಸರು ಆರೋಪಿಗಳನ್ನು ಪತ್ತೆ ಹಚ್ಚಿ ತನಿಖೆಗೊಳಪಡಿಸಬೇಕು ಎಂದು ಜಿಲ್ಲಾ ಪಂಚಾಯಿತಿಯ ಸ್ಥಾಯಿ ಸಮಿತಿ ಅಧ್ಯಕ್ಷ ಶಶಿ ಸುಬ್ರಮಣಿ ಒತ್ತಾಯಿಸಿದ್ದಾರೆ.