ಸುಂಟಿಕೊಪ್ಪ, ಫೆ.12: ಇಂದು ಗೌಡ ಜನಾಂಗದ ಯುವಕ ಯುವತಿಯರು ಉನ್ನತ ವಿದ್ಯಾಭ್ಯಾಸ ಪಡೆದು ಒಳ್ಳೆಯ ಉದ್ಯೋಗದಲ್ಲಿದ್ದಾರೆ. ವರದಕ್ಷಿಣೆಗೆ ಆಸೆಪಡೆಯದೆ ತನ್ನ ಬಾಳ ಸಂಗಾತಿಯನ್ನು ಆಯ್ಕೆ ಮಾಡಿಕೊಳ್ಳಬೇಕು ಎಂದು ಸಾಹಿತಿ ಹಾಗೂ ಮದೆ ಪ್ರೌಢಶಾಲೆಯ ಮುಖ್ಯೋಪಾದ್ಯಾಯ ಬಿ.ಆರ್. ಜೋಯಪ್ಪ ಹೇಳಿದರು.
ಕೊಡಗು ಗೌಡ ನಿವೃತ್ತ ನೌಕರರ ಸಂಘದ ವತಿಯಿಂದ ಮಡಿಕೇರಿಯ ಕೊಡಗು ಗೌಡ ವಿದ್ಯಾಸಂಘದಲ್ಲಿ ಆಯೋಜಿಸಲಾಗಿದ್ದ ಗೌಡ ವಧು ವರರ ಸಂದರ್ಶನ ಕಾರ್ಯಕ್ರಮವನ್ನು ಉದ್ಘಾಟಿಸಿ ಮಾತನಾಡಿದ ಅವರು ಗೌಡ ಜನಾಂಗದ ಸಂಪ್ರದಾಯ ಆಚಾರ ವಿಚಾರದಂತೆ ಮದುವೆ ಕಾರ್ಯಕ್ರಮ ನಡೆಯಬೇಕು. ಆ ನಿಟ್ಟಿನಲ್ಲಿ ನಮ್ಮ ಸಂಸ್ಕøತಿಯನ್ನು ಬೆಳೆಸಬೇಕು.
ಮುಖ್ಯ ಅತಿಥಿಗಳಾಗಿದ್ದ ಕೊಡಗು ಗೌಡ ವಿದ್ಯಾಸಂಘದ ಅಧ್ಯಕ್ಷ ಹೊಸೂರು ರಮೇಶ ಜೋಯಪ್ಪ ಮಾತನಾಡಿ ಹುಟ್ಟು ಆಕಸ್ಮಿಕ ಸಾವು ನಿಶ್ಚಿತ ಈ ಮಧ್ಯೆ ಜೀವನ ನಡೆಸುವಾಗ ಒಳಿತನ್ನೇ ಬಯಸಬೇಕು ಮದುವೆ ಪ್ರತಿಯೊಬ್ಬ ಮನುಷ್ಯನ ಜೀವನದ ಮಹತ್ವದ ಘಟ್ಟ ಕೊನೆವರೆಗೂ ಗಂಡ ಹೆಂಡತಿ ಅನ್ಯೋನ್ಯತೆಯಿಂದ ಸಹಬಾಳ್ವೆ ನಡೆಸಬೇಕು ಎಂದರು.
ಅಧ್ಯಕ್ಷತೆ ವಹಿಸಿದ್ದ ಕೊಡಗು ಗೌಡ ನಿವೃತ್ತ ನೌಕರರ ಸಂಘದ ಅಧ್ಯಕ್ಷ ಕೋರನ ವಿಶ್ವನಾಥ ಪ್ರಾಸ್ತಾವಿಕ ನುಡಿಯಾಡಿ ಸ್ವಾಗತಿಸಿದರು.
ವೇದಿಕೆಯಲ್ಲಿ ಕೊಡಗು ಗೌಡ ನಿವೃತ್ತ ನೌಕರರ ಸಂಘದ ಉಪಾಧ್ಯಕ್ಷ ಕುದುಪಜೆ ಬೋಜಪ್ಪ, ಕಾರ್ಯದರ್ಶಿ ಮೇತಡ್ಕ ದೇವಕ್ಕಿ, ಖಜಾಂಜಿ ಪೊನ್ನಚನ ಸೋಮಣ್ಣ, ಕೊಡಗು ಗೌಡ ಒಕ್ಕೂಟದ ಅಧ್ಯಕ್ಷ ದಂಬೆಕೋಡಿ ಆನಂದ ಉಪನ್ಯಾಸಕ ಪಟ್ಟಡ ಶಿವಕುಮಾರ್, ಉಪಸ್ಥಿತರಿದ್ದರು.
ಮೊದಲಿಗೆ ಕುದುಪಜೆ ಶಾರಾದ ಪ್ರಾರ್ಥಿಸಿ, ಕಾರ್ಯಕ್ರಮವನ್ನು ಪಟ್ಟಡ ಶಿವಕುಮಾರ್ ನಿರೂಪಿಸಿ, ಕಾರ್ಯದರ್ಶಿ ಮೇತಡ್ಕ ದೇವಕ್ಕಿ ವಂದಿಸಿದರು.