ನವದೆಹಲಿ, ಫೆ. 14: ಅಕ್ರಮ ಆಸ್ತಿಗಳಿಕೆ ಆರೋಪದಡಿಯಲ್ಲಿ ಎಐಎಡಿಎಂಕೆ ಪ್ರಧಾನ ಕಾರ್ಯದರ್ಶಿ ಶಶಿಕಲಾ ನಟರಾಜನ್ ಅವರನ್ನು ‘ ದೋಷಿ ‘ (02) ಎಂದು ತೀರ್ಮಾನಿಸಿರುವ ಸುಪ್ರೀಂ ಕೋರ್ಟ್ ಅವರಿಗೆ ನಾಲ್ಕು ವರ್ಷಗಳ ಜೈಲು ಶಿಕ್ಷೆಯ ತೀರ್ಪನ್ನು ಎತ್ತಿ ಹಿಡಿದಿದೆ. ಜೊತೆಗೆ ಈ ಕೂಡಲೇ ನ್ಯಾಯಾಂಗ ಬಂಧನಕ್ಕೊಳ ಗಾಗುವಂತೆ ಸುಪ್ರೀಂ ಆದೇಶ ನೀಡುವ ಮೂಲಕ ಮಹತ್ವದ ತೀರ್ಪು ಪ್ರಕಟಿಸಿದೆ. ಇದೇ ಪ್ರಕರಣಕ್ಕೆ ಸಂಬಂಧಿಸಿದ ವಿಚಾರದಲ್ಲಿ ದಿವಂಗತ ಮುಖ್ಯಮಂತ್ರಿ ಜಯಲಲಿತಾ ಅವರನ್ನು ದೋಷಿ ಎಂದು ಬೆಂಗಳೂರಿನಲ್ಲಿರುವ ಸಿಬಿಐ ವಿಶೇಷ ನ್ಯಾಯಾಲಯ ತೀರ್ಪು ನೀಡಿತ್ತು. ಸೆಪ್ಟಂಬರ್ 27, 2014ರಂದು ಜಯಲಲಿತಾ ಪರಪ್ಪನ ಅಗ್ರಹಾರ ಜೈಲಿಗೆ ಸೇರಿದ್ದರು. 21 ದಿನಗಳ ಸೆರೆವಾಸದ ನಂತರ ಜಯಾ ಬಿಡುಗಡೆಗೊಂಡಿದ್ದರು.

ಮೂರೂವರೆ ವರ್ಷ ಶಿಕ್ಷೆ : ಶಶಿಕಲಾ ಅವರು ಈಗಾಗಲೇ ಈ ಪ್ರಕರಣದಲ್ಲಿ 2014ರ ಅವಧಿಯಲ್ಲಿ ಪರಪ್ಪನ ಅಗ್ರಹಾರದ ಜೈಲಿನಲ್ಲಿ ಆರು ತಿಂಗಳುಗಳ ಕಾಲ ಜೈಲುವಾಸ ಅನುಭವಿಸಿದ್ದರಿಂದ ಈಗ ಮೂರೂವರೆ ವರ್ಷ ಜೈಲು ಶಿಕ್ಷೆ ಅನುಭವಿಸಬೇಕಿದೆ. ಇತರ ಆರೋಪಿಗಳ ಜತೆ ಸೇರಿ ತಲಾ ರೂ. 10 ಕೋಟಿ ದಂಡ ತೆರಬೇಕಿದೆ. ಅಲ್ಲದೆ, ಈ ಹಿಂದೆ 2014ರ ಏಪ್ರಿಲ್ ತಿಂಗಳಿನಲ್ಲಿ ವಿಶೇಷ ನ್ಯಾಯಾಲಯದ ನ್ಯಾಯಾಧೀಶರಾಗಿದ್ದ ನ್ಯಾ. ಮೈಕಲ್ ಡಿ ಕುನ್ಹಾ ಅವರ ಮುಂದೆ ಜಯಲಲಿತಾ ಸೇರಿದಂತೆ ನಾಲ್ವರು ಆರೋಪಿಗಳು ಹಾಜರಾಗಿದ್ದರು. ನಂತರ ಎಲ್ಲರಿಗೂ ಸೆಪ್ಟೆಂಬರ್ ತಿಂಗಳಿನಲ್ಲಿ ನಾಲ್ಕು ವರ್ಷ ಜೈಲು ಶಿಕ್ಷೆ ಪ್ರಕಟಿಸಲಾಗಿತ್ತು. ಈಗ ಮತ್ತೊಮ್ಮೆ ವಿಶೇಷ ನ್ಯಾಯಾಲಯದ ಜಡ್ಜ್ ಮುಂದೆ

(ಮೊದಲ ಪುಟದಿಂದ) ಹಾಜರಾಗುತ್ತಿದ್ದು, ಮತ್ತೊಮ್ಮೆ ಪರಪ್ಪನ ಅಗ್ರಹಾರ ಸೇರಬೇಕಿದೆ.

2014ರ ನಂತರದ ಘಟನಾವಳಿಯಲ್ಲಿ ಜಯಲಲಿತಾ ಜಾಮೀನು ಪಡೆದರು, ಮತ್ತೆ ಸಿಎಂ ಆದರು, ಕಳೆದ ವರ್ಷ ಅನಾರೋಗ್ಯ ಪೀಡಿತರಾಗಿ ಜಯಲಲಿತಾ ಅಸುನೀಗಿದರು. ಶಶಿಕಲಾ ಅವರು ಸಿಎಂ ಆಗಲು ಆಸೆ ಪಟ್ಟಿದ್ದರು. ಆದರೆ ಸುಪ್ರೀಂಕೋರ್ಟಿನಿಂದ ಬಂದ ತೀರ್ಪು ರಾಜಕೀಯ ಭವಿಷ್ಯಕ್ಕೆ ಮಾರಕವಾಗಿ ಪರಿಣಮಿಸಿದೆ.

ಜೈಲು ಶಿಕ್ಷೆಗೆ ಒಳಗಾಗಿರುವ ಎಐಎಡಿಎಂಕೆ ಅಧಿನಾಯಕಿ ಶಶಿಕಲಾ ಅವರು ಬೆಂಗಳೂರಿನ ಸೆಷನ್ಸ್ ನ್ಯಾಯಾಲಯದ ನ್ಯಾಯಾಧೀಶ ಅಶ್ವಥನಾರಾಯಣ ಅವರ ಮುಂದೆ ಶರಣಾಗಲು ಬರಬೇಕಿದೆ.

ಬೆಂಗಳೂರಿನ ವಿಶೇಷ ನ್ಯಾಯಾಲಯದ ನ್ಯಾಯಾಧೀಶ ನ್ಯಾ. ಅಶ್ವತ್ಥ್ ನಾರಾಯಣ್ ಮುಂದೆ ಶರಣಾದ ಬಳಿಕ ಎಲ್ಲರನ್ನು ಪರಪ್ಪನ ಅಗ್ರಹಾರ ಜೈಲಿಗೆ ಕಳುಹಿಸಲಾಗುವದು.

ಕಾಲಾವಕಾಶ ಕೋರಿಕೆ: ಎಐಎಡಿಎಂಕೆ ಅಧಿನಾಯಕಿ ಶಶಿಕಲಾಗೆ ಜೈಲು ಶಿಕ್ಷೆ ವಿಧಿಸಿದ್ದರೂ, ಅವರು ವಿಶೇಷ ನ್ಯಾಯಾಲಯದ ಮುಂದೆ ಶರಣಾಗತಿ ವಿಳಂಬ ವಾಗಲಿದೆ. ಆನಾರೋಗ್ಯದ ಕಾರಣ ನಾಲ್ಕು ವಾರಗಳ ಕಾಲ ಕಾಲಾವಕಾಶ ಕೋರಿ ಸುಪ್ರೀಂಕೋರ್ಟಿನಲ್ಲಿ ಮೇಲ್ಮನವಿ ಅರ್ಜಿಯನ್ನು ಶಶಿಕಲಾ ಪರ ವಕೀಲರು ಸಲ್ಲಿಸಿದ್ದಾರೆ.

ಕಸರತ್ತು : ಜಯಲಲಿತಾ ನಿಧನಾನಂತರ ತಮಿಳುನಾಡಿನಲ್ಲಿಸಸ ಸರಕಾರ ರಚನೆಗೆ ತೀವ್ರ ಕಸರತ್ತು ಆರಂಭಗೊಂಡಿದೆ. ಶಶಿಕಲಾ ಹಾಗೂ ಪನ್ನೀರ್ ಸೆಲ್ವಂ ನಡುವೆ ತೀವ್ರ ಪೈಪೋಟಿ ನಡೆಯುತ್ತಿದೆ. ಇದೀಗ ಶಶಿಕಲಾಗೆ ಜೈಲು ಶಿಕ್ಷೆಯೊಂದಿಗೆ ಚುನಾವಣೆಯಲ್ಲಿ ಸ್ಪರ್ಧಿಸದಂತೆ ತೀರ್ಪು ಹೊರ ಬಿದ್ದಿರುವದರಿಂದ ಪಕ್ಷದ ನೂತನ ನಾಯಕ ಪಳನಿಸ್ವಾಮಿ ಅವರು ಮುಖ್ಯಮಂತ್ರಿ ಪಟ್ಟಕ್ಕೇರುವ ಹರಸಾಹಸ ಮಾಡುತ್ತಿದ್ದಾರೆ. ಪನ್ನೀರ್ ಸೆಲ್ವಂ ಕೂಡ ರೇಸ್‍ನಲ್ಲಿದ್ದಾರೆ. ಪನ್ನೀರ್ ಸೆಲ್ವಂ ಅವರ ಬೆಂಬಲಕ್ಕಿದ್ದ ಶಾಸಕ-ಸಂಸದರನ್ನು ಶಶಿಕಲಾ ಪಕ್ಷದಿಂದ ಉಚ್ಛಾಟನೆ ಮಾಡಿದ್ದಾರೆ. ಕ್ಷಣ-ಕ್ಷಣಕ್ಕೆ ಕುತೂಹಲ ಪಡೆದುಕೊಳ್ಳುತ್ತಿರುವ ತಮಿಳುನಾಡಿನಲ್ಲಿ ಇಬ್ಬರು ನಾಯಕರು ಬಲಾಬಲ ಪ್ರದರ್ಶನಕ್ಕೆ ಮುಂದಾಗಿದ್ದಾರೆ.

ಇತ್ತ ಪರಿಸ್ಥಿತಿಯನ್ನು ಅವ ಲೋಕಿಸಿರುವ ಅಟಾರ್ನಿ ಜನರಲ್ ಮುಕುಲ್ ಹೊಹ್ಟಗಿ ಅವರು ವಿಶ್ವಾಸ ಮತ ಸಾಬೀತುಪಡಿಸಲು ಅವಕಾಶ ನೀಡುವಂತೆ ರಾಜ್ಯಪಾಲ ವಿದ್ಯಾ ಸಾಗರ್ ರಾವ್ ಅವರಿಗೆ ಸೂಚಿಸಿರು ವದು ಮತ್ತಷ್ಟು ಕುತೂಹಲ ಕೆರಳಿಸಿದೆ.

ರಾಜ್ಯಪಾಲರ ಭೇಟಿ : ಎಡಪ್ಪಾಡಿ ಪಳನಿಸ್ವಾಮಿ ಅವರು ತಮಿಳುನಾಡು ಉಸ್ತುವಾರಿ ರಾಜ್ಯಪಾಲ ಸಿ.ಎಚ್. ವಿದ್ಯಾಸಾಗರ್ ರಾವ್ ಅವರನ್ನು ಭೇಟಿ ಮಾಡಿ, ಸರ್ಕಾರ ರಚನೆಯ ಹಕ್ಕು ಮಂಡಿಸಿದ್ದಾರೆ.

ಇಂದು ಸಂಜೆ ತಮ್ಮ ಕೆಲವು ಬೆಂಬಲಿಗ ಶಾಸಕರೊಂದಿಗೆ ರಾಜ್ಯಪಾಲರನ್ನು ಭೇಟಿ ಮಾಡಿದ ಪಳನಿಸ್ವಾಮಿ, ತಮಗೆ 112 ಶಾಸಕರ ಬೆಂಬಲವಿರುವ ಪಟ್ಟಿಯನ್ನು ನೀಡಿ ನೂತನ ಸರ್ಕಾರ ರಚನೆಗೆ ಅವಕಾಶ ನೀಡಬೇಕು ಎಂದು ಮನವಿ ಮಾಡಿದರು. ಆದರೆ ರಾಜ್ಯಪಾಲರು ಅವರಿಗೆ ಯಾವದೇ ಭರವಸೆ ನೀಡಿಲ್ಲ ಎಂದು ರಾಜಭವನ ಮೂಲಗಳು ತಿಳಿಸಿವೆ. ಮತ್ತೊಂದೆಡೆ ಶಶಿಕಲಾ ತಮ್ಮ ಬೆಂಬಲಿಗ ಶಾಸಕರೊಂದಿಗೆ ಕೋವತ್ತೂರಿನ ಗೋಲ್ಡನ್ ಬೇ ರೆಸಾರ್ಟ್‍ನಲ್ಲೇ ವಾಸ್ತವ್ಯ ಹೂಡಿದ್ದು,ಮುನ್ನೆಚ್ಚರಿಕೆ ಕ್ರಮವಾಗಿ 10 ಕಿಲೋ ಮೀಟರ್ ವ್ಯಾಪ್ತಿವರೆಗೆ 144 ಸೆಕ್ಷನ್ ಜಾರಿ ಮಾಡಲಾಗಿದೆ. ಪೊಲೀಸ್ ಬಿಗಿಬಂದೋಬಸ್ತ್ ಕೈಗೊಳ್ಳಲಾಗಿದೆ.