ಸೋಮವಾರಪೇಟೆ, ಫೆ.14: ಕಾಂಗ್ರೆಸ್ ಪಾಲಿಗೆ ಬೆಂಕಿಯುಂಡೆ ಯಂತಾಗಿರುವ ಕುಶಾಲನಗರ ಕೃಷಿ ಉತ್ಪನ್ನ ಮಾರುಕಟ್ಟೆ ಸಮಿತಿಯ ಅಧ್ಯಕ್ಷ ಸ್ಥಾನಕ್ಕೆ ನಡೆಸಿದ ರಾಜಕೀಯ ತಂತ್ರ, ಇದೀಗ ಕಾಂಗ್ರೆಸ್ ಹೈಕಮಾಂಡ್ನ ಅಂಗಳಕ್ಕೆ ತಲುಪಿದೆ. ಬಿಜೆಪಿಯೊಂದಿಗೆ ಮೈತ್ರಿ ಮಾಡಿಕೊಂಡು ಅಧಿಕಾರ ಹಿಡಿಯಲಾಗಿದೆ ಎಂಬ ಆರೋಪಗಳು ವಿರೋಧ ಪಕ್ಷ ಜೆಡಿಎಸ್ಗಿಂತ ಸ್ವಪಕ್ಷೀಯರಿಂದಲೇ ಹೆಚ್ಚಾಗಿ ಕೇಳಿಬರುತ್ತಿದ್ದು, ಕಾಂಗ್ರೆಸ್ ಮುಂಚೂಣಿ ಘಟಕದ ನಾಯಕರಿಗೆ ಕೆಲವರು ಒಳ ಏಟು ನೀಡಲು ಮುಂದಾಗಿದ್ದಾರೆ.ಪರಿಣಾಮವಾಗಿ ರಾಜ್ಯ ಕಾಂಗ್ರೆಸ್ ಹೈಕಮಾಂಡ್ ಸ್ಥಳೀಯ ಮುಖಂಡರಿಗೆ ಬುಲಾವ್ ನೀಡಿದ್ದು, ಪಕ್ಷದ ಮುಂಚೂಣಿ ಘಟಕಗಳ ನಾಯಕರು ಬೆಂಗಳೂರಿನಲ್ಲಿ ಬೀಡುಬಿಟ್ಟಿದ್ದಾರೆ. ಸೋಮವಾರಪೇಟೆ ಬ್ಲಾಕ್ ಕಾಂಗ್ರೆಸ್ ಅಧ್ಯಕ್ಷ ಕೆ.ಎಂ. ಲೋಕೇಶ್ ಅವರನ್ನು ರಾಜಕೀಯವಾಗಿ ಹಣಿಯಲು ಸ್ವಪಕ್ಷೀಯರೇ ತೆರೆಮರೆಯಲ್ಲಿ ವೇದಿಕೆ ಸಿದ್ಧಪಡಿಸಿರುವದು ಸ್ವತಃ ಲೋಕೇಶ್ ಅವರ ಅನುಭವಕ್ಕೆ ಬಂದಿದೆ.
ಈ ಮಧ್ಯೆ ಕಾಂಗ್ರೆಸ್ನಿಂದ ಗೆದ್ದು ಅಧಿಕಾರ ಅನುಭವಿಸಿ ನಂತರದ ರಾಜಕೀಯ ಬೆಳವಣಿಗೆಯಲ್ಲಿ ಜೆಡಿಎಸ್ ಸೇರ್ಪಡೆಗೊಂಡ ಬಿ.ಎ. ಜೀವಿಜಯ ಅವರನ್ನು ಈ ಬಾರಿಯ ವಿಧಾನ ಸಭಾ ಚುನಾವಣೆಗೆ ಮತ್ತೆ ಕಾಂಗ್ರೆಸ್ಗೆ ಕರೆತರಲು ಒಂದು ಗುಂಪು ಶತಾಯ ಗತಾಯ ಪ್ರಯತ್ನಿಸುತ್ತಿದ್ದು, ಇದಕ್ಕಾಗಿಯೇ ಆರ್ಎಂಸಿ ಅಧ್ಯಕ್ಷರ ಆಯ್ಕೆಯ ಕುಂಟುನೆಪ ಇಟ್ಟುಕೊಂಡು ಲೋಕೇಶ್ ಅವರನ್ನು ಪಕ್ಷದಿಂದ ಅಮಾನತು ಮಾಡಿಸಲು (ಮೊದಲ ಪುಟದಿಂದ) ಇನ್ನಿಲ್ಲದ ಪ್ರಯತ್ನ ನಡೆಸುತ್ತಿರುವದು ಪ್ರಸಕ್ತ ರಾಜಕೀಯ ವಿದ್ಯಮಾನವಾಗಿದೆ.
ಸದ್ಯ ಕೆ.ಎಂ. ಲೋಕೇಶ್ ಸೇರಿದಂತೆ ಪಕ್ಷದ ಇತರ ಮುಖಂಡರು ಬೆಂಗಳೂರಿನಲ್ಲಿ ಬೀಡುಬಿಟ್ಟಿದ್ದು, ಆರ್ಎಂಸಿ ಅಧ್ಯಕ್ಷರ ಆಯ್ಕೆ ಸಂದರ್ಭ ನಡೆದ ರಾಜಕೀಯ ತಂತ್ರಗಾರಿಕೆಗಳ ಬಗ್ಗೆ ಹೈಕಮಾಂಡ್ಗೆ ವಿವರ ಮಾಹಿತಿ ನೀಡಿದ್ದಾರೆ ಎನ್ನಲಾಗಿದೆ. ಖುದ್ದು ಕೆಪಿಸಿಸಿ ಅಧ್ಯಕ್ಷ ಡಾ. ಪರಮೇಶ್ವರ್ ಅವರನ್ನು ಭೇಟಿ ಮಾಡಿ ಮಾಹಿತಿ ನೀಡಿರುವ ಲೋಕೇಶ್ ಮತ್ತು ತಂಡಕ್ಕೆ ರಾಜ್ಯಾಧ್ಯಕ್ಷರು ಧೈರ್ಯ ಹೇಳಿದ್ದಾರೆ ಎಂದು ತಿಳಿದುಬಂದಿದೆ. ಸೋಮವಾರಪೇಟೆ ಕೃಷಿ ಉತ್ಪನ್ನ ಮಾರುಕಟ್ಟೆ ಸಮಿತಿಯಲ್ಲಿ ಕೇವಲ 2 ಸ್ಥಾನಗಳನ್ನು ಗೆದ್ದಿದ್ದ ಕಾಂಗ್ರೆಸ್ಗೆ ಸರ್ಕಾರದ ನಾಮನಿರ್ದೇಶಿತ ಸದಸ್ಯರೂ ಸೇರಿದಂತೆ 5 ಸ್ಥಾನ ಲಭ್ಯವಿತ್ತು. ಚುನಾವಣೆಯಲ್ಲಿ ಜೆಡಿಎಸ್ ಹಾಗೂ ಬಿಜೆಪಿ ತಲಾ 5 ಸ್ಥಾನಗಳಿಸಿದ್ದರಿಂದ ಮತಗಳು ಸಮನಾಂತರವಾಗಿತ್ತು.
ಮಾರುಕಟ್ಟೆ ಸಮಿತಿಯ ಅಧಿಕಾರವನ್ನು ಜೆಡಿಎಸ್ಗೆ ಬಿಟ್ಟುಕೊಟ್ಟು ಉಪಾಧ್ಯಕ್ಷ ಸ್ಥಾನವನ್ನು ಕಾಂಗ್ರೆಸ್ ಇಟ್ಟುಕೊಳ್ಳುವ ಬಗ್ಗೆ ಜೆಡಿಎಸ್ ಮುಖಂಡ ಜೀವಿಜಯ ಅವರು ಜಿಲ್ಲಾ ಉಸ್ತುವಾರಿ ಸಚಿವರೊಂದಿಗೆ ಮಾತುಕತೆ ನಡೆಸಿದ್ದರು. ಇದಕ್ಕೆ ಉಸ್ತುವಾರಿ ಸಚಿವರು ಒಪ್ಪಿದ್ದರು ಎನ್ನಲಾಗಿದ್ದು, ಈ ಮಾಹಿತಿಯನ್ನು ಸ್ಥಳೀಯ ನಾಯಕರಿಗೆ ತಿಳಿಸಿರಲಿಲ್ಲ ಎನ್ನಲಾಗಿದೆ.
ಅಧ್ಯಕ್ಷರ ಆಯ್ಕೆ ದಿನ ಅಧಿಕಾರ ತಮ್ಮವರಿಗೆ ಸಿಗುತ್ತದೆ ಎಂಬ ಕನಸಿನಲ್ಲಿದ್ದ ಜೆಡಿಎಸ್ಗೆ ಅಂದು ಬೆಳಿಗ್ಗೆ 9.30ಕ್ಕೆ ಮರ್ಮಾಘಾತವಾಗುವ ಸುದ್ದಿ ಬಂದಿದೆ. ಕಾಂಗ್ರೆಸ್ನಿಂದ ದಲಿತ ವರ್ಗಕ್ಕೆ ಸೇರಿದ ರಮೇಶ್ ಅವರು ಅಧ್ಯಕ್ಷ ಸ್ಥಾನಕ್ಕೆ ನಾಮಪತ್ರ ಸಲ್ಲಿಸಿದ್ದರಿಂದ ಕಂಗೆಟ್ಟ ಜೆಡಿಎಸ್ ರಾಜಕೀಯ ತಂತ್ರಗಾರಿಕೆಯನ್ನು ಅರಿಯಲಾಗದೇ ಕೈ ಕೈ ಹಿಸುಕಿಕೊಂಡಿದೆ.
ಕಾಂಗ್ರೆಸ್ನ ರಮೇಶ್ ಅವರು ಅಧ್ಯಕ್ಷ ಸ್ಥಾನಕ್ಕೆ ಸ್ಪರ್ಧಿಸಿದರೆ ತಾವುಗಳು ಸ್ಪರ್ಧಿಸದೇ ದಲಿತ ವ್ಯಕ್ತಿಗೆ ಬೆಂಬಲ ನೀಡುವದಾಗಿ ಬಿಜೆಪಿ ನೀಡಿದ ಆಹ್ವಾನವನ್ನು ಸಹಜವಾಗಿ ಒಪ್ಪಿ, ಉಪಾಧ್ಯಕ್ಷ ಸ್ಥಾನವನ್ನು ಬಿಜೆಪಿಗೆ ಬಿಟ್ಟುಕೊಡುವ ರಾಜಕೀಯ ಲೆಕ್ಕಾಚಾರ ನಡೆದಿತ್ತು ಎನ್ನಲಾಗಿದೆ.
ಇಷ್ಟೆಲ್ಲಾ ನಡೆದರೂ ಸಹ ಯಾವದೂ ಅಧಿಕೃತವಾಗಿ ದಾಖಲೆಯಾಗಿಲ್ಲ. ಪಕ್ಷದ ಚಿಹ್ನೆ ರಹಿತವಾಗಿ ನಡೆದ ಚುನಾವಣೆ ಯಾದ್ದರಿಂದ ನೇರ ಹೊಂದಾಣಿಕೆ ಸಾಧ್ಯವಿಲ್ಲ. ಕಾಂಗ್ರೆಸ್ನವರೇ ಹೇಳುವಂತೆ ದಲಿತ ವ್ಯಕ್ತಿಯನ್ನು ಬೆಂಬಲಿಸಲಾಗಿದೆ. ಬಿಜೆಪಿಯೊಂದಿಗೆ ಯಾವದೇ ಒಳಒಪ್ಪಂದ ನಡೆದಿಲ್ಲ. ಇದೇ ಮಾತನ್ನು ಬಿಜೆಪಿ ಸಹ ಹೇಳುತ್ತಿದ್ದು, ಒಪ್ಪಂದದ ಮಾತನ್ನು ಸಾರಾಸಗಟಾಗಿ ತಿರಸ್ಕರಿಸಿದೆ.
ಇನ್ನು ಅಧಿಕಾರದ ಕನಸು ಕಾಣುತ್ತಿದ್ದ ಜೆಡಿಎಸ್ ಪಕ್ಷ ‘ಸಿಗದ ನೆಲ್ಲಿಕಾಯಿ ಹುಳಿ’ ಎಂಬಂತೆ ಸಹಜವಾಗಿ ಕೋಮುವಾದಿ ಪಕ್ಷದೊಂದಿಗೆ ಕಾಂಗ್ರೆಸ್ ಅನೈತಿಕ ಹೊಂದಾಣಿಕೆ ಮಾಡಿಕೊಂಡಿದೆ. ಇದರಿಂದಾಗಿ ನಮಗೆ ಅಧಿಕಾರ ತಪ್ಪಿದೆ ಎಂದು ಆರೋಪಿಸಿದ್ದೂ ಅಲ್ಲದೇ, ಕಾಂಗ್ರೆಸ್ ನಾಯಕರನ್ನು ಪಕ್ಷದಿಂದ ಉಚ್ಛಾಟಿಸಬೇಕು ಎಂದು ಜೆಡಿಎಸ್ನಲ್ಲಿದ್ದುಕೊಂಡೇ ಜೀವಿಜಯ ಆಗ್ರಹಿಸಿದ್ದಾರೆ.
ಕಳೆದ 19 ವರ್ಷಗಳಿಂದ ಕಾಂಗ್ರೆಸ್ ಪಕ್ಷದಲ್ಲಿ ಸಕ್ರಿಯರಾಗಿದ್ದು, ರಾಜಕೀಯವಾಗಿ ಇದೀಗ ಪ್ರವರ್ಧ ಮಾನಕ್ಕೆ ಬರುತ್ತಿರುವ ಕೆ.ಎಂ. ಲೋಕೇಶ್ ಅವರನ್ನು ವಿರೋಧಿಸುವ ಒಂದು ಗುಂಪಿಗೆ ಜೀವಿಜಯ ಅವರ ಮಾತು ಮೃತಸಂಜೀವಿನಿಯಂತೆ ಕಂಡಿದೆ. ನೇರವಾಗಿ ಕೆ.ಎಂ. ಲೋಕೇಶ್ ಅವರ ಕ್ರಮವನ್ನು ವಿರೋಧಿಸಲಾಗದ ಕಾಂಗ್ರೆಸ್ನ ಗುಂಪು ಹೈಕಮಾಂಡ್ಗೆ ದೂರು ನೀಡಿದೆ.
ಈ ಮಧ್ಯೆ ಜೆಡಿಎಸ್ನಿಂದ ಕಳೆದ ವಿಧಾನ ಸಭಾ ಚುನಾವಣೆಯಲ್ಲಿ ಸ್ಪರ್ಧಿಸಿ ಸೋಲನುಭವಿಸಿರುವ ಮಾಜೀ ಸಚಿವ ಬಿ.ಎ. ಜೀವಿಜಯ ಅವರನ್ನು ಈ ಬಾರಿ ಕಾಂಗ್ರೆಸ್ಗೆ ಕರೆತಂದು ಶತಾಯಗತಾಯ ಬಿಜೆಪಿಯನ್ನು ಸೋಲಿಸಲೇಬೇಕೆಂದು ಪಣತೊಟ್ಟಿರುವ ನಾಯಕರು, ಕಾಂಗ್ರೆಸ್ನಿಂದ ಸ್ಪರ್ಧಿಸಿ ಪರಾಜಿತಗೊಂಡಿರುವ ಲೋಕೇಶ್ ಅವರನ್ನು ಪಕ್ಷದಿಂದ ದೂರವಿಡಲು ಹವಣಿಸುತ್ತಿರುವ ವಿದ್ಯಮಾನ ಕಂಡುಬಂದಿದೆ. ಇದನ್ನು ಕಾಂಗ್ರೆಸ್ನ ನಾಯಕರೇ ಪುಷ್ಟೀಕರಿಸಿದ್ದಾರೆ.
ಕಳೆದ ಬಾರಿಯ ಚುನಾವಣೆಯಲ್ಲಿ ಸೋಲನುಭವಿಸಿದ ಕೆ.ಎಂ. ಲೋಕೇಶ್ ಅವರು ಈ ಬಾರಿಯ ಚುನಾವಣೆ ಯಲ್ಲೂ ಪಕ್ಷದಿಂದ ಟಿಕೆಟ್ ಗಿಟ್ಟಿಸಿ ಸ್ಪರ್ಧಿಸಲು ಶತಾಯಗತಾಯ ಪ್ರಯತ್ನ ನಡೆಸುತ್ತಿದ್ದಾರೆ. ಇಂತಹ ಸಂದರ್ಭದಲ್ಲಿ ಜೀವಿಜಯ ಅವರನ್ನು ಕಾಂಗ್ರೆಸ್ಗೆ ಕರೆತರುವದು ಕಷ್ಟಸಾಧ್ಯ. ಹೀಗಾಗಿಯೇ ಲೋಕೇಶ್ ಅವರನ್ನು ತೆರೆಮರೆಗೆ ಸರಿಸಿ ಜೀವಿಜಯ ಅವರ ಹಾದಿಯನ್ನು ಸುಗಮಗೊಳಿಸಲು ಕಾಂಗ್ರೆಸ್ನ ಕೆಲವರು ಪ್ರಯತ್ನಿ ಸುತ್ತಿದ್ದಾರೆ ಎಂಬ ಮಾಹಿತಿಯನ್ನು ಕಾಂಗ್ರೆಸ್ನ ಕೆಲ ಮುಖಂಡರೇ ‘ಶಕ್ತಿ’ಯೊಂದಿಗೆ ಹಂಚಿಕೊಂಡಿದ್ದಾರೆ.
ಜಿಲ್ಲಾ ಉಸ್ತುವಾರಿ ಸಚಿವರೂ ಸಹ ಆರ್ಎಂಸಿ ಅಧ್ಯಕ್ಷ ಸ್ಥಾನದ ಚುನಾವಣೆಯಲ್ಲಿ ನಡೆದ ರಾಜಕೀಯ ತಂತ್ರಗಾರಿಕೆಯಿಂದ ಅಸಹನೆಗೊಂಡಿ ದ್ದಾರೆ ಎನ್ನಲಾಗಿದ್ದು, ಇದನ್ನೇ ಬಂಡವಾಳ ಮಾಡಿಕೊಂಡಿ ರುವ ಆ ಪಕ್ಷದ ಕೆಲವರು ಭರ್ಜರಿ ರಾಜಕೀಯ ಚಟುವಟಿಕೆ ನಡೆಸುತ್ತಿದ್ದಾರೆ. ಆದರೆ ಕೆ.ಎಂ. ಲೋಕೇಶ್ ಅವರ ಪರವಾಗಿ ಸ್ಥಳೀಯ ಮುಖಂಡರು ನಿಂತಿದ್ದು, ಬೆಂಗಳೂರಿಗೆ ತೆರಳಿ ಲೋಕೇಶ್ ಪರ ಬ್ಯಾಟಿಂಗ್ ಮಾಡುತ್ತಿದ್ದಾರೆ.
ಈ ನಡುವೆ ಸೋಮವಾರಪೇಟೆ ಬ್ಲಾಕ್ ಕಾಂಗ್ರೆಸ್ ಅಧ್ಯಕ್ಷ ಕೆ.ಎಂ. ಲೋಕೇಶ್ ಅವರನ್ನು ಪಕ್ಷದಿಂದಲೇ ಅಮಾನತು ಮಾಡಲಾಗಿದೆ ಎಂಬ ಗುಸುಗುಸು ಕೆಲಕಾಲ ಸೋಮವಾರಪೇಟೆಯಲ್ಲಿ ಹರಿ ದಾಡಿದ್ದು, ಕಾಂಗ್ರೆಸ್ ಕಾರ್ಯಕರ್ತರು ಗೊಂದಲಕ್ಕೀ ಡಾಗಿದ್ದರು.
ಅಮಾನತು ವಿಷಯದ ಬಗ್ಗೆ ಕೆ.ಎಂ. ಲೋಕೇಶ್ ಅವರನ್ನು ಸಂಪರ್ಕಿಸಿದ ಸಂದರ್ಭ “ಅಂತಹ ವಿದ್ಯಮಾನಗಳೇನೂ ನಡೆದಿಲ್ಲ. ಪಕ್ಷದ ಸಂಘಟನೆ ವಿಚಾರವಾಗಿ ಕೆಪಿಸಿಸಿ ಅಧ್ಯಕ್ಷರನ್ನು ಭೇಟಿ ಮಾಡಲು ಬೆಂಗಳೂರಿಗೆ ತೆರಳಿದ್ದೇನೆ. ಆರ್ಎಂಸಿ ಚುನಾವಣೆಯಲ್ಲಿ ಆಡಳಿತ ಪಕ್ಷ ಕಾಂಗ್ರೆಸ್ ಅಧಿಕಾರ ಹಿಡಿದಿರುವದರಿಂದ ಕೆಲವರಿಗೆ ಸಹಿಸಿಕೊಳ್ಳಲು ಆಗುತ್ತಿಲ್ಲ. ಹೀಗಾಗಿ ಇಲ್ಲಸಲ್ಲದ ಹೇಳೆಕೆಗಳನ್ನು ನೀಡುತ್ತಿದ್ದಾರೆ. ಪಕ್ಷದಲ್ಲಿ ಯಾವದೇ ಗೊಂದಲಗಳಿಲ್ಲ” ಎಂದು ಹೇಳಿದರು.
ಒಟ್ಟಾರೆ ವಿಧಾನ ಸಭಾ ಚುನಾವಣೆಗೆ ಕೇವಲ 14 ತಿಂಗಳಷ್ಟೇ ಬಾಕಿಯಿರುವಾಗ ರಾಷ್ಟ್ರೀಯ ಪಕ್ಷ ಕಾಂಗ್ರೆಸ್ನಲ್ಲಿ ಭರ್ಜರಿ ವಿದ್ಯಮಾನಗಳು ನಡೆಯುತ್ತಿವೆ. ಪಕ್ಷದೊಳಗಿನ ನಾಯಕರ ಕಿತ್ತಾಟ ಯಾರಿಗೆ ವರವಾಗಿ ಪರಿಣಮಿಸಲಿದೆ ಎಂಬದನ್ನು ಕಾದುನೋಡಬೇಕಿದೆ.