ಮಡಿಕೇರಿ, ಫೆ. 14: ಕೊಡಗು ಜಿಲ್ಲೆಯ ಅಂತರ್ರಾಜ್ಯ ಗಡಿಭಾಗ ಗಳಲ್ಲಿರುವ ಚೆಕ್ ಪೋಸ್ಟ್ಗಳಿಗೆ ಓರ್ವ ಮುಖ್ಯ ಪೇದೆ ಹಾಗೂ ಓರ್ವ ಪೇದೆಯನ್ನು ಪ್ರತಿದಿನ ನಿಯೋಜನೆ ಮಾಡಲಾಗುತ್ತಿದೆ ಎಂದು ರಾಜ್ಯ ಗೃಹ ಸಚಿವ ಡಾ. ಜಿ. ಪರಮೇಶ್ವರ್ ಅವರು ವಿಧಾನ ಪರಿಷತ್ ಸದಸ್ಯ ಎಂ.ಪಿ. ಸುನಿಲ್ ಸುಬ್ರಮಣಿ ಅವರ ಪ್ರಶ್ನೆಗೆ ಲಿಖಿತ ಉತ್ತರ ನೀಡಿದ್ದಾರೆ.
ವಿಧಾನ ಪರಿಷತ್ನಲ್ಲಿ ಸದಸ್ಯ ಎಂ.ಪಿ. ಸುನಿಲ್ ಸುಬ್ರಮಣಿ ಅವರು ರಾಜ್ಯದ ಅಂತರ್ ರಾಜ್ಯ ಗಡಿಭಾಗದಲ್ಲಿರುವ ಪೊಲೀಸ್ ತಪಾಸಣಾ ಘಟಕಗಳ ಉದ್ದೇಶ, ಸಂಖ್ಯೆ ಹಾಗೂ ಸಿಬ್ಬಂದಿಗಳ ಮಾಹಿತಿ ನೀಡುವಂತೆ ಕೇಳಿದ ಪ್ರಶ್ನೆಗೆ ಲಿಖಿತ ಉತ್ತರ ನೀಡಿದರು.
ಅಕ್ರಮ ಮರ ಸಾಗಾಟ, ಕಳ್ಳಸಾಗಾಣಿಕೆ ಪತ್ತೆ ಹಚ್ಚುವದು, ನಕ್ಸಲೀಯರ ನುಸುಳುವಿಕೆಯನ್ನು ತಡೆಗಟ್ಟುವದು, ಹೆದ್ದಾರಿ ದರೋಡೆ ಮತ್ತು ಸುಲಿಗೆ ಪ್ರಕರಣಗಳ ತಡೆಗಟ್ಟುವಿಕೆ, ಅಕ್ರಮ ಮರಳು ಸಾಗಾಣಿಕೆ, ಅಕ್ರಮ ಬಿದಿರು ಸಾಗಾಟ, ಅಕ್ರಮ ಜಾನುವಾರು ಸಾಗಾಟ, ಅಕ್ರಮ ಮದ್ಯ ಸಾಗಾಟ, ಅಕ್ರಮ ಮಾದಕ ವಸ್ತು, ಅಕ್ರಮ ಶಸ್ತ್ರ ಸಾಗಾಟ, ಶ್ರೀಗಂಧ, ಬೀಟೆ, ತೇಗ ಇನ್ನಿತರ ಅರಣ್ಯ ಉತ್ಪನ್ನಗಳ ಕಳ್ಳ ಸಾಗಾಣಿಕೆ, ಆನೆಗಳನ್ನು ದಂತಕ್ಕಾಗಿ ಕೊಲ್ಲುವ ಬೇಟೆ ಇವುಗಳನ್ನು ತಡೆಗಟ್ಟುವದು ಹಾಗೂ ಇನ್ನಿತರ ಯಾವದೇ ರೀತಿಯ ಅಕ್ರಮ ಸಾಗಾಣಿಕೆಯನ್ನು ತಡೆಗಟ್ಟುವ ಉದ್ದೇಶದಿಂದ ಚೆಕ್ಪೋಸ್ಟ್ಗಳ ನಿರ್ಮಾಣ ಮಾಡಲಾಗಿದೆ.
ಕೊಡಗು ಜಿಲ್ಲೆಯಲ್ಲಿ ಕುಟ್ಟ, ಮಾಕುಟ್ಟಗಳಲ್ಲಿ ಪೊಲೀಸ್ ಚೆಕ್ ಪೋಸ್ಟ್ಗಳಿವೆ. ರಾಜ್ಯದಲ್ಲಿ ಒಟ್ಟು 39 ಅಂತರ್ ರಾಜ್ಯ ಪೊಲೀಸ್ ಚೆಕ್ಪೋಸ್ಟ್ಗಳಿದ್ದು, ಪ್ರತಿದಿನ 122 ಮಂದಿ ಪೊಲೀಸರನ್ನು ಕರ್ತವ್ಯಕ್ಕೆ ನಿಯೋಜನೆ ಮಾಡಲಾಗುತ್ತಿದೆ ಎಂದು ಗೃಹ ಸಚಿವರು ಉತ್ತರ ನೀಡಿದ್ದಾರೆ.