ಗೋಣಿಕೊಪ್ಪಲು, ಫೆ. 14: ಮಂಗಳೂರು ವಿಶ್ವ ವಿದ್ಯಾಲಯದ ಮಟ್ಟದ ಚಿರಿಯಪಂಡ ಕುಶಾಲಪ್ಪ ಸ್ಮಾರಕ ಹಾಕಿ ಟೂರ್ನಿ ತಾ. 17 ರಿಂದ ಮೂರು ದಿನಗಳ ಕಾಲ ಗೋಣಿಕೊಪ್ಪಲು ಕಾವೇರಿ ಕಾಲೇಜು ಮೈದಾನದಲ್ಲಿ ನಡೆಯಲಿದೆ ಎಂದು ಕಾವೇರಿ ಪದವಿ ಕಾಲೇಜು ಪ್ರಾಂಶುಪಾಲ ಪ್ರೊ. ಪಟ್ಟಡ ಕೆ. ಪೂವಣ್ಣ ತಿಳಿಸಿದ್ದಾರೆ. 34 ನೇ ವರ್ಷದ ಟೂರ್ನಿಯಲ್ಲಿ ಮಂಗಳೂರು ವಿಶ್ವ ವಿದ್ಯಾಲಯ 14 ಕಾಲೇಜು ತಂಡಗಳು ಪಾಲ್ಗೊಳ್ಳಲಿದೆ ಎಂದು ಪತ್ರಿಕಾಗೋಷ್ಠಿಯಲ್ಲಿ ತಿಳಿಸಿದರು. ಟೂರ್ನಿಯಲ್ಲಿ ಗೋಣಿಕೊಪ್ಪ ಕಾವೇರಿ ಕಾಲೇಜು, ಶನಿವಾರಸಂತೆ ಪ್ರಥಮ ದರ್ಜೆ ಕಾಲೇಜು, ಪೊನ್ನಂಪೇಟೆ ಸಾಯಿ ಶಂಖರ್, ನಾಪೋಕ್ಲು ಗುಡ್ ಶೆಫರ್ಡ್, ಕುಶಾಲನಗರ ಎಂಜಿಎಂ, ಪುತ್ತೂರು ಸೆಂಟ್ ಫಿಲೋಮಿನಾ, ವೀರಾಜಪೇಟೆ ಸೆಂಟ್ ಫಿಲೋಮಿನಾ, ಮಡಿಕೇರಿ ಫೀಲ್ಡ್ ಮಾರ್ಷಲ್ ಕಾರ್ಯಪ್ಪ ಕಾಲೇಜು, ಮೂರ್ನಾಡು ಪ್ರಥಮ ದರ್ಜೆ ಕಾಲೇಜು, ಮಂಗಳೂರು ಸೆಂಟ್ ಫಿಲೋಮಿನಸ್, ಕೊಣಾಜೆ, ವೀರಾಜಪೇಟೆ ಪ್ರಥಮ ದರ್ಜೆ ಹಾಗೂ ವೀರಾಜಪೇಟೆ ಕಾವೇರಿ ಕಾಲೇಜು ತಂಡಗಳು ಸ್ಪರ್ಧಿಸಲಿವೆ ಎಂದರು.
ಟೂರ್ನಿಯ ಅಂಗವಾಗಿ ಮಂಗಳೂರು ವಿವಿಯಲ್ಲಿ ಆಡಿರುವ ಹಳೆಯ ಆಟಗಾರರನ್ನು ಸನ್ಮಾನಿಸುವ ಮೂಲಕ ಅವರನ್ನು ಪರಿಚಯಿಸುವ ಕೆಲಸ ಮಾಡಲಾಗುವದು ಎಂದರು.
ತಾ. 17 ರಂದು ಬೆಳಿಗ್ಗೆ 10.30 ಕ್ಕೆ ನಡೆಯುವ ಉದ್ಘಾಟನಾ ಕಾರ್ಯಕ್ರಮದಲ್ಲಿ ಟ್ರೋಫಿ ದಾನಿ ಚಿರಿಯಪಂಡ ರಾಕೇಶ್ ಪೂವಯ್ಯ, ಕಾವೇರಿ ವಿದ್ಯಾಸಂಸ್ಥೆ ಅಧ್ಯಕ್ಷ ಸಿ.ಬಿ. ದೇವಯ್ಯ, ನಿರ್ದೇಶಕ ಕುಲ್ಲಚಂಡ ಬೋಪಣ್ಣ, ಮಂಗಳೂರು ವಿವಿ ದೈಹಿಕ ನಿರ್ದೇಶಕ ಡಾ. ಕಿಶೋರ್ ಪಾಲ್ಗೊಳ್ಳಲಿದ್ದಾರೆ.
ತಾ. 19 ರಂದು ನಡೆಯುವ ಬಹುಮಾನ ವಿತರಣೆ ಸಂದರ್ಭ ಪ್ರಾಂಶುಪಾಲ ಪಟ್ಟಡ ಪೂವಣ್ಣ, ಟ್ರೋಫಿ ದಾನಿ ಚಿರಿಯಪಂಡ ಬೇಬಿ ಪೂವಪ್ಪ, ಕೂರ್ಗ್ ಪಬ್ಲಿಕ್ ಶಾಲೆ ಟ್ರಸ್ಟಿ ಮಾಚಿಮಂಡ ತಿಮ್ಮಯ್ಯ, ಕ್ರೀಡಾಭಿಮಾನಿ ಚಿರಿಯಪಂಡ ರೋಶನ್ ಗಣಪತಿ, ಅಂತರರಾಷ್ಟ್ರೀಯ ಮಾಜಿ ಹಾಕಿ ಆಟಗಾರರುಗಳಾದ ಬುಟ್ಟಿಯಂಡ ಚೆಂಗಪ್ಪ, ಪಾರುವಂಗಡ ಗಿರಿ ಸೋಮಣ್ಣ, ಚೆಪ್ಪುಡೀರ ಕಾರ್ಯಪ್ಪ ಪಾಲ್ಗೊಳ್ಳಲಿದ್ದಾರೆ ಎಂದು ತಿಳಿಸಿದರು. ಗೋಷ್ಠಿಯಲ್ಲಿ ದೈಹಿಕ ನಿರ್ದೇಶಕರುಗಳಾದ ಡಾ. ಎಂ.ಎಂ. ದೇಚಮ್ಮ ಹಾಗೂ ಎಂ ಟಿ ಸಂತೋಷ್ ಉಪಸ್ಥಿತರಿದ್ದರು.