ಗೋಣಿಕೊಪ್ಪಲು, ಫೆ. 14: ಕೋಣಂಗೇರಿ ಗ್ರಾಮದಲ್ಲಿರುವ ಸುಮಾರು 45 ಎಕರೆ ದೇವರಕಾಡು ಜಾಗವನ್ನು ಸಂರಕ್ಷಿಸುವ ನಿಟ್ಟಿನಲ್ಲಿ ಅರಣ್ಯ ಇಲಾಖೆ ಕಾರ್ಯಪ್ರವೃತ್ತರಾಗ ಬೇಕು ಎಂದು ಅರಣ್ಯ ಅಭಿವೃದ್ಧಿ ನಿಗಮದ ಉಪಾಧ್ಯಕ್ಷೆ ಮಾಂಗೀರ ಪದ್ಮಿನಿ ಪೊನ್ನಪ್ಪ ಅಧಿಕಾರಿಗಳಿಗೆ ಸೂಚಿಸಿದರು.ಕೋಣಂಗೇರಿಯ ದೇವರಕಾಡು ಅರಣ್ಯ ಜಾಗಕ್ಕೆ ಭೇಟಿ ನೀಡಿ ಈ ಬಗ್ಗೆ ಅಧಿಕಾರಿಗಳೊಂದಿಗೆ ಸ್ಥಳದಲ್ಲಿ ಚರ್ಚಿಸಿ ಪರಿಸ್ಥಿತಿಯ ಚಿತ್ರಣ ಪಡೆದರು.
ಅಯ್ಯಪ್ಪ ದೇವರಕಾಡು ಜಾಗವನ್ನು ಸ್ಮಶಾನ ಮತ್ತು ಕಸ ವಿಲೇವಾರಿಗೆ ಬಳಸಿಕೊಳ್ಳುತ್ತಿದ್ದು ಇದಕ್ಕೆ ಅರಣ್ಯ ಇಲಾಖೆ ನಿರ್ಬಂಧ ವಿಧಿಸಬೇಕು ಎಂದು ಹುದಿಕೇರಿ ಕೊಡವ ಸಮಾಜ, ಅಯ್ಯಪ್ಪ ದೇವಾ ಸಮಿತಿ ಹಾಗೂ ಮಾದೇವ ದೇವಸ್ಥಾನ ಸಮಿತಿಯವರು ಪದ್ಮಿನಿ ಪೊನ್ನಪ್ಪ ಅವರ ಬಳಿ ಮನವಿ ಮಾಡಿಕೊಂಡರು.
ಇಲ್ಲಿನ ದೇವಾಲಯಗಳ ಅಭಿವೃದ್ಧಿಗೆ ಇಲಾಖೆಯಿಂದ ಅನುದಾನ ನೀಡಬೇಕು ಎಂದು ಈ ಸಂದರ್ಭ ಕೋರಿದರು.
ಈ ಸಂದರ್ಭ ಅರಣ್ಯ ಕೈಗಾರಿಕೆ ನಿಗಮ ನಿರ್ದೇಶಕ ಚೆಕ್ಕೇರ ವಾಸು ಕುಟ್ಟಪ್ಪ, ಕೊಡವ ಸಮಾಜ ಅಧ್ಯಕ್ಷ ಕೆ.ಸಿ ಸನ್ನು ಉತ್ತಪ್ಪ, ಕಾರ್ಯದರ್ಶಿ ಹರೀಶ್ ನಂಜಪ್ಪ, ಉಪಾಧ್ಯಕ್ಷ ಹೊಟ್ಟೆಂಗಡ ರಮೇಶ್ ಅಯ್ಯಪ್ಪ ದೇವಾಲಯ ಸಮಿತಿ ಅಧ್ಯಕ್ಷ ಅಜ್ಜಿಕುಟ್ಟಿರ ಗಿರೀಶ್, ಮಾದೇವ ದೇವಸ್ಥಾನ ಸಮಿತಿ ಅಧ್ಯಕ್ಷ ಕಿರುದಂಡ ಸಂಪತ್, ಪೊನ್ನಂಪೇಟೆ ಆರ್ಎಫ್ಓ ಉತ್ತಪ್ಪ ಇದ್ದರು.