ಗೋಣಿಕೊಪ್ಪಲು, ಫೆ. 14: ಆನೆ ದಂತ ಸಾಗಿಸುತ್ತಿದ್ದ ಆರೋಪದಡಿ ಮಾಲು ಸಮೇತ ಇಬ್ಬರು ಆರೋಪಿಗಳನ್ನು ವನ್ಯಜೀವಿ ವಿಭಾಗದಿಂದ ವಶಕ್ಕೆ ಪಡೆದಿರುವ ಘÀಟನೆ ನಡೆದಿದ್ದು, ಮತ್ತೊಬ್ಬ ಆರೋಪಿ ತಪ್ಪಿಸಿಕೊಂಡಿದ್ದಾನೆ.

ಕಾರ್ಯಾಚರಣೆ ತಂಡವು 2 ವಾಹನ ಹಾಗೂ ಎರಡು ಆನೆ ದಂತಗಳನ್ನು ವಶಕ್ಕೆ ಪಡೆದಿದ್ದು, ಚಾಮರಾಜನಗರದ ಜಿಲ್ಲೆಯ ನಂಜುಂಡಸ್ವಾಮಿ (33), ಹೆಚ್ ಡಿ ಕೋಟೆಯ ಮಹೇಶ್ (33) ಬಂಧಿತ ಆರೋಪಿಗಳು. ತೆರಾಲು ಗ್ರಾಮದ ಬೊಟ್ಟಂಗಡ ಮಂಜು (33) ತಲೆ ಮರೆಸಿಕೊಂಡಿದ್ದಾನೆ.

ಬಂಧಿತ ಆರೋಪಿಗಳನ್ನು ಪೊನ್ನಂಪೇಟೆ ನ್ಯಾಯಾಲಯಕ್ಕೆ ಹಾಜರು ಪಡಿಸಲಾಗಿದೆ. ಸೋಮವಾರ ರಾತ್ರಿ ವನ್ಯಜೀವಿ ವಿಭಾಗದ ಡಿಸಿಎಫ್ ಮುಕ್ಕಾಟೀರ ಜಯ ನೇತೃತ್ವದ ತಂಡ ಬಾಳೆಲೆ- ಕಾನೂರು ಮಾರ್ಗದಲ್ಲಿ ಕಾರ್ಯಾಚರಣೆ ನಡೆಸಿದ್ದಾರೆ. ಸ್ವಿಫ್ಟ್ ಕಾರ್‍ನಲ್ಲಿ ಸಾಗಿಸುತ್ತಿದ್ದ ಎರಡು ಆನೆ ದಂತಗಳನ್ನು ವಶಕ್ಕೆ ಪಡೆದಿದ್ದಾರೆ. ಕಾರ್‍ನಲ್ಲಿದ್ದ ಮೂವರು ಆರೋಪಿಗಳಲ್ಲಿ ಇಬ್ಬರು ಆರೋಪಿಗಳನ್ನು ವಶಕ್ಕೆ ಪಡೆದಿದ್ದು, ಮಂಜು ಎಂಬಾತ ಧಾಳಿ ಸಂದರ್ಭ ತಲೆ ಮರೆಸಿಕೊಂಡಿದ್ದಾನೆ.

ಕಾರ್‍ನಲ್ಲಿದ್ದ ಒಟ್ಟು 22 ಕೆ ಜಿ ತೂಕದ, 1.4 ಮೀಟರ್ ಉದ್ದದ ಎರಡು ದಂತ ವಶಕ್ಕೆ ಪಡೆಯಲಾಗಿದೆ. ಕಾರ್ಯಾಚರಣೆಯಲ್ಲಿ ವನ್ಯಜೀವಿ ಡಿಸಿಎಫ್ ಮುಕ್ಕಾಟೀರ ಜಯ, ಶ್ರೀಮಂಗಲ ವನ್ಯಜೀವಿ ಆರ್‍ಎಫ್‍ಓ ವೀರಣ್ಣ, ಸಿಬ್ಬಂದಿ ಮನೋಹರ್, ರಾಕೇಶ್, ಹರೀಶ್ ಹಾಗೂ ಸುರೇಶ್ ಪಾಲ್ಗೊಂಡಿದ್ದರು.