ಮಡಿಕೇರಿ, ಫೆ. 14: ಹೊದ್ದೂರು ಪಂಚಾಯಿತಿ ವ್ಯಾಪ್ತಿಗೆ ಸೇರಿದ ಪಾಲೇಮಾಡು ‘ಕಾನ್ಶಿರಾಂ’ ನಗರದಲ್ಲಿ ಕಳೆದ 10-12 ವರ್ಷಗಳಿಂದ 350 ಕ್ಕೂ ಅಧಿಕ ಕುಟುಂಬಗಳು ವಾಸಿಸುತ್ತಿದ್ದು, ಬಡ ಕುಟುಂಬಗಳ ಹಿತಾಸಕ್ತಿಯನ್ನು ಕಾಯುವ ಬದಲು ಕೆಲವು ಪಟ್ಟಭದ್ರ ಹಿತಾಸಕ್ತಿಗಳು ಕಿರುಕುಳ ನೀಡುತ್ತಿವೆ ಎಂದು ಆರೋಪಿಸಿರುವ ಬಹುಜನ ಸಮಾಜ ಪಕ್ಷದ ಜಿಲ್ಲಾಧ್ಯಕ್ಷ ಹೆಚ್.ಎಸ್. ಪ್ರೇಮ್‍ಕುಮಾರ್ ಉಳ್ಳವರಿಂದ ಒತ್ತುವರಿಯಾಗಿರುವ ಸರಕಾರಿ ಜಾಗವನ್ನು ಜಿಲ್ಲಾಡಳಿತ ವಶಪಡಿಸಿಕೊಂಡು ಕ್ರಿಕೆಟ್ ಕ್ರೀಡಾಂಗಣ ನಿರ್ಮಿಸಲಿ ಎಂದು ಒತ್ತಾಯಿಸಿದ್ದಾರೆ.
ಪತ್ರಿಕಾ ಹೇಳಿಕೆ ನೀಡಿರುವ ಅವರು ಅತ್ಯಂತ ಹಿಂದುಳಿ ದವರು, ಅಲ್ಪ ಸಂಖ್ಯಾತರು, ದಲಿತರು ಪಾಲೇಮಾಡಿನಲ್ಲಿ ವಾಸಮಾಡುತ್ತಿದ್ದು, ಇವರುಗಳಿಗೆ ಮಾನವೀಯ ನೆಲೆಯಲ್ಲೂ ಮೂಲಭೂತ ಸೌಲಭ್ಯಗಳನ್ನು ನೀಡಲು ಜನಪ್ರತಿನಿಧಿಗಳು ಹಾಗೂ ಅಧಿಕಾರಿ ವರ್ಗ ಪ್ರಯತ್ನಿಸಿಲ್ಲವೆಂದು ಆರೋಪಿಸಿದ್ದಾರೆ.
ಇದೀಗ ಹೊದ್ದೂರು ಪಂಚಾಯ್ತಿ ವ್ಯಾಪ್ತಿಗೆ ಸೇರಿದ 12 ಎಕರೆ ಸರ್ಕಾರಿ ಜಾಗವನ್ನು ಕಂದಾಯ ಇಲಾಖೆ ಮೂಲಕ ಗುರುತಿಸಿ ಕ್ರಿಕೆಟ್ ಕ್ರೀಡಾಂಗಣ ನಿರ್ಮಿಸಲು ಯೋಜನೆ ರೂಪಿಸ ಲಾಗಿದೆ. ಆದರೆ ಕ್ರೀಡಾಂಗಣಕ್ಕೆ ಜಾಗವನ್ನು ಗುರುತಿಸುವಾಗ ಕಂದಾಯ ಪರಿವೀಕ್ಷಕರು ಜಿಲ್ಲಾಡಳಿತಕ್ಕೆ ಸೂಕ್ತ ಮಾಹಿತಿಯನ್ನು ನೀಡದೆ ಕರ್ತವ್ಯ ಲೋಪ ಎಸಗಿದ್ದಾರೆ ಎಂದು ದೂರಿದ್ದಾರೆ.
ಮಡಿಕೇರಿ ತಾಲೂಕು ಕಂದಾಯ ಇಲಾಖೆ ಮಾಡಿದ ಅಚಾತುರ್ಯ ದಿಂದಾಗಿ ಸಮಸ್ಯೆಗಳು ಉದ್ಭವ ವಾಗಿದ್ದು, ಸ್ಥಳೀಯ ನಿವಾಸಿಗಳು ಹಾಗೂ ಕ್ರೀಡಾಭಿಮಾನಿಗಳು ಪರಸ್ಪರ ನಿಂದನೆಯಲ್ಲಿ ತೊಡಗುವಂತಹ ಪರಿಸ್ಥಿತಿ ನಿರ್ಮಾಣವಾಗಿದೆ ಸ್ಮಶಾನದÀ ಜಾಗವನ್ನು ಸ್ಮಶಾನಕ್ಕಾಗಿ ಬಿಟ್ಟುಕೊಟ್ಟು ಸ್ಥಳೀಯವಾಗಿ ಉಳ್ಳವರಿಂದ ಅತಿಕ್ರಮಣವಾಗಿರುವ ಜಾಗವನ್ನು ವಶಪಡಿಸಿಕೊಂಡು ಅದನ್ನು ಕ್ರೀಡಾಂಗಣ ನಿರ್ಮಾಣಕ್ಕೆ ಬಳಸಿಕೊಳ್ಳಬೇಕು ಮತ್ತು ಈ ನಿಟ್ಟಿನಲ್ಲಿ ಜಿಲ್ಲಾಡಳಿತ ಹಾಗೂ ಜಿಲ್ಲಾ ಉಸ್ತುವಾರಿ ಸಚಿವರು ಅಗತ್ಯ ಕ್ರಮಗಳನ್ನು ಕೈಗೊಳ್ಳಬೇಕೆಂದು ಪ್ರೇಮ್ ಕುಮಾರ್ ಆಗ್ರಹಿಸಿದ್ದಾರೆ.