ಗುಂಡಿನ ಕಾಳಗದಲ್ಲಿ ಮೂವರು ಸೈನಿಕರು ಹುತಾತ್ಮ

ಶ್ರೀನಗರ, ಫೆ. 14: ಜಮ್ಮು ಕಾಶ್ಮೀರದ ಬಮಡಿಪೆÇರ ಜಿಲ್ಲೆಯ ಹಾಜಿನ್ ಪ್ರದೇಶದ ಪಾರ್ ಮೊಹಲ್ಲಾ ಬಳಿ ಭದ್ರತಾ ಪಡೆಗಳು ಮತ್ತು ಭಯೋತ್ಪಾದಕರ ನಡುವೆ ಮಂಗಳವಾರ ಬೆಳಿಗ್ಗೆ ನಡೆದ ಗುಂಡಿನ ಕಾಳಗದಲ್ಲಿ ಮೂವರು ಸೈನಿಕರು ಮೃತಪಟ್ಟಿದ್ದಾರೆ. ‘13 ರಾಷ್ಟ್ರೀಯ ರೈಫಲ್ಸ್’ನ ಮೇಜರ್ ವಿಶಾಲ್ ಥಾಪಾ ಸೇರಿ ಐವರು ಸೈನಿಕರು ಗಾಯಗೊಂಡಿದ್ದಾರೆ. ಮೂವರು ಭಯೋತ್ಪಾದಕರು ಸೇರಿಕೊಂಡಿದ್ದಾರೆ ಎಂಬ ಸುಳಿವಿನ ಮೇಲೆ ಗ್ರಾಮವನ್ನು ಸುತ್ತುವರಿದ ಸೈನಿಕರು ಮತ್ತು ಜಮ್ಮು ಕಾಶ್ಮೀರ ಪೆÇಲೀಸರ ವಿಶೇಷ ಕಾರ್ಯಾಚರಣೆ ತಂಡದ ಸಿಬ್ಬಂದಿ ಮೇಲೆ ಭಯೋತ್ಪಾದಕರು ಗುಂಡು ಹಾರಿಸಿದಾಗ ಗುಂಡಿನ ಚಕಮಕಿ ಆರಂಭವಾಯಿತು ಎಂದು ಅಧಿಕೃತ ಮೂಲಗಳು ತಿಳಿಸಿವೆ.

ಮತ್ತೊಂದು ಗ್ರಾಮ ದತ್ತು ಪಡೆದ ಸಚಿನ್ ತೆಂಡೂಲ್ಕರ್

ಮುಂಬೈ, ಫೆ. 14: ಭಾರತದ ಕ್ರಿಕೆಟ್ ದಂತಕಥೆ ಹಾಗೂ ರಾಜ್ಯಸಭಾ ಸದಸ್ಯ ಸಚಿನ್ ತೆಂಡೂಲ್ಕರ್ ಅವರು ಸಂಸದರ ಆದರ್ಶ ಗ್ರಾಮ ಯೋಜನೆಯಡಿಯಲ್ಲಿ ಮತ್ತೊಂದು ಗ್ರಾಮವನ್ನು ದತ್ತು ತೆಗೆದುಕೊಂಡಿದ್ದಾರೆ. ಈ ಹಿಂದೆ ಆಂಧ್ರ ಪ್ರದೇಶದ ನೆಲ್ಲೂರು ಜಿಲ್ಲೆಯ ಪುಟ್ಟಮರಾಜು ಕಂಡ್ರಿಗಾ ಎಂಬ ಕುಗ್ರಾಮವನ್ನು ದತ್ತು ಪಡೆದಿದ್ದ ಸಚಿನ್ ತೆಂಡೂಲ್ಕರ್ ಅವರು ಹಳ್ಳಿಯಲ್ಲಿ ಮೂಲಭೂತ ಸೌಕರ್ಯಗಳನ್ನು ಸುಧಾರಿಸುವ ಮೂಲಕ ಇತರ ಸಂಸದರಿಗೆ ಆದರ್ಶವಾಗಿ ನಿಂತಿದ್ದರು. ಇದೀಗ ತಮ್ಮ ಖಾತೆಗೆ ಸಚಿನ್ ತೆಂಡೂಲ್ಕರ್ ಮತ್ತೊಂದು ಗ್ರಾಮವನ್ನು ಸೇರಿಸಿಕೊಂಡಿದ್ದು, ಈ ಬಾರಿ ತಮ್ಮ ತವರು ರಾಜ್ಯ ಮಹಾರಾಷ್ಟ್ರದ ಉಸ್ಮಾನಾಬಾದ್ ನ ಡೋಂಜಾ ಗ್ರಾಮವನ್ನು ದತ್ತು ಪಡೆದಿದ್ದಾರೆ. ಈ ಗ್ರಾಮಕ್ಕೆ ಈಗಾಗಲೇ ಸಚಿನ್ ತೆಂಡೂಲ್ಕರ್ ಅವರು ಎಂಪಿಲಾಡ್ ಯೋಜನೆಯಡಿಯಲ್ಲಿ ತಮ್ಮ ಸಂಸದರ ನಿಧಿಯಿಂದ ಸುಮಾರು ರೂ. 4 ಕೋಟಿ ಹಣವನ್ನು ಬಿಡುಗಡೆ ಮಾಡಿದ್ದಾರೆ. ಈ ಹಣದಿಂದ ಗ್ರಾಮದಲ್ಲಿ ಒಳಚರಂಡಿ ಪೈಪ್ ಲೈನ್ ಅಳವಡಿಕೆ, ಶುದ್ಧ ಕುಡಿಯುವ ನೀರಿನ ವ್ಯವಸ್ಥೆ ಮತ್ತು ಅವಸಾನದಡಿಯಲ್ಲಿರುವ ಶಾಲಾ ಕಟ್ಟಡಗಳ ಪುನರ್ ನಿರ್ಮಾಣ, ಹೊಸ ಶಾಲೆಗಳ ನಿರ್ಮಾಣ ಮತ್ತು ಕಾಂಕ್ರೀಟ್ ರಸ್ತೆ ನಿರ್ಮಾಣಕ್ಕೆ ಬಳಕೆ ಮಾಡಲಾಗುತ್ತದೆ ಎಂದು ಹೇಳಲಾಗಿದೆ.

ತ್ರಿವಳಿ ತಲಾಖ್ ಬಗ್ಗೆ ಕಾನೂನಿನಡಿಯಲ್ಲಿ ಪರಿಗಣನೆ

ನವದೆಹಲಿ, ಫೆ. 14: ಮುಸಲ್ಮಾನರಲ್ಲಿ ತ್ರಿವಳಿ ತಲಾಖ್, ನಿಕಾಹ್ ಹಲಾಲಾ ಮತ್ತು ಬಹುಪತ್ನಿತ್ವ ಪದ್ಧತಿಗಳ ಕಾನೂನು ಅಂಶಗಳನ್ನು ನಿರ್ಧರಿಸುವದಾಗಿ ಹೇಳಿರುವ ಸುಪ್ರೀಂ ಕೋರ್ಟ್, ಮುಸಲ್ಮಾನ ಕಾನೂನಿನಡಿಯಲ್ಲಿ ವಿಚ್ಛೇದನವನ್ನು ನ್ಯಾಯಾಲಯ ಮೇಲ್ವಿಚಾರಣೆ ನಡೆಸುವದಿಲ್ಲ ಎಂದು ಹೇಳಿದೆ. ನಮ್ಮ ಮೇಲೆ ಪರ್ಯಾಲೋಚನೆಗೆ ಬರುವ ವಿಷಯಗಳನ್ನು ನೀವು ಕುಳಿತು ಚರ್ಚೆ ಮಾಡಿ ತೀರ್ಮಾನಿಸಿ, ನ್ಯಾಯಾಲಯದ ಪರಿಗಣನೆಗೆ ಯಾವ ವಿಚಾರಗಳು ಬರುತ್ತವೆ ಎಂಬದನ್ನು ನಾವು ತೀರ್ಮಾನಿಸುತ್ತೇವೆ ಎಂದು ಮುಖ್ಯ ನ್ಯಾಯಮೂರ್ತಿಗಳಾದ ಜೆ.ಎಸ್. ಖೇಹರ್ ಮತ್ತು ಎನ್.ವಿ. ರಮಣ ಹಾಗೂ ಡಿ.ವೈ. ಚಂದ್ರಚೂಡ್ ಅವರಿದ್ದ ನ್ಯಾಯಪೀಠ ಹೇಳಿದೆ. ನಿರ್ದಿಷ್ಟ ಕೇಸಿನ ವಾಸ್ತವಿಕ ಅಂಶಗಳನ್ನು ವ್ಯವಹರಿಸುವದಿಲ್ಲ ಎಂದು ಸ್ಪಷ್ಟಪಡಿಸಿರುವ ನ್ಯಾಯಪೀಠ, ಕಾನೂನಾತ್ಮಕ ಅಂಶಗಳನ್ನು ನಿರ್ಧರಿಸುತ್ತದೆ ಎಂದು ತಿಳಿಸಿದೆ. ಮುಸ್ಲಿಂ ವೈಯಕ್ತಿಕ ಕಾನೂನಿನಡಿ ವಿಚ್ಛೇದನವನ್ನು ಎರಡೂ ಕೋರ್ಟಿನಡಿ ಅಥವಾ ನ್ಯಾಯಾಲಯ ಮೇಲ್ವಿಚಾರಣೆ ಸಾಂಸ್ಥಿಕ ಪಂಚಾಯಿತಿಯಡಿಯಲ್ಲಿ ಮೇಲ್ವಿಚಾರಣೆ ಮಾಡಬೇಕೆ ಎಂಬದನ್ನು ನೋಡಬೇಕಿದೆ ಎಂದು ಹೇಳಿದೆ.

ರಾಷ್ಟ್ರಗೀತೆ ಪ್ರಸಾರವಾಗುವಾಗ ನಿಲ್ಲಬೇಕಾಗಿಲ್ಲ: ಸುಪ್ರೀಂ ಕೋರ್ಟ್

ನವದೆಹಲಿ, ಫೆ. 14: ಚಲನಚಿತ್ರ ಅಥವಾ ಸಾಕ್ಷ್ಯಚಿತ್ರದ ಭಾಗವಾಗಿ ರಾಷ್ಟ್ರಗೀತೆ ಪ್ರಸಾರವಾಗುವಾಗ ವೀಕ್ಷಕರು ಎದ್ದು ನಿಲ್ಲುವ ಅವಶ್ಯಕತೆಯಿಲ್ಲ ಎಂದು ಸುಪ್ರೀಂ ಕೋರ್ಟ್ ಮಂಗಳವಾರ ಸ್ಪಷ್ಟಪಡಿಸಿದೆ. ದೇಶಾದ್ಯಂತ ಇರುವ ಎಲ್ಲಾ ಚಲನಚಿತ್ರ ಮಂದಿರಗಳಲ್ಲಿ ಚಿತ್ರ ಪ್ರಸಾರಕ್ಕೆ ಮುನ್ನ ರಾಷ್ಟ್ರಗೀತೆಯನ್ನು ಪ್ರಸಾರ ಮಾಡಬೇಕು ಎಂದು ಸುಪ್ರೀಂ ಕೋರ್ಟ್ ಕೆಲ ತಿಂಗಳ ಹಿಂದೆ ಆದೇಶ ನೀಡಿರುವ ಹಿನ್ನೆಲೆಯಲ್ಲಿ ಇಂದು ಈ ಸ್ಪಷ್ಟನೆ ನೀಡಿದೆ. ರಾಷ್ಟ್ರಗೀತೆ ಪ್ರಸಾರವಾಗುವ ವೇಳೆ ಸಭಾಂಗಣದಲ್ಲಿರುವ ಎಲ್ಲರೂ ಎದ್ದುನಿಂತು ಗೌರವ ಸೂಚಿಸಬೇಕು ಎಂದು ಕೂಡ ಹೇಳಿತ್ತು. ಇಂದು ಸ್ಪಷ್ಟನೆ ನೀಡಿರುವ ಸುಪ್ರೀಂ ಕೋರ್ಟ್, ರಾಷ್ಟ್ರಗೀತೆಯನ್ನು ಚಲನಚಿತ್ರ ಆರಂಭಕ್ಕೆ ಮುನ್ನ ಪ್ರಸಾರ ಮಾಡುವಾಗ ರಾಷ್ಟ್ರಧ್ವಜವನ್ನು ಪರದೆ ಮೇಲೆ ತೋರಿಸಬೇಕು, ಇಡೀ ರಾಷ್ಟ್ರಗೀತೆಯನ್ನು ಚಲನಚಿತ್ರ ಆರಂಭಕ್ಕೆ ಮುನ್ನ ಪ್ರಸಾರ ಮಾಡಬೇಕು ಮತ್ತು ರಾಷ್ಟ್ರಗೀತೆಯನ್ನು ಚಲನಚಿತ್ರದ ಮಧ್ಯದಲ್ಲಿ ಯಾವದೇ ವಾಣಿಜ್ಯ ಉಪಯೋಗಕ್ಕೆ ಪ್ರಸಾರ ಮಾಡಬಾರದು ಎಂದು ಹೇಳಿದೆ. ಜನರು ಕಡ್ಡಾಯವಾಗಿ ರಾಷ್ಟ್ರಗೀತೆಯನ್ನು ಹಾಡುವ ಅಗತ್ಯವಿಲ್ಲ ಎಂದು ಕೂಡ ಹೇಳಿದೆ. ನ್ಯಾಯಮೂರ್ತಿಗಳಾದ ದೀಪಕ್ ಮಿಶ್ರಾ ಮತ್ತು ಅಮಿತಾವ ರಾಯ್ ಅವರಿದ್ದ ನ್ಯಾಯಪೀಠ, ಜನರಿಗೆ ಇದು ನನ್ನ ದೇಶ, ನನ್ನ ತಾಯ್ನಾಡು ಎಂಬ ಭಾವನೆ ಮೂಡಬೇಕು. ರಾಷ್ಟ್ರಗೀತೆ ಮತ್ತು ರಾಷ್ಟ್ರಧ್ವಜಕ್ಕೆ ಗೌರವ ನೀಡುವದು ಈ ದೇಶದ ಪ್ರತಿಯೊಬ್ಬ ಪ್ರಜೆಯ ಕರ್ತವ್ಯ ಎಂದು ಹೇಳಿದೆ. ರಾಷ್ಟ್ರಗೀತೆಗೆ ಗೌರವ ನೀಡುವದೆಂದರೆ ರಾಷ್ಟ್ರದ ಗುರುತು, ಐಕ್ಯತೆ ಮತ್ತು ಸಾಂವಿಧಾನಿಕ ದೇಶಭಕ್ತಿಗೆ ಗೌರವ ನೀಡಿದಂತೆ ಎಂದು ನ್ಯಾಯಪೀಠ ಹೇಳಿದೆ.

ಕರ್ನಾಟಕದ ಪ್ರಗತಿಯನ್ನು ಶ್ಲಾಘಿಸಿದ ಸಚಿವ ಅರುಣ್ ಜೇಟ್ಲಿ

ಬೆಂಗಳೂರು, ಫೆ. 14: ಭಾರತದಲ್ಲೇ ಕರ್ನಾಟಕ ಅತ್ಯಂತ ಪ್ರಗತಿ ಪಥದಲ್ಲಿರುವ ರಾಜ್ಯವಾಗಿದ್ದು, ನಿರೀಕ್ಷೆಗೂ ಮೀರಿದ ಬಂಡವಾಳ ಆಕರ್ಷಿಸುವ ಸಾಮಥ್ರ್ಯ ಹೊಂದಿದೆ ಎಂದು ಕೇಂದ್ರ ವಿತ್ತ ಸಚಿವ ಅರುಣ್ ಜೇಟ್ಲಿ ಶಹಬಾಸ್‍ಗಿರಿ ನೀಡಿದ್ದಾರೆ. ವಾಣಿಜ್ಯ ಮತ್ತು ಕೈಗಾರಿಕಾ ಸಚಿವಾಲಯ ಭಾರತೀಯ ಕೈಗಾರಿಕೆಗಳ ಒಕ್ಕೂಟದ ಸಹಯೋಗದಲ್ಲಿ ಆಯೋಜಿಸಿದ್ದ “ಮೇಕ್ ಇನ್ ಇಂಡಿಯಾ’ ಉದ್ದಿಮೆದಾರರ ಎರಡು ದಿನಗಳ ಸಮ್ಮೇಳನಕ್ಕೆ ಚಾಲನೆ ನೀಡಿ ಮಾತನಾಡಿದ ಅವರು, ಎರಡು ದಶಕಗಳಿಂದಲೂ ಕರ್ನಾಟಕ ಸ್ಥಿರವಾದ ಪ್ರಗತಿ ಸಾಧಿಸುತ್ತಿದೆ. ಎಜ್ಯುಕೇಷನಲ್ ಹಬ್ ಎಂದು ಕರೆಸಿಕೊಂಡಿರುವ ಮೊದಲ ರಾಜ್ಯ ಕೂಡ ಕರ್ನಾಟಕ. ಇನ್ನೊಂದೆಡೆ, ರಾಜ್ಯವು ಆವಿಷ್ಕಾರದ ಕಡೆಗೆ ಮುಖ ಮಾಡಿದ್ದು, ತನ್ನ ಪ್ರಗತಿಪರ ನೀತಿ ಹಾಗೂ ವಿನೂತನ ಸಂಪನ್ಮೂಲದಿಂದಾಗಿ ಮತ್ತಷ್ಟು ಬಂಡವಾಳ ಹೂಡಿಕೆಗೆ ಅವಕಾಶವಿದೆ ಎಂದು ಹೇಳಿದರು.