ಸೋಮವಾರಪೇಟೆ, ಫೆ. 14: ದೇಶೀಯ ಕಬಡ್ಡಿ ಕ್ರೀಡೆಗೆ ಹೊಸ ಭಾಷ್ಯ ಬರೆದ ಪ್ರೋ ಕಬಡ್ಡಿಯಲ್ಲಿ ಭಾಗವಹಿಸಿರುವ ಖ್ಯಾತನಾಮ ಆಟಗಾರರು ಸೋಮವಾರಪೇಟೆಯಲ್ಲಿ ಬೀಡುಬಿಟ್ಟಿದ್ದಾರೆ. ಒಕ್ಕಲಿಗರ ಯುವ ವೇದಿಕೆ ವತಿಯಿಂದ ನಡೆಯುತ್ತಿರುವ ಹೊನಲು ಬೆಳಕಿನ ರಾಜ್ಯಮಟ್ಟದ ಕಬಡ್ಡಿ ಪಂದ್ಯಾಟದಲ್ಲಿ ಭಾಗವಹಿಸಲು ಆಗಮಿಸಿರುವ ಆಟಗಾರರಲ್ಲಿ ಹೆಚ್ಚಿನವರು ಪ್ರೋ ಕಬಡ್ಡಿಯಲ್ಲಿ ಮಿಂಚಿದವರಾಗಿದ್ದು, ಬಹುತೇಕ ಆಟಗಾರರು ವಿಜಯಾ ಬ್ಯಾಂಕ್ ತಂಡವನ್ನು ಪ್ರತಿನಿಧಿಸುತ್ತಿದ್ದಾರೆ.

ವಿಜಯಾ ಬ್ಯಾಂಕ್ ತಂಡವನ್ನು ಪ್ರತಿನಿಧಿಸುತ್ತಿರುವ ನಾಯಕ ಪ್ರಶಾಂತ್ ರೈ, ಕೀರ್ತಿಗೌಡ, ಸುಖೇಶ್ ಹೆಗ್ಡೆ, ರೋಹಿತ್ ಮಾರ್ಲ, ದಿಲೀಪ್, ಸೆಲ್ವರಾಜ್, ದಿವೀಶ್, ಇಸಾಕ್, ಸಚಿನ್, ಸತೀಶ್, ಸುನಿಲ್, ಅಲೆಕ್ಸ್ ಅವರುಗಳು ಇಲ್ಲಿನ ಕ್ಲಬ್‍ರಸ್ತೆಯಲ್ಲಿರುವ ವಿಜಯಾ ಬ್ಯಾಂಕ್ ಶಾಖೆಗೆ ಭೇಟಿ ನೀಡಿ, ಬ್ಯಾಂಕ್‍ನ ಸಿಬ್ಬಂದಿಗಳು ಹಾಗೂ ಗ್ರಾಹಕರೊಂದಿಗೆ ಆತ್ಮೀಯವಾಗಿ ಬೆರೆತರು.

ಕಳೆದ ಬಾರಿಯ ಪಂದ್ಯಾಟದಲ್ಲಿ ಪ್ರಥಮ ಸ್ಥಾನ ಪಡೆದು ಎಲ್ಲರ ಫೇವರೀಟ್ ತಂಡವಾಗಿ ಗುರುತಿಸಲ್ಪಟ್ಟಿರುವ ವಿಜಯಾ ಬ್ಯಾಂಕ್ ತಂಡದ ಸದಸ್ಯರು, ಸಾರ್ವಜನಿಕರೊಂದಿಗೆ ಬೆರೆತು ‘ಸೆಲ್ಫೀ’ ಫೋಟೋಗಳಿಗೆ ‘ಫೋಸ್’ ನೀಡಿದರು.

ತಂಡದ ಪ್ರಮುಖ ಆಟಗಾರ ರೋಹಿತ್ ಮಾರ್ಲ ಮಾತನಾಡಿ, ಗ್ರಾಮೀಣ ಭಾಗದಲ್ಲಿ ಪ್ರತಿಷ್ಠಿತ ತಂಡಗಳ ನಡುವೆ ಕಬಡ್ಡಿ ಪಂದ್ಯಾಟ ಆಯೋಜಿಸುತ್ತಿರುವದು ಶ್ಲಾಘನೀಯ. ಕಬಡ್ಡಿ ಕ್ರೀಡೆಯ ಬಗ್ಗೆ ಜಾಗೃತಿ ಮೂಡಿಸುವದರೊಂದಿಗೆ ಗ್ರಾಮೀಣ ಕ್ರೀಡೆಯ ಉಳಿವಿಗೆ ಶ್ರಮವಹಿಸುತ್ತಿರುವ ವೇದಿಕೆಯ ಸದಸ್ಯರ ಕಾರ್ಯ ಅಭಿನಂದನಾರ್ಹ ಎಂದರು.

ಪ್ರೋ ಕಬಡ್ಡಿಯಲ್ಲಿ ಕಂಡುಬಂದ ಪ್ರೋತ್ಸಾಹವನ್ನು ಮೀರಿಸುವಷ್ಟು ಸ್ಥಳೀಯ ಕಬಡ್ಡಿ ಪ್ರೇಮಿಗಳು ಆಟಗಾರರನ್ನು ಹುರಿದುಂಬಿಸುತ್ತಿದ್ದಾರೆ. ಪಂದ್ಯಾಟದಲ್ಲಿ ಭಾಗವಹಿಸುತ್ತಿರುವದು ಎಲ್ಲಾ ಆಟಗಾರರಿಗೂ ಖುಷಿ ತಂದಿದೆ ಎಂದು ಮುಕ್ತವಾಗಿ ಅಭಿಪ್ರಾಯ ಹಂಚಿಕೊಂಡರು. ಈ ಸಂದರ್ಭ ವಿಜಯಾ ಬ್ಯಾಂಕ್‍ನ ವ್ಯವಸ್ಥಾಪಕ ಚಂದ್ರಶೇಖರ್, ಪಿಗ್ಮಿ ಸಂಗ್ರಾಹಕ ಮೃತ್ಯುಂಜಯ ಸೇರಿದಂತೆ ಸಿಬ್ಬಂದಿಗಳು ಉಪಸ್ಥಿತರಿದ್ದರು.