“ಇನ್ನು ಹೋಗ್ತೀಯಾ ? ಹೋಗ್ತೀಯಾ ಇನ್ನು ?” ಅಮ್ಮನ ಜೋರು ಅರಚಾಟ. ಮಗ ಅದಕ್ಕಿಂತ ಜೋರಾಗಿ ಚೀರಾಡುತ್ತಿದ್ದುದನ್ನು ಕೇಳಿ ಅಲ್ಲಿಗೆ ಧಾವಿಸಿ ವಿಚಾರಿಸಿದಾಗ ಮಗ ಸುಮಾರು ಬಳೆ ಚೂರುಗಳನ್ನು ಜೇಬಿನಲ್ಲಿ ತುಂಬಿಕೊಂಡು ಬಂದು ಅಕ್ಕನಿಗೆ ಕೊಡುತ್ತಿದ್ದ. ಅದು ಎಲ್ಲಿಂದ ತಂದ ಎಂಬುದಕ್ಕೆ ಈ ರಂಪಾಟ. ಮೊನ್ನೆ ಸತ್ತು ಹೂತು ಹಾಕಿದ ಸಮಾಧಿಗೆ ಅವನ ಹೆಂಡ್ತಿಯ ಕೈಗಳಿಂದ ಹೊಡೆಸಿದ ಬಳೆ ಚೂರುಗಳವು. “ಸರಿ ಇನ್ನು ಅಜ್ಜಿ ಹೇಳಿದಂತೆ ಕೇಳಬೇಕು. ಅಲ್ಲೆಲ್ಲಾ ಹೋಗಬೇಡ” ಎಂದು ಮಗನನ್ನು ಗದರಿಸಿದೆ. ಅಕ್ಕ ಮಾಡುವ ಬಳೆ ಚೂರಿನ ಹಾರಕ್ಕೆ ಹಾಗೂ ಬಳೆಚೂರಿನಿಂದ ಆಡುವ ಆಟಕ್ಕಾಗಿ ಸಂಭ್ರಮದಿಂದ ಸಂಗ್ರಹಿಸಿ ತಂದು ಅಕ್ಕನಿಗೆ ನೀಡುತ್ತಾ ಸಂತೋಷ ಪಡಿಸಿದ್ದ. ಸದಾ ಜಗಳವಾಡಿಕೊಂಡಿರುವ ಅಕ್ಕ, ತಮ್ಮ ಬಳೆ ಚೂರಿನ ವಿಷಯದಲ್ಲಿ ಒಂದಾಗಿದ್ದರು. ಬಳೆ ಚೂರುಗಳನ್ನು ನೋಡುತ್ತಾ ನೆನಪುಗಳು ಬೀಸುವ ಗಾಳಿಯೊಡನೆ ಹಿಂದಕ್ಕಟ್ಟಿತು.

ಮುಂದೆ ಬರುವ ಹಬ್ಬಕ್ಕಾಗಿ ಎರಡು ಕೈಗಳಿಗೂ ಯಾವ ತರಹದ ಬಳೆ ತೊಡಬೇಕು. ಕೈ ತುಂಬಾ ತೊಡಬೇಕು ಎಂದು ಆಸೆಗಣ್ಣುಗಳಿಂದ ಕನಸು ಕಾಣುತ್ತಿದ್ದೆವು. ಕನಸುಗಳು ಎಷ್ಟು ಮುಂದುವರೆಯುತಿತ್ತೆಂದರೆ ಯಾರೊಂದಿಗಾದರೂ ಮಾತನಾಡಬೇಕಾದರೆ ಕೈಗಳಿಂದ ಮಾಡುವ ಸನ್ನೆಗಳು, ಅಭಿನಯಗಳು ಬಳೆಗಳಿಗೆ ವಿಶೇಷ ಗೌರವ ಕೊಡುತ್ತಿದ್ದವು. ತನ್ನಿಂದ ತಾನೇ ನೃತ್ಯವೂ ಬರುತಿತ್ತು.

ಆಗ ಬುಟ್ಟಿಯಲ್ಲಿ ಒಪ್ಪವಾಗಿ ಜೋಡಿಸಿದ ಬಳೆಗಳನ್ನು ಹೊತ್ತು ಬರುವವರನ್ನು ನೋಡುವುದೇ ಒಂದು ಮಜಾ. ಹಬ್ಬ ಹರಿದಿನಗಳಲ್ಲಿ ಮನೆಯಿಂದ ಮನೆಗೆ ಬರುವ ಬಳೆಗಾರರಿಂದ ಬಗೆ ಬಗೆಯ ಬಳೆ ತೊಡಿಸಿಕೊಳ್ಳುವುದರಲ್ಲಿ, ತೊಟ್ಟುಕೊಳ್ಳುವುದರಲ್ಲಿ ಅದೆಂತಹ ಸಂಭ್ರಮ ? ಬಳೆಗಾರ ಕೈಯನ್ನು ಅದುಮಿ, ಅದುಮಿ ಹದಗೊಳಿಸಿ ಅಳತೆಗೆ ಸರಿಯಾದ ಬಳೆ ತೊಡಿಸುತ್ತಿದ್ದ. ಮಕ್ಕಳಿಗೆಲ್ಲಾ ಆಗ ಪ್ಲಾಸ್ಟಿಕ್ ಬಳೆಯಾದರೆ, ದೊಡ್ಡವರೆಲ್ಲಾ ಗಾಜಿನ ಬಳೆ ತೊಟ್ಟುಕೊಳ್ಳುತ್ತಿದ್ದರು. ಅದನ್ನು ನೋಡುತ್ತಾ ನಾವೂ ದೊಡ್ಡವರಾದ ಮೇಲೆ ಗಾಜಿನ ಬಳೆ ತೊಡುವ ಕನಸು ಆವರಿಸುತಿತ್ತು. ಅದೆಷ್ಟೋ ಮೈಲಿಗಳು ಕ್ರಮಿಸಿ ಹಳ್ಳಿಗಳಿಗೆ ಬರುವ ಬಳೆಗಾರರಿಗೆ ಕಾಯಿ, ಬೆಲ್ಲ ಕೊಟ್ಟು ಸತ್ಕರಿಸಿ ಕಳುಹಿಸುವ ಸಂಪ್ರದಾಯವೂ ಚಾಲ್ತಿಯಲ್ಲಿತ್ತು. ಬಳೆ ತೊಡಿಸಿದ ನಂತರ ಬಳೆಯ ರಾಶಿಯನ್ನು ಮುಟ್ಟಿ ನಮಸ್ಕರಿಸುವ ಪೂಜನೀಯ ಪದ್ಧತಿಯು ಕೂಡಾ... ಬಳೆಗಾರ ಊರಿಗೆ ಕಾಲಿಟ್ಟನೆಂದರೆ ಸಾಕು ಮಕ್ಕಳ ದಂಡೆಲ್ಲಾ ಅವರ ಹಿಂದೆಯೇ. ಕುಡಿಯಲು ನೀರು ಕೊಡುವುದು, ಮನೆ ಮನೆಗೆ ದಾರಿ ತೋರಿಸುವುದು, ಒಟ್ಟಿನಲ್ಲಿ ಅವರಿಗೆ ಆಯಾಸವಾಗದಂತೆ ನೋಡಿಕೊಂಡು ಬೀಳ್ಕೊಡುತ್ತಿದ್ದೆವು. ಹೋಗುವ ಮೊದಲು ಮುಂದಿನ ಬಾರಿ ಬರುವಾಗ ಯಾವ ತರದ ಬಳೆಗಳನ್ನು ತರಬೇಕೆಂಬ ಅಪೇಕ್ಷೆಯ ಪಟ್ಟಿಯನ್ನು ಮರೆಯದೆ ಬಾರಿ ಬಾರಿ ನೀಡುತ್ತಿದ್ದೆವು.

ಯಾರ ಮನೆಯಲ್ಲಾದರೂ ಹೆಣ್ಣು ಮಗುವಾದರೆ ತೊಟ್ಟಿಲು ಶಾಸ್ತ್ರದಂದು ಅದರ ಕೈಗಳಿಗೆ ಪುಟಾಣಿ ಕರಿಬಳಿ ಹಾಕಿ ಅಲಂಕರಿಸುತ್ತಿದ್ದರು. ಅಂದರೆ ಪುಟ್ಟ ಕೈಗಳಿಂದಲೇ ಬಳೆಗಳು ಹೆಣ್ಣನ್ನು ಹಿಂಬಾಲಿಸಿ ರಾರಾಜಿಸುತ್ತವೆ ಎಂದು ಬಳೆಯ ಮಹತ್ವವನ್ನು ಅಜ್ಜಿ ಅದೆಷ್ಟೋ ಸಲ ಹೇಳಿದ್ದನ್ನೇ ಹೇಳುತ್ತಿರುತ್ತಿದ್ದರು.

ಬಳೆಯ ಬಗ್ಗೆ ಪ್ರಾಥಮಿಕ ಶಾಲೆಯಲ್ಲಿದ್ದ ಆಸಕ್ತಿ ಬರು ಬರುತ್ತಾ ಕಡಿಮೆಯಾಗಿ ಪ್ರೌಢಶಾಲೆಗೆ ಬರುತ್ತಲೇ ಆಗಿನ ಟ್ರೆಂಡ್‍ಗಳಿಗೆ ಮಾರು ಹೋಗುತ್ತಿದ್ದವು. ಆದರೂ ಬಳೆಯ ಆಸೆಯಂತೂ ಬಿಟ್ಟಿರಲಿಲ್ಲ ಎಂಬುದು ನಿಜ !

ಮದುವೆ ಮನೆಗಳಲ್ಲಿ ಬಳೆ ತೊಡಿಸುವ ಶಾಸ್ತ್ರ ಮಂಗಳಕರ ಶಾಸ್ತ್ರವಾಗಿ ಆಧ್ಯತೆ ಪಡೆಯುತ್ತದೆ. ಬಳೆಗಾರ ಮದು ಮಗಳಿಗೆ ಮಾತ್ರವಲ್ಲ ಅಲ್ಲಿ ನೆರೆದ ಬಂಧುಗಳಿಗೆಲ್ಲಾ ಬಳೆ ತೊಡಿಸುವುದು ಸಂಪ್ರದಾಯದ ಒಂದು ಭಾಗವಾಗಿದೆ. ಮಧುಮಂಚದಲ್ಲಿ ಪುಟಿ ಪುಟಿಯುವ ಪ್ರಣಯಕ್ಕೆ ಮದುಮಗಳ ಕೈಬಳೆ ಝಲ್ ಝಲ್ ನಿನಾದ ಆಕರ್ಷಣೆ ಮಾತ್ರವಲ್ಲ ಸಾಕ್ಷಿಯೂ ಕೂಡಾ.

ಗರ್ಭವತಿಗೆ ಮಾಡುವ ಸೀಮಂತ ಶಾಸ್ತ್ರಕ್ಕೂ ಮುಂಚೂಣಿಯಲ್ಲಿರುವುದು ಬಳೆಗಳೇ ಅಲ್ಲವೆ ? ತಾಯ್ತನದ ಲಕ್ಷಣಗಳನ್ನು ಮೈ ಮನಸಿಗೆ ಪೂಸಿ ಮಂಗಳಕರ ಸ್ಥಾನವನ್ನು ಎರಚುವುದು ಕೂಡಾ ಬಳೆಗಳೆ. ಶಾಸ್ತ್ರದಲ್ಲಿ ಇಡುವ ಹೂವು, ತಿಂಡಿಗಳ ರಾಶಿಯ ಜೊತೆ ಬಳೆಯ ರಾಶಿಯು ಕಣ್ಮನ ಸೆಳೆದು ಬಳೆ ತೊಟ್ಟ ಕೈಗಳೆಲ್ಲಾ ಸೇರಿ ಮಂಗಳಕರ ಪ್ರಸವಕ್ಕೆ ಶುಭ ಹಾರೈಸುತ್ತಾರೆ.

ಸಿನಿಮಾಗಳಲ್ಲಿ ಹೀರೋಯಿನ್‍ಗಳು ಸೀರೆಗಳಿಗೆ ಮ್ಯಾಚಿಂಗ್ ಬಳೆತೊಟ್ಟು ಅವರ ಹಾಡು, ನೃತ್ಯಗಳಲ್ಲಿ ಬಳೆಗಳು ರಾರಾಜಿಸುವುದನ್ನು ಕಣ್ತುಂಬಾ ನೋಡುತ್ತೇವೆ. ಮಾತ್ರವಲ್ಲ ಅದೇ ರೀತಿ ಮ್ಯಾಚಿಂಗ್ ಬಳೆ ತೊಟ್ಟು ಅನುಕರಿಸುತ್ತೇವೆ ಕೂಡಾ. ಕೆಲವೊಮ್ಮೆ ಎಷ್ಟೇ ಅಲಂಕಾರ ಮಾಡಿಕೊಂಡರೂ ಉಡುಗೆಗೆ ಒಪ್ಪುವ ಬಳೆ ತೊಡದಿದ್ದರೆ ಅಲಂಕಾರ ಪೂರ್ಣಗೊಳ್ಳುವುದೇ ಇಲ್ಲ.

ಹಿಂದೆ ವರ್ಷದಲ್ಲಿ ಹಬ್ಬಕ್ಕೆ ಮಾತ್ರ ಬಳೆ ತೊಟ್ಟು ಅದೆಷ್ಟೇ ಬಣ್ಣ ಕಳೆದುಕೊಂಡರೂ ಒಡೆದು ಹೋಗದ ಹಾಗೆ ಕಾಯುತ್ತಿದ್ದೆವು. ಇಂದು ಮನೆ ಮನೆಗೆ ಬಳೆಗಾರ ಬರದಿದ್ದರೂ ಗಲ್ಲಿ ಗಲ್ಲಿಯಲ್ಲೂ ಬಳೆಯ ಅಂಗಡಿ ಸಾಲುಗಳಿವೆ. ಬಳೆ ತೊಟ್ಟುಕೊಳ್ಳುವ ಕೈಗಳು ಕಡಿಮೆಯಷ್ಟೆ. ಬದಲಾಗುವ ಟ್ರೆಂಡ್‍ಗಳು ಬಳೆಗಳನ್ನು ಬದಿಗೊತ್ತುತ್ತಿದೆಯೇ ? ಕೇವಲ ಗೌರಿ ಹಬ್ಬ, ಪೂಜೆಗಳು, ಸೀಮಂತಗಳು, ಅರಿಶಿಣ ಕುಂಕುಮ ಶಾಸ್ತ್ರಗಳಿಗೆ ಮಾತ್ರ ಮೀಸಲಾಗುತ್ತಿದೆಯೇ ಬಳೆಗಳು ? ನಾವು ಅದೆಷ್ಟೇ ಬೆಲೆ ಬಾಳುವ ಒಡವೆ ತೊಟ್ಟರೂ ಹಸಿರು, ಕರಿಬಳೆಗಳಿಗೆ ಸದಾ ಕಾಲ ಗೌರವ ಇದ್ದೇ ಇದೆ.

ದೇವಾಲಯದಲ್ಲ ದೇವಿ ಪೂಜೆಗಳಲ್ಲಿ ಬಳೆಗಳಿಗೆ ಪೂಜನೀಯ ಸ್ಥಾನ ದೊರೆತಿದೆ. ಮದುವೆಯಾಗದವರು, ಮುತ್ತೈದೆ ಸ್ಥಾನಕ್ಕೆ, ಬಂಜೆಯಾದವರು, ಮಡಿಲು ತುಂಬಲು ಬಳೆಗಳನ್ನು ಹರಕೆ ಹೊತ್ತು ತಮ್ಮ ಇಷ್ಟಾರ್ಥ ನೆರವೇರಿದಾಗ ಬಳೆಗಳನ್ನು ಹರಕೆಯಾಗಿ ಅರ್ಪಿಸುವುದನ್ನು ನಾವೆಲ್ಲಾ ನೋಡುತ್ತೇವೆ. ಗೌರಿಹಬ್ಬಕ್ಕೆ ತವರು ಮನೆಯ ಬಾಗಿನದಲ್ಲಿ ಬಳೆಯ ಪ್ರಾಧಾನ್ಯತೆಯನ್ನು ನಾವೆಲ್ಲರೂ ಬಲ್ಲೆವು.

ಹೆಂಡತಿಯನ್ನು ರಮಿಸಲು ಗಂಡ ತರುವ ಒಂದು ಮೊಳ ಹೂವು ಇಂದು ಡಜನ್ ಬಳೆ ಮತ್ತೆಲ್ಲವನ್ನು ಮೀರಿಸುವ ಪ್ರೇಮ ಕಾಣಿಕೆ ಎಂಬುದು ಅದೆಷ್ಟು ಸತ್ಯ ? ಬಳೆ ಧರಿಸಿದ ಕೈಗಳ ಸೌಂದರ್ಯವೂ ತುಸು ಹೆಚ್ಚೇ ನಿಜ ! ಅದರ ನಿನಾದಕ್ಕೂ ಅಷ್ಟೇ ಆಕರ್ಷಣೆಯಿದೆ. ಆದರೆ ಜನ್ಮನಾ ನಮ್ಮೊಡನೆ ಬಂದ ಈ ಬಳುವಳಿಯನ್ನು ಪತಿಯ ಸಮಾದಿಯ ಮೇಲೆ ಒಡೆದು ಚೂರು ಚೂರಾಗಿಸುವುದು ಎಂತÀಹ ಅಮಾನವೀಯತೆ ? ಮೊದಲೆ ನೊಂದಿದ್ದ ಮನಸ್ಸನ್ನು ಮತ್ತಷ್ಟು ಘಾಸಿಗೊಳಿಸುವ ಈ ಪರಿಯನ್ನು ಇಂದಿಗೂ ಅದೆಷ್ಟು ನೋಡುತ್ತಾ ಮೂಕ ಸಾಕ್ಷಿಯಾಗುತ್ತಿದ್ದೇವೆ ! ಇದಕ್ಕೆ ಕಾರಣ ನಮಗೆ ಅಂಟಿಕೊಂಡಿರುವ ಮೂಡಬಂಬಿಕೆ ತಾನೇ ? ಎಲ್ಲಕ್ಕಿಂತ ದೊಡ್ಡ ಕಾರಣ ಸೂಕ್ತ ಶಿಕ್ಷಣದ ಕೊರತೆಯೆಂಬುದು ಎಂತಹವರಿಗೂ ವೇದ್ಯವಾಗವೇಕು.

ಡಾ. ರಾಜ್‍ಕುಮಾರ್ ಧರ್ಮಪತ್ನಿ ಪಾರ್ವತಮ್ಮ ರಾಜ್‍ಕುಮಾರ್ ಇಂದಿಗೂ ಅಗಲ ಹಣೆಬೊಟ್ಟಿನಲ್ಲೇ ಕಂಗೊಳಿಸುತ್ತಾರೆ. ಅವರ ಮನಸ್ಸಿನಲ್ಲಿ ಇಂದಿಗೂ ಎಂದಿಗೂ ರಾಜ್ ನೆನಪು ಬದುಕಿದೆ ಎಂಬುದಕ್ಕೆ ಅದೇ ಸಾಕ್ಷಿ. ಅಂತಹ ದೊಡ್ಡ ಮಾದರಿಯೇ ನಮ್ಮ ಮುಂದೆ ಆದರ್ಶವಾಗಿರು ವಾಗ ಸಕಾರಾತ್ಮಕ ಚಿಂತನೆ ನಮ್ಮಲ್ಲಿ ಇಣುಕುವುದಿಲ್ಲವೇಕೆ ? ಮಂಗಳಕರವಾದ ಬಳೆಯು ತನ್ನ ಸ್ಥಾನಮಾನವನ್ನು ಉಳಿಸಿಕೊಂಡು ಎಲ್ಲಾ ನಾರೀಮಣಿಗಳ ಕೈಗಳನ್ನು ಕೆಂಪು, ಹಸಿರು, ಕಪ್ಪು, ಗಿಲಿಟ್, ಸಾದಾ, ಮಿಂಚು ಮಿಂಚು ಬಳೆಗಳೆಲ್ಲಾ ಕೈ ತುಂಬಿ ಝಲ್ ಝಲ್ ಸದ್ದು ನಿನಾದಿಸುತ್ತಲೇ ಇರಲಿ... ಅದು ಅಕ್ಷಯ ಪಾತ್ರೆಯಂತೆ ಪ್ರತಿ ಹೆಣ್ಣನ್ನು ಆವರಿಸಲಿ ಎಂದು ಆಶಿಸೋಣವೇ...?